ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಕಡಿಮೆ ಹೊಗೆ ಹೊರಸೂಸುವ, ಪರಿಸರ ಸ್ನೇಹಿ ಬೋಯಿಂಗ್‌ನ್ನು (Environmental friendly boeing) ವಿಮಾನ ಯಾನ ಕ್ಷೇತ್ರಕ್ಕೆ ಪರಿಚಯಿಸಿದ ಖ್ಯಾತಿ ಹೊಂದಿರುವ ಆಕಾಸ ಏರ್‌ಲೈನ್ಸ್ (Akasa Air) ಇದೀಗ ತನ್ನ ಸಂಸ್ಥೆಯಿಂದ 20ನೇ ವಿಮಾನವನ್ನು (20th Aircraft from Akasa Air) ಪರಿಚಯಿಸಿದೆ. ಪರಿಸರ ಸ್ನೇಹಿ ಬೋಯಿಂಗ್ ಆದ 737 MAX , 737-8-200 ವಿಮಾನವು ಬುಧವಾರ ಬೆಳಗ್ಗೆ 9.31ಕ್ಕೆ ಬೆಂಗಳೂರಿಗೆ ಆಗಮಿಸಿತು. ಈ ನೂತನ ವಿಮಾನವು ಅಮೆರಿಕದ ಸಿಯಾಟಲ್‌ನಿಂದ (seattle in USA) ತನ್ನ ಯಾನವನ್ನು ಆರಂಭಿಸಿ ಬುಧವಾರ ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bangalore International airport) ಬಂದು ತಲುಪಿದೆ.
ಕೇವಲ ಒಂದು ವರ್ಷದ ಹಿಂದಷ್ಟೇ ವಿಮಾನ ಯಾನ ಸೇವೆ ಪ್ರಾರಂಭಿಸಿದ ಆಕಾಸ ಏರ್ ವಿಮಾನಯಾನ ಸಂಸ್ಥೆಯು ಒಂದು ವರ್ಷದೊಳಗೆ 20 ವಿಮಾನಗಳನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ. ಒಂದು ವಿಮಾನ ಯಾನ ಸಂಸ್ಥೆ 20 ವಿಮಾನಗಳನ್ನು ಹೊಂದಿದ್ದರೆ ಅದು ಅಂತಾರಾಷ್ಟ್ರೀಯ ವಿಮಾನಯಾನಕ್ಕೆ (International air service) ಅರ್ಹತೆಯನ್ನು ಪಡೆದಿದೆ. ಈ ಮೂಲಕ ಆಕಾಸ ಏರ್ ಕೂಡಾ 20ನೇ ವಿಮಾನದ ಮೂಲಕ ಈಗ ಅಂತಾರಾಷ್ಟ್ರೀಯ ಹಾರಾಟಕ್ಕೆ ತೆರೆದುಕೊಂಡಿದೆ. ಇದರ ಭಾಗವಾಗಿಯೇ ಅದು ಅಮೆರಿಕದ ಸಿಯಾಟಲ್‌ನಿಂದ ಬೆಂಗಳೂರಿಗೆ ಆಗಮಿಸಿದೆ.
ಪರಿಸರ ಸ್ನೇಹಿ ವಿಮಾನಗಳೇ ನಮ್ಮ ವಿಶೇಷತೆ
ಈ ಕುರಿತು ಮಾತನಾಡಿದ ಆಕಾಸ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ʻʻಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಅದೂ ಅಲ್ಲದೆ, ಮೊದಲ ಬಾರಿಗೆ ಬೋಯಿಂಗ್ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಈ ಬೋಯಿಂಗ್‌ನ ವಿಶೇಷತೆ ಎಂದರೆ, ಇದು ಸಾಮಾನ್ಯ ಎಂಜಿನ್‌ಗಿಂತ ಶೇ.20ರಷ್ಟು ಕಡಿಮೆ ಇಂಧನ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಲಿದೆ.
ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.50ರಷ್ಟು ಕಡಿಮೆ ಶಬ್ಧ ಮಾಡಲಿದ್ದು, ಶಬ್ಧ ಮಾಲಿನ್ಯವನ್ನು ತಡೆಯಲಿದೆʼʼ ಎಂದು ವಿವರಿಸಿದರು.
2022ರ ಆಗಸ್ಟ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆಕಾಸ ವಿಮಾನಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾಗಿದೆ. ಇಂದು ಇದು 20 ವಿಮಾನಗಳ ಸಮೂಹವನ್ನು ಹೊಂದಿದೆ ಮತ್ತು ಇದುವರೆಗೆ 4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ, 16 ಭಾರತೀಯ ನಗರಗಳನ್ನು ಸಂಪರ್ಕಿಸುವ 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ.
ಇದನ್ನೂ ಓದಿ : Akasa Air: ವಿದೇಶಕ್ಕೂ ರೆಕ್ಕೆ ಚಾಚಲಿದೆ ಆಕಾಸ ವಿಮಾನ, ಶೀಘ್ರವೇ ಸಾವಿರ ಉದ್ಯೋಗಿಗಳ ನೇಮಕ
ರಾಕೇಶ್ ಜುಂಜುನ್‌ವಾಲಾ ಕನಸಿನ ವಿಮಾನಯಾನ ಸಂಸ್ಥೆ
ಆಕಾಸ ಏರ್ ಎನ್ನುವ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಎಸ್‌ಎನ್‌ವಿ ಏವಿಯೇಷನ್ ಪ್ರೈವೆಟ್ ಲಿಮಿಟೆಡ್ ಎನ್ನುವ ಸಂಸ್ಥೆ. ಮುಂಬಯಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆಕಾಸ ಏರ್ ಸಂಸ್ಥೆಯನ್ನು ಆರಂಭ ಮಾಡಿದ್ದು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರಾಗಿದ್ದು, ಕಳೆದ ವರ್ಷ ನಿಧನರಾದ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) (46% ಪಾಲುದಾರಿಕೆ) ಮತ್ತು ವಿನಯ್ ದುಬೆ.