Site icon Vistara News

Ajit Rai : ಅಜಿತ್‌ ರೈಯ 1368 ನಂಬರ್‌ ರಹಸ್ಯ ಬಯಲು; ಅವನ ಅಕ್ರಮಗಳ ಹಿಂದಿರುವ ಶಕ್ತಿ ಯಾವುದು?

ajit Rai Number

ಬೆಂಗಳೂರು: ಕೆ.ಆರ್‌. ಪುರಂ ತಹಸೀಲ್ದಾರ್‌ (Tahasildar) ಆಗಿದ್ದು ಬ್ರಹ್ಮಾಂಡ ಭ್ರಷ್ಟಾಚಾರದ (Corruption Case) ಮೂಲಕ ಸಾವಿರಾರು ಕೋಟಿ ರೂ. ಮೌಲ್ಯದ ನಗ, ನಗದು, ಐಷಾರಾಮಿ ವಾಹನ, ಭೂಮಿ ಸಂಪಾದನೆ ಮಾಡಿದ್ದ ಅಜಿತ್‌ ರೈಗೆ (Ajit Rai) 1368 ಎಂಬುದು ಅತ್ಯಂತ ಪ್ರಿಯವಾದ ನಂಬರ್‌ (Lucky number) ಎನ್ನುವುದು ಈಗಾಗಲೇ ಬೆಳಕಿಗೆ ಬಂದಿದೆ.

ಲೋಕಾಯುಕ್ತ ಅಧಿಕಾರಿಗಳು (Lokayukta Raid) ಅಜಿತ್‌ ರೈ ಮತ್ತು ಅವನ ಆಪ್ತರಿಗೆ ಸೇರಿದ ಸಹಕಾರ ನಗರ, ಕೆ.ಆರ್.‌ ಪುರಂ, ಚಂದ್ರಾಲೇಔಟ್‌, ಪುತ್ತೂರು ಸೇರಿದಂತೆ 11 ಕಡೆಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದಾಗ 11ಕ್ಕೂ ಅಧಿಕ ಐಷಾರಾಮಿ ಕಾರುಗಳು ಪತ್ತೆಯಾಗಿದ್ದವು. ಅವುಗಳ ಜತೆಗೆ ಹಲವಾರು ಹೈಎಂಡ್‌ ಬೈಕ್‌ಗಳೂ ಸಾಕಷ್ಟಿದ್ದವು. ಈ ವಾಹನಗಳ ವಿಶೇಷತೆ ಏನೆಂದರೆ ಪ್ರತಿಯೊಂದು ವಾಹನದ ನೋಂದಣಿ ಸಂಖ್ಯೆಯೂ (Registration Number) 1368 ಆಗಿತ್ತು. ಈ ಸಂಖ್ಯೆಯನ್ನು ಪಡೆಯುವುದಕ್ಕಾಗಿಯೇ ಆತ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದ ಎನ್ನಲಾಗಿದೆ.

ವಾಹನಗಳ ಸಂಖೆಯಷ್ಟೇ ಅಲ್ಲ, ಅವನ ಮೊಬೈಲ್‌ ನಂಬರ್‌, ಅದರ ಪಾಸ್‌ವರ್ಡ್‌ ಕೂಡಾ 1368. ಸಾಲದ್ದಕ್ಕೆ ಎಟಿಎಂ ಪಿನ್‌ ನಂಬರ್‌ ಕೂಡಾ ಇದೇ ಆಗಿತ್ತು! ಇದನ್ನು ಗಮನಿಸಿದ ಲೋಕಾಯುಕ್ತ ಪೊಲೀಸರಿಗೆ ಅಚ್ಚರಿಯಾಗಿತ್ತು. ಈ ಸಂಖ್ಯೆಗಳ ಹಿಂದೆ ಕೂಡಾ ಯಾವುದಾದರೂ ನಿಗೂಢತೆ ಇರಬೇಕು ಎಂದು ಹುಡುಕಿ ಹೊರಟ ಅವರಿಗೆ ಅವನ ಸಂಖ್ಯಾ ಶಾಸ್ತ್ರದ ಮೇಲಿನ ನಂಬಿಕೆಯ ವಿಚಾರಗಳು ತಿಳಿದುಬಂದವು.

ಅಜಿತ್ ರೈ ಬಳಿ ಸಾಕಷ್ಟು ಮೊಬೈಲ್‌ಗಳು ಮತ್ತು ಕನಿಷ್ಠ ಹದಿನೈದು ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಸಂಖ್ಯಾ ಶಾಸ್ತ್ರ, ಜ್ಯೋತಿಷ್ಯವನ್ನು ಅತಿಯಾಗಿ ನಂಬುತ್ತಿದ್ದ ಅಜಿತ್‌ ರೈಯ ಹದಿನೈದು ಪೋನ್ ನಂಬರ್ ಗಳಲ್ಲಿ ಹತ್ತು ಸಿಮ್ ಗಳ ಕೊನೆಯ ನಂಬರ್ 1368!

ಈ ನಂಬರನ್ನೇ ಆತ ಯಾಕೆ ಆರಿಸಿಕೊಳ್ಳುತ್ತಿರುವುದರ ಹಿಂದೆ ಒಂದು ರಹಸ್ಯವಿದೆ. 1368 ನಂಬರ್‌ನ ಒಂದೊಂದು ಅಂಕೆಯನ್ನು ಕೂಡಿದರೆ (1+3+6+8) ಕೂಡಿದರೆ 18 ಅಂಕೆ ಸಿಗುತ್ತದೆ. 18ನ್ನು ಮತ್ತೆ ಕೂಡಿದರೆ (1+8) ಕೊನೆಗೆ 9 ನಂಬರ್ ಬರುತ್ತದೆ. 9 ನಂಬರ್‌ ತನ್ನ ಲಕ್ಕಿ ನಂಬರ್‌ ಎಂದು ಆತ ನಂಬಿದ್ದ. ಇದರ ಜತೆಗೆ 1368ನ ಮೊದಲ ಮತ್ತು ಕೊನೆಯ ಅಂಕೆ (1+8)ಗಳನ್ನು ಕೂಡಿದರೂ 9 ಆಗುತ್ತದೆ. ನಡುವಿನ ಎರಡು ಅಂಕೆಗಳನ್ನು (6+3) ಕೂಡಿದರೂ 9 ಸಿಗುತ್ತದೆ. ಹೀಗಾಗಿ ಸರ್ವ ವಿಧದಲ್ಲೂ ಇದು ಲಕ್ಕಿ ಎನ್ನುವುದು ಅವನ ನಂಬಿಕೆಯಾಗಿತ್ತು. ಹಾಗಾಗಿ ಇದೇ ನಂಬರ್‌ನ ವಾಹನ, ಮೊಬೈಲ್‌ ಸಿಮ್‌ಗಳನ್ನು ಕೊಳ್ಳುತ್ತಿದ್ದನಂತೆ.

ಅವನಿಗೆ ಬೆಂಬಲ ನೀಡುತ್ತಿರುವವರು ಯಾರು?

ಅಜಿತ್ ರೈ ಬಳಿ ಲೋಕಾಯುಕ್ತ ಅಧಿಕಾರಿಗಳೆ ಊಹೆ ಮಾಡಲಾಗದಷ್ಟು ಬೇನಾಮಿ ಆಸ್ತಿ ಪತ್ತೆಯಾಗುತ್ತಿದೆ. ಹೀಗಾಗಿಯೇ ಲೋಕಾಯುಕ್ತ ಪೊಲೀಸರು ಇದರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಆಗಿದ್ದು, ಬೇನಾಮಿ ಆಸ್ತಿಯ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ.

ವಿವಾದಿತ ಭೂಮಿಗಳನ್ನ ಪಡೆದು, ಲೇಔಟ್ ಗಳ ನಿರ್ಮಾಣ ಮಾಡುವುದು ಅಜಿತ್‌ ರೈ ದುಡ್ಡು ಮಾಡಲು ಕಂಡುಕೊಂಡಿರುವ ಪ್ರಮುಖ ದಾರಿ. ಭೂ ಮಾಫಿಯಾದಲ್ಲಿ ಭಾರಿ ಸದ್ದು ಮಾಡಿದ್ದ ಅಜಿತ್ ರೈ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಮೂರು ಪಟ್ಟು ಬೆಲೆಗೆ ಮಾರುತ್ತಿದ್ದ.

ತಹಸೀಲ್ದಾರ್‌ ಆಗಿದ್ದುದರಿಂದ ಆತನಿಗೆ ಎಲ್ಲೆಲ್ಲಿ ಭೂವಿವಾದಗಳಿವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ತನ್ನ ವ್ಯಾಪ್ತಿ ಮಾತ್ರವಲ್ಲ, ಹತ್ತಿರದ ಉಳಿದ ಪ್ರದೇಶಗಳ ಮಾಹಿತಿಯೂ ಅವನ್ನಲ್ಲಿತ್ತು. ವ್ಯಾಜ್ಯ ಇರುವ ಭೂಮಿಗಳನ್ನು ಗುರುತಿಸಿ ಅಲ್ಲಿಗೆ ತನ್ನ ಜನರನ್ನು ಕಳುಹಿಸಿ ಆ ಭೂಮಿಯನ್ನು ಕೆಲವೊಮ್ಮೆ ಮನವೊಲಿಸಿ, ಇನ್ನು ಕೆಲವೊಮ್ಮೆ ದಬಾಯಿಸಿ ಖರೀದಿ ಮಾಡಿಸುತ್ತಿದ್ದ!

ಆತನ ಈ ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಮಾಜಿ ಡಾನ್‌ ಒಬ್ಬ ಸಹಕಾರ ನೀಡುತ್ತಿದ್ದಾನೆ ಎಂಬ ಮಾಹಿತಿ ಇದೆ. ವಿಚಾರಣೆಯ ಸಂದರ್ಭದಲ್ಲಿ ಅದು ಬೆಳಕಿಗೆ ಬರುವ ಸಾಧ್ಯತೆಗಳಿವೆ.

ಅಜಿತ್‌ ರೈ ಬೆನ್ನಟ್ಟಿದ ಆ ಶಾಸಕ ಯಾರು?

ಅಜಿತ್‌ ರೈಯ ಭೂದಾಹದಿಂದ ಆ ಭಾಗದ ರಾಜಕಾರಣಿಗಳೇ ಬೆಚ್ಚಿಬಿದ್ದಿದ್ದರು. ಆದರೆ, ದಾಖಲೆಬದ್ಧವಾಗಿ ಭೂ ವರ್ಗಾವಣೆ ಬೇನಾಮಿಯಾಗಿ ನಡೆಯುತ್ತಿದ್ದುದರಿಂದ ಯಾರಿಗೂ ಅದನ್ನು ಪ್ರಶ್ನಿಸುವುದು ಕಷ್ಟವಾಗಿತ್ತು. ಅಜಿತ್‌ ರೈ ದಬ್ಬಾಳಿಕೆಗೆ ರೋಸಿ ಹೋಗಿದ್ದ ಸ್ಥಳೀಯ ಜನರು ಅಜಿತ್ ರೈ ಮೇಲೆ ಸಾಕಷ್ಟು ದೂರುಗಳನ್ನ ನೀಡಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಮಾಜಿ ಡಾನ್‌ ಒಬ್ಬರ ಸಂಪರ್ಕದಲ್ಲಿದ್ದುಕೊಂಡು ಅದರ ಮೂಲಕ ಬೆದರಿಕೆ ಹಾಕಲಾಗುತ್ತಿತ್ತು.

ಈ ನಡುವೆ, ಮಾತಿನ ಮಲ್ಲನಾಗಿರುವ ಶಾಸಕರೊಬ್ಬರು ಅಜಿತ್‌ ರೈಯ ಬೆನ್ನು ಹತ್ತಿದ್ದಾರೆ ಎಂಬ ಮಾಹಿತಿ ಇತ್ತು. ಆ ಶಾಸಕನ ಏಟು ಅದೆಷ್ಟು ಬಲವಾಗಿತ್ತು ಎಂದರೆ ಅಜಿತ್‌ ರೈ ಕೆ.ಆರ್ ಪುರಂನಿಂದ ವರ್ಗಾವಣೆ ಆಗಿ ಯಲಹಂಕ ಪೋಸ್ಟಿಂಗ್ ಗೆ ಪ್ರಯತ್ನ ಪಡುತ್ತಿದ್ದ. ಅದರ ನಡುವೆಯೇ ಅವನ ಮೇಲೆ ದಾಳಿ ನಡೆದಿದೆ.

ಇದೀಗ ಅಜಿತ್‌ ರೈಯನ್ನು ತಹಸೀಲ್ದಾರ್‌ ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: Ajit Rai: 200 ಕಿಮೀ ವೇಗದಲ್ಲಿ ಕಾರು ಓಡಿಸಬಲ್ಲ ಅಜಿತ್‌ ರೈ; ಫಾರ್ಮುಲಾ 1 ಟ್ರ್ಯಾಕ್‌ ನಿರ್ಮಿಸಲು ರೆಡಿಯಾಗಿದ್ದ!

Exit mobile version