ಬೆಂಗಳೂರು: ಲೋಕಾಯುಕ್ತ (Lokayukta raid) ಪೊಲೀಸ್ ಕಸ್ಟಡಿಯಲ್ಲಿರುವ ಕೆ.ಆರ್ ಪುರದ ಈ ಹಿಂದಿನ ತಹಸೀಲ್ದಾರ್ ಅಜಿತ್ ರೈ (Ajit Rai) ಅಕ್ರಮ ಆಸ್ತಿ ಬಗೆದಷ್ಟೂ ಮುಗಿಯುತ್ತಿಲ್ಲ. ಅದರ ಜತೆಗೆ ಆತನ ಶೋಕಿಗಳಿಗೂ ಬರವಿಲ್ಲ. ಹೆಸರಿಗೆ ತಹಸೀಲ್ದಾರ್ ಆಗಿದ್ದ ಅಜಿತ್ ರೈ ಮಾಡುತ್ತಿದ್ದುದೆಲ್ಲ ರಿಯಲ್ ಎಸ್ಟೇಟ್ ಬ್ಯುಸಿನೆಸ್ (Real Estate Business), ಶೋಕಿ, ರೇಸಿಂಗ್ ಮತ್ತು ಡಾನ್‌ಗಳ ಜತೆ ಸಂಪರ್ಕ! ಕಾರುಗಳನ್ನು 200 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಓಡಿಸುತ್ತಿದ್ದ ಆತನಿಗೆ ಫಾರ್ಮುಲಾ 1 ರೇಸ್ (Formula 1 race) ಮೇಲೂ ಕ್ರೇಜ್ ಇತ್ತು. ರಾಜ್ಯದಲ್ಲೊಂದು ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲೂ ರೆಡಿಯಾಗಿದ್ದ!
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಕೆಎಎಸ್ ಅಧಿಕಾರಿ ಅಜಿತ್ ಯಾರು ಊಹೆ ಮಾಡಲೂ ಸಾಧ್ಯವಾಗದಂಥ ಕ್ರಿಮಿನಲ್ ಮೈಂಡೆಡ್ ಅಧಿಕಾರಿ ಎನ್ನುವುದು ಈಗ ಪೊಲೀಸರೇ ಕಂಡುಕೊಂಡಿರುವ ಸತ್ಯ.
ಕಳೆದ ಎಂಟು ವರ್ಷದಲ್ಲಿ ಅಜಿತ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದು ದೇವನಹಳ್ಳಿ, ಹೊಸಕೋಟೆ, ಕೆಆರ್ ಪುರಂ ಭಾಗದಲ್ಲಿ. ಈ ಭಾಗದಲ್ಲಿ ಎಲ್ಲಿ ನೋಡಿದರೂ ಅಜಿತ್ ಕುಮಾರ್ ರೈ ಬೇನಾಮಿಗಳದ್ದೇ ಲೇಔಟ್, ಭೂಮಿ ರಿಯಲ್ ಎಸ್ಟೇಟ್ ಮಾಫಿಯಾ. ಇದಕ್ಕೆ ಇಲ್ಲಿನ ಸ್ಥಳೀಯ ರಾಜಕೀಯ ನಾಯಕರೇ ಬೆಚ್ಚಿಬಿದ್ದಿದ್ದರು ಎನ್ನಲಾಗಿದೆ. ತಹಶಿಲ್ದಾರ್ ಕೋರ್ಟ್ ನಲ್ಲಿ ವ್ಯಾಜ್ಯಬರುವ ಭೂಮಿಯನ್ನ ತಮ್ಮ ಚೇಲಾಗಳನ್ನು ಬಿಟ್ಟು ಆ ಭೂಮಿಯನ್ನ ತಮ್ಮ ವಶಕ್ಕೆ ಪಡೆಯುತ್ತಿದ್ದ! ಈ ಬಗ್ಗೆ ಅಲ್ಲಿನ ಶಾಸಕರೊಬ್ಬರು ನೀಡಿದ ದೂರೇ ಆತನ ವಿರುದ್ಧ ಲೋಕಾಯುಕ್ತ ದಾಳಿಗೆ ಕಾರಣವಾಯಿತು ಎನ್ನಲಾಗುತ್ತಿದೆ.
ಐಷಾರಾಮಿ ಕಾರುಗಳ ಹುಚ್ಚ!
ಅಜಿತ್‌ಗೆ ಐಷಾರಾಮಿ ಕಾರುಗಳ ದೊಡ್ಡ ಮಟ್ಟದ ಕ್ರೇಜ್ ಇತ್ತು. ಆತನ ಬಳಿ ಸಿಕ್ಕಿದ ಐಷಾರಾಮಿ ಕಾರುಗಳ ಸಂಖ್ಯೆ 11. ಕೋಟಿ ಕೋಟಿ ಬೆಲೆಬಾಳುವ ಕಾರುಗಳನ್ನು ಇಟ್ಟುಕೊಂಡಿದ್ದ ಆತ ಅವುಗಳನ್ನು ಬೇನಾಯಿಯಾಗಿ ಖರೀದಿ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆಯಷ್ಟೇ 6 ಕೋಟಿ ಬೆಲೆ ಬಾಳುವ ಎರಡು ಕಾರುಗಳನ್ನು ಆತ ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಅದರೆ, ಇದು ಲೋಕಾಯುಕ್ತ ತನಿಖೆಯ ವೇಳೆಯೂ ಸಿಕ್ಕಿಲ್ಲ. ಲೋಕಾಯುಕ್ತ ಅಧಿಕಾರಿಗಳ ಕಣ್ಣೀಗೆ ಕಾಣದಂತೆ ಬಚ್ಚಿಟ್ಟಿದ್ದಾನೆ!
200 ಕಿ.ಮೀ ವೇಗದಲ್ಲಿ ಕಾರು ಓಡಿಸುತ್ತಿದ್ದ!
ಅಜಿತ್ ರೈಗೆ ಹೈ ಎಂಡ್ ಕಾರುಗಳ ಮೇಲೆ ವಿಪರೀತ ಕ್ರೇಜ್ ಇತ್ತು. ಇವುಗಳನ್ನು ಗಂಟೆಗೆ 200 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಓಡಿಸಲ್ಲವನಾಗಿದ್ದ!
ಅವನಿಗೆ ಫಾರ್ಮುಲಾ 1 ರೇಸ್ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇತ್ತು. ಮಾತ್ರವಲ್ಲ ರಾಜ್ಯದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ಪ್ಲ್ಯಾನ್ ಮಾಡಿದ್ದ. ಇದಕ್ಕಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವ ದೊಡ್ಡಬಳ್ಳಾಪುರ ಬಳಿ 150 ಎಕರೆ ಭೂಮಿ ಖರೀದಿಸಲು ಸಿದ್ಧತೆ ನಡೆಸುತ್ತಿದ್ದ!.
ದೇಶ ವಿದೇಶಗಳಲ್ಲಿ ನಡೆಯುವ ಫಾರ್ಮುಲಾ 1 ರೇಸ್‌ಗಳಿಗೆ ಭೇಟಿ ನೀಡುತ್ತಿದ್ದ ಅಜಿತ್ ರೈ, ಇತ್ತೀಚೆಗೆ ಉತ್ತರ ಪ್ರದೇಶ ನೊಯ್ಡಾದಲ್ಲಿ ನಡೆದ ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್ ಫಾರ್ಮುಲಾ ಕಾರ್ ರೇಸ್‌ಗೆ ಭೇಟಿ ಕೊಟ್ಟಿದ್ದ!
ನೋಯ್ಡಾದ ರೇಸ್ ನಿಂದ ಪ್ರೇರಣೆ ಪಡೆದು ಬೆಂಗಳೂರಿನಲ್ಲಿ ಸ್ವಂತ ಫಾರ್ಮುಲಾ ರೇಸ್ ಟ್ರ್ಯಾಕ್ ಆರಂಭಿಸಲು ತಯಾರಿ ನಡೆಸುತ್ತಿದ್ದ. ಇಲ್ಲಿನ 150 ಎಕರೆ ಜಾಗವನ್ನು ದಾಖಲೆ ತಿದ್ದುಪಡಿ ಮೂಲಕ ಆತ ವಶಪಡಿಸಿಕೊಂಡಿದ್ದ. ಅದರಲ್ಲೇ ಟ್ರ್ಯಾಕ್ ನಿರ್ಮಿಸಲು ಪ್ಲ್ಯಾನ್ ಹಾಕಿದ್ದ.
ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ರೇಸ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪೇಕ್ಷಕರು ಕೊಡ ಪಾಲ್ಗೊಳ್ಳಬಹುದು, ವಿದೇಶಗಳಿಂದಲೂ ಆಸಕ್ತರು ಬರಬಹುದು ಎನ್ನುವುದು ರೈ ಲೆಕ್ಕಾಚಾರವಾಗಿತ್ತು. ಸಹಕಾರ ನಗರದ ಮನೆ ಮೇಲೆ ದಾಳಿ ವೇಳೆ ಫಾರ್ಮುಲಾ 1 ರೇಸ್ ಟ್ರ್ಯಾಕ್ ನಿರ್ಮಾಣ ಮಾಡಲು ಸಿದ್ಧಪಡಿಸಿದ್ದ ನಕ್ಷೆ ಪತ್ತೆಯಾಗಿದೆ.