ಶಿವಮೊಗ್ಗ: ರಾಜ್ಯಾದ್ಯಂತ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಮತದಾನಕ್ಕೆ ಅಗತ್ಯವಾದ ವಿದ್ಯುನ್ಮಾನ ಮತಯಂತ್ರ (ಇವಿಎಂ) ಸೇರಿ ವಿವಿಧ ವಸ್ತುಗಳ ಜತೆಗೆ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನಿಯೋಜಿಸಲು ಸೋಮವಾರ ಆಯಾ ಕ್ಷೇತ್ರಗಳಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ನಡೆದಿದೆ. ಈ ನಡುವೆ ಮದ್ಯ ಸೇವನೆ ಶಂಕೆ ಮೇರೆಗೆ ಇಬ್ಬರು ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿರುವುದು ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸಿಬ್ಬಂದಿ ಮದ್ಯ ಸೇವನೆ ಮಾಡಿರುವ ಅನುಮಾನ ಬಂದ ಹಿನ್ನೆಲೆಯಲ್ಲಿ ಖಚಿತಪಡಿಸಿಕೊಳ್ಳಲು ಅವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.
ಕೆ.ಆರ್.ಪೇಟೆಯಲ್ಲಿ ಕಳಪೆ ಆಹಾರ ಪೂರೈಕೆ; ಚುನಾವಣಾ ಸಿಬ್ಬಂದಿ ಆಕ್ರೋಶ
ಮಂಡ್ಯ: ಕಳಪೆ ಆಹಾರ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕು ಚುನಾವಣಾಧಿಕಾರಿ ವಿರುದ್ಧ ಚುನಾವಣಾ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಅವರಿಗೆ ಸೂಕ್ತ ಊಟದ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.
“ಇದು ಅನ್ನ, ಸಾಂಬಾರಾ? ನಾಯಿನೂ ತಿನ್ನಲ್ಲ ಹಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಬ್ಬಂದಿ, ಮಂಡ್ಯಕ್ಕೆ ಒಳ್ಳೇ ಜಿಲ್ಲಾಧಿಕಾರಿ ಇದ್ದಾರೆ. ಅವರು ಎಲ್ಲವನ್ನೂ ಸೂಕ್ತವಾಗಿ ನಿರ್ವಹಿಸುವಂತೆ ಹೇಳಿದ್ದಾರೆ. ಆದರೆ, ಇಲ್ಲಿನ ಅಧಿಕಾರಿಗಳು ಜಿಲ್ಲಾಧಿಕಾರಿ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Karnataka Election : ಡಿ.ಕೆ ಶಿವಕುಮಾರ್ ವಿರುದ್ಧ ಮತ್ತೊಂದು ಪತ್ರ; ಹುಳಿ ಹಿಂಡುವ ಕುತಂತ್ರ ಎಂದ ಸಿದ್ದರಾಮಯ್ಯ
ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ; ಮಹಿಳಾ ಇನ್ಸ್‌ಪೆಕ್ಟರ್ ಅಮಾನತು
ಬೆಂಗಳೂರು: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ತೋರಿದ ಮಹಿಳಾ ಇನ್ಸ್‌ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ. ಭವ್ಯ ಅಮಾನತುಗೊಂಡ ಮಹಿಳಾ ಇನ್ಸ್‌ಪೆಕ್ಟರ್ ಆಗಿದ್ದಾರೆ.
ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿಗೆ ನಿಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಪೇಪರ್ ಓದುತ್ತಾ ಕುಳಿತಿದ್ದರು. ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮೆರೆದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಭವ್ಯ ಅವರನ್ನು ಅಮಾನತು ಮಾಡಲಾಗಿದೆ.
ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ, ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ. ನೀವ್ ಹೇಳಿದಂತೆ ಕೇಳುವುದಕ್ಕೆ ನಾನು ನಿಮ್ಮ ಡಿಪಾರ್ಟ್‌ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲ. ಯಾರಿಗಾದರೂ ಹೇಳಿಕೊಳ್ಳಿ ಎಂದು ಮಹಿಳಾ ಇನ್ಸ್‌ಪೆಕ್ಟರ್ ಉದ್ಧಟತನ ಮೆರೆದಿದ್ದಾರೆ. ಹೀಗಾಗಿ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮಹಿಳಾ ಇನ್ಸ್‌ಪೆಕ್ಟರ್ ಭವ್ಯಾರನ್ನು ಜಿಲ್ಲಾ ಚುನಾವಣಾಧಿಕಾರಿ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ | Karnataka Election 2023: ಚಿಂತಾಮಣಿಯಲ್ಲಿ ಸಿಕ್ತು 12 ಲಕ್ಷ ರೂ.; ಹುಬ್ಬಳ್ಳಿ ಕಾಂಗ್ರೆಸ್ ನಾಯಕಿ ಮನೇಲಿ ಏನೂ ಸಿಗಲಿಲ್ಲ!
ಕೋಲಾರದಲ್ಲಿ ಬಿರುಗಾಳಿ ಸಹಿತ ಮಳೆ; ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿಗೆ ತೊಂದರೆ
ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ಕೆಲ ಕಾಲ ಮತದಾನ ಕೇಂದ್ರಗಳಿಗೆ ತೆರಳಲು ಸಿಬ್ಬಂದಿ ಹರಸಾಹಸಪಟ್ಟರು. ಕೋಲಾರ, ಶ್ರೀನಿವಾಸಪುರ ಕ್ಷೇತ್ರದ ಹಲವು ಕಡೆ ಗಾಳಿ ಮಳೆ ಜೋರಾಗಿತ್ತು. ಒಂದು ಗಂಟೆಗಳ ಕಾಲ ಸುರಿದ ಮಳೆಗೆ ನರಸಾಪುರ, ವೇಮಗಲ್‌ನ ಸುತ್ತಮುತ್ತ ತೋಟಗಾರಿಕಾ ಬೆಳೆಗಳಾದ ಟೊಮ್ಯಾಟೋ, ಬೀನ್ಸ್ , ಹೂ ಬೆಳೆಗಳಿಗೆ ಹಾನಿಯಾಗಿದೆ.