Site icon Vistara News

Karnataka Election 2023: ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಂಡ ಶ್ರೀನಿವಾಸ ಮೂರ್ತಿ

Akhanda Srinivasa Murthy resigns as Congress MLA

#image_title

ಶಿರಸಿ: ಕಾಂಗ್ರೆಸ್‌ನ ಮೊದಲ ವಿಕೆಟ್ ಪತನವಾಗಿದೆ. ವಿಧಾನಸಭಾ ಚುನಾವಣೆ (Karnataka Election 2023) ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿ ಅವರು ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಭಾನುವಾರ ರಾಜೀನಾಮೆ ಪತ್ರ ಸಲ್ಲಿಸಿದರು.

ಪುಲಿಕೇಶಿ ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರು, ಕಳೆದ ಚುನಾವಣೆಯಲ್ಲಿ 83,000 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಈ ಬಾರಿ ಅವರಿಗೆ ಕೈ ಟಿಕೆಟ್‌ ತಪ್ಪಿದೆ. ಹೀಗಾಗಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಜೆಡಿಎಸ್ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ
ಇಳಿಯುವ ಸಾಧ್ಯತೆ ಇದೆ.

ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ, ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್‌ನ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಸೋಮವಾರ ಪಕ್ಷದ ಕಾರ್ಯಕರ್ತರ ಜತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಅಕ್ಕಪಕ್ಕದ ಕ್ಷೇತ್ರದ ನಾಯಕರು ಹೇಳಿದರು ಅಂತ ನನಗೆ ಟಿಕೆಟ್ ತಪ್ಪಿಸಿದ್ದಾರೆ. ನನ್ನ ತಂದೆ 40 ವರ್ಷ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಹಿರಿಯ ನಾಯಕರ ಮೇಲೆ ನನಗೆ ಇನ್ನೂ ನಂಬಿಕೆ ಇದೆ ಎಂದು ತಿಳಿಸಿದರು.

ಕೆ.ಜೆ.ಹಳ್ಳಿ ಡಿ.ಜೆ.ಹಳ್ಳಿ ಗಲಾಟೆ ಪ್ರಕರಣದ ಬಳಿಕ ಕ್ಷೇತ್ರದಲ್ಲಿ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇದ್ದೆವು. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಜೈಲಿಗೆ ಹೋಗಿಬಂದ ನಾಯಕರೇ ನನಗೆ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದರು.

ಇದನ್ನೂ ಓದಿ | Karnataka Congress:‌ ಗ್ಯಾಸ್‌ ಸಿಲಿಂಡರೇ ಕಾಂಗ್ರೆಸ್‌ ಮನೆ ದೇವ್ರು !: ಅದರಲ್ಲಿ ಅಡುಗೆ ಮಾಡೋವ್ರು ಯಾರು?

ಜಗದೀಶ್ ಶೆಟ್ಟರ್ ದೊಡ್ಡ ನಾಯಕರು, ಪಕ್ಷಕ್ಕೆ ಕರೆತರಲು ಸಂಪರ್ಕಿಸಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೊಡ್ಡ ನಾಯಕರು. ಅವರನ್ನು ನಮ್ಮ ಪಕ್ಷಕ್ಕೆ ಕರೆಯೋಕೆ ಹೋಗಿಲ್ಲ. ನಮ್ಮ ಪಕ್ಷಕ್ಕೆ ಸಣ್ಣ ಪುಟ್ಟ ನಾಯಕರು ಸಾಕು. ಶೆಟ್ಟರ್‌ ಅವರನ್ನು ಸಂಪರ್ಕ ಮಾಡಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್‌ ಕ್ಷೇತ್ರದ ಬಿಜೆಪಿಯ ಗುರುಪಾದಪ್ಪ ನಾಗಮಾರಪಲ್ಲಿಯವರ ಪುತ್ರ, ಶಾಸಕ ಸೂರ್ಯಕಾಂತ್‌ ಜೆಡಿಎಸ್‌ನಿಂದ ಅಭ್ಯರ್ಥಿಯಾಗಲಿದ್ದಾರೆ. ಹೊಳಲ್ಕೆರೆಯ ಇಂದ್ರಜಿತ್ ನಾಯಕ್ ಸೇರಿ ಅವರ ಅಭಿಮಾನಿಗಳು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬೀದರ್‌ನಲ್ಲಿ ಜಿಲ್ಲೆಯಲ್ಲಿ ನಾಲ್ಕರಿಂದ ಐದು ಸ್ಥಾನ ಗೆಲ್ಲುವ ಗುರಿಯನ್ನು ಬಂಡೆಪ್ಪ ಖಾಶೆಂಪೂರ್ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಮಂಗಳವಾರ ಜೆಡಿಎಸ್ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಾವು ಬಹುತೇಕ 210 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಶಿಕಾರಿಪುರದಲ್ಲಿ ನಾಗರಾಜಗೌಡ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅಲ್ಲಿ ಜನತಾ ದಳದ ಅಭ್ಯರ್ಥಿ ಹಾಕದೇ ಅವರಿಗೆ ಬೆಂಬಲ ಕೊಡುತ್ತೇವೆ. ನಾನು ಸೋಮವಾರ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ವಿವಿಧೆಡೆ ನಮ್ಮ ಪಕ್ಷದ ಅನೇಕರು ನಾಮಪತ್ರ ಸಲ್ಲಿಸಲಿದ್ದಾರೆ. ಸೋಮವಾರ ಸಂಜೆ ಸವದತ್ತಿ ಪ್ರವಾಸ ಮಾಡುತ್ತಿದ್ದೇನೆ. ಅಲ್ಲಿಯೂ ಉತ್ತರ ಕರ್ನಾಟಕದ ನಾಯಕರು ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | Rahul Gandhi: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಸಾಮಾನ್ಯ ಕಾರ್ಯಕರ್ತರಿಗೂ ಸರ್ಕಾರದಲ್ಲಿ ಸ್ಥಾನ: ರಾಹುಲ್‌ ಗಾಂಧಿ

ಹಾವೇರಿ ಶಾಸಕ ನೆಹರು ಓಲೇಕಾರ್ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆಯಾಗಿದೆ. ಅಭಿಮಾನಿಗಳ ಜತೆ ಚರ್ಚೆಯ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅವರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

Exit mobile version