ಬೆಂಗಳೂರು: ಅಮೆರಿಕದ ಡ್ರೋನ್ ದಾಳಿಯಲ್ಲಿ ಹತನಾದ ಅಲ್‌ಖೈದಾ ನಾಯಕ ಅಯೂಮನ್ ಅಲ್-ಜವಾಹಿರಿ ಕೆಲವು ತಿಂಗಳ ರಾಜ್ಯದಲ್ಲಿ ನಡೆದ ಹಿಜಾಬ್ ವಿವಾದದಲ್ಲೂ ತಲೆ ಹಾಕಿದ್ದ!
ಹೌದು, ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಕೆಲವು ಮುಸ್ಲಿಂ ಪಿಯುಸಿ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿಕೊಂಡೇ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ದೊಡ್ಡ ಗಲಾಟೆ ಮಾಡಿದ್ದರು. ಆಗ ರಾಜ್ಯಾದ್ಯಂತ ಹಲವು ಕಡೆ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಈ ವೇಳೆ ಅಲ್ ಜವಾಹಿರಿ ಕೂಡಾ ಎಂಟ್ರಿ ಕೊಟ್ಟಿದ್ದ.
ಪ್ರತಿಭಟನೆ, ಕಾನೂನು ಹೋರಾಟಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ, 2022ರ ಮಾರ್ಚ್ 24ರಂದು ಮಂಡ್ಯದ ಕಾಲೇಜು ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಕಾಲೇಜಿಗೆ ಹಾಲ್ ಟಿಕೆಟ್ ತೆಗೆದುಕೊಳ್ಳಲೆಂದು ಬಂದಾಗ ಕೆಲವು ಹುಡುಗರು ಜೈಶ್ರೀರಾಮ್ ಎನ್ನುತ್ತಾ ಆಕೆಯ ಬೆನ್ನು ಹತ್ತಿದ್ದರು. ಈ ವೇಳೆ ಆಕೆ ತಿರುಗಿ ನಿಂತು ಅಲ್ಲಾಹು ಅಕ್ಬರ್ ಎಂದು ಕೂಗಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಗ ಅಲ್‌ಜವಾಹಿರಿ ಒಂಬತ್ತು ನಿಮಿಷಗಳ ಒಂದು ವಿಡಿಯೊ ಬಿಟ್ಟಿದ್ದ. ಅದರಲ್ಲಿ ಮುಸ್ಕಾನ್ ಖಾನ್‌ಳನ್ನು ಶ್ಲಾಘಿಸಲಾಗಿತ್ತು.
ಮಾದರಿ ಮಹಿಳೆ ಎಂದಿದ್ದ
ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಮುಸ್ಕಾನ್ ಖಾನ್‌ಳನ್ನು ಹೊಗಳಿ
ಒಂದು ಕವನವನ್ನೇ ಓದಿಬಿಟ್ಟಿದ್ದ. ಅದರ ವಿಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾವೇ ಬಿಡುಗಡೆ ಮಾಡಿತ್ತು. ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವಿಡಿಯೋದಲ್ಲಿ ಜವಾಹಿರಿ ಹೇಳಿದ್ದ. ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದಿದ್ದಾನೆ. ಅಲ್ಲದೆ, ಮುಸ್ಕಾನ್ ಹೊಗಳಿಕೆಯಲ್ಲಿ ಕವನ ಓದುತ್ತಿರುವುದಾಗಿಯೂ ಹೇಳಿ ಕವನ ಯಾಚಿಸಿದ್ದಾನೆ. ಅಲ್ಲದೆ ಕವಿತೆಯನ್ನು ಓದಿದ ನಂತರ, ಹಿಜಾಬ್ ಅನ್ನು ನಿಷೇಧಿಸಿದ ದೇಶಗಳ ಮೇಲೆ ವಾಗ್ದಾಳಿ ನಡೆಸಿದ್ದ. ಈ ರಾಷ್ಟ್ರಗಳು ಪಾಶ್ಚಿಮಾತ್ಯ ದೇಶಗಳ ಮಿತ್ರರಾಷ್ಟ್ರಗಳು ಎಂದು ಕರೆದಿದ್ದಾನೆ.
ಈ ವಿಡಿಯೊ ಬಿಡುಗಡೆಯಾದ ಕೂಡಲೇ ಮುಸ್ಕಾನ್ ಖಾನ್ ಅವರ ತಂದೆ ಪ್ರತಿಕ್ರಿಯಿಸಿ ತಮಗೂ ಜವಾಹಿರಿಗೂ ಯಾವುದೇ ಸಂಬಂಧವಿಲ್ಲ. ಅವರೆಲ್ಲ ಇಲ್ಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದು ಗಟ್ಟಿಯಾಗಿ ಹೇಳಿದ್ದರು.
ಕರ್ನಾಟಕದಲ್ಲಿ ಈ ವರ್ಷದ ಆರಂಭದಲ್ಲಿ ಎದ್ದಿದ್ದ ಹಿಜಾಬ್ ವಿವಾದಕ್ಕೆ ಅಲ್ ಜವಾಹಿರಿ ಪ್ರತಿಕ್ರಿಯೆ ನೀಡಿದ್ದ. ಮಂಡ್ಯದ ಹುಡುಗಿ ಮುಸ್ಕಾನ್‌ಳ ಧೈರ್ಯವನ್ನು ಮೆಚ್ಚಿದ್ದಾಗಿ ಹೇಳಿದ್ದ. ಮುಸ್ಕಾನ್ ಕುಟುಂಬವೂ ಇದನ್ನು ಆಕ್ಷೇಪಿಸಿತ್ತು.