ಬೆಂಗಳೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧದ ಹೇಳಿಕೆ ವಿವಾದದ ಬಗ್ಗೆ ಮುಸ್ಲಿಂ ವಿದ್ವಾಂಸರು ಹಾಗೂ ಉಲೇಮಾಗಳು ಟಿವಿ ಚಾನೆಲ್ ಚರ್ಚೆಗಳಲ್ಲಿ ಭಾಗವಹಿಸಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಸೂಚಿಸಿದೆ. ಈ ಕುರಿತು ಕಚೇರಿ ಕಾರ್ಯದರ್ಶಿ ಡಾ. ವಕಾರ್ ಉದ್ದಿನ್ ಲತೀಫಿ ಹೇಳಿಕೆ ನೀಡಿದ್ದಾರೆ.
ಟಿವಿ ಚರ್ಚೆಗಳ ಕುರಿತು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರೆಹಮಾನಿ, ಅಧ್ಯಕ್ಷ ಮೂಲಾನಾ ಸೈಯದ್ ಮೊಹಮ್ಮದ್ ರಬೆ ಹಸನಿ ನದ್ವಿ, ಉಪಾಧ್ಯಕ್ಷರುಗಳಾದ ಮೂಲಾನಾ ಸೈಯದ್ ಜಲಾಲುದ್ದೀನ್ ಉಮರಿ, ಮೂಲಾನಾ ಕಾಕಾ ಸೈಯದ್ ಅಹಮದ್ ಊಮೇರಿ, ಮೂಲಾನಾ ಸೈಯದ್ ಶಾಹ್ ಫಕ್ರುದ್ದೀನ್ ಅಶ್ರಫ್, ಮೂಲಾನಾ ಸೈಯದ್ ಅರ್ಷದ್ ಮದನಿ ಹಾಗೂ ಪ್ರೊ. ಡಾ. ಸೈಯದ್ ಅಲಿ ಮೊಹಮ್ಮದ್ ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ವಕಾರ್ ಉದ್ದಿನ್ ಲತೀಫಿ ಹೇಳಿದ್ದಾರೆ.
ಇದನ್ನೂ ಓದಿ | ನೂಪುರ್ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು
ಇಸ್ಲಾಂ ನಂಬಿಕೆಯನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಕೆಲ ನ್ಯೂಸ್ ಚಾನೆಲ್‌ಗಳು ಮುಸ್ಲಿಂ ವಿಚಾರವಾದಿಗಳನ್ನು ಆಹ್ವಾನಿಸುತ್ತವೆ. ಅವು ಟಿಆರ್‌ಪಿಗಾಗಿ ತಮ್ಮ ವಾದವನ್ನು ಸಾಬೀತುಪಡಿಸಲು ಮುಸ್ಲಿಮರನ್ನು ಆಹ್ವಾನಿಸುತ್ತವೆ. ಹೀಗಾಗಿ ಮುಸ್ಲಿಂ ಸಮುದಾಯದವರು ಟಿವಿ ಡಿಬೇಟ್‌ಗಳಲ್ಲಿ ಭಾಗವಹಿಸಬಾರದು. ಇಂತಹ ಚರ್ಚೆಗಳನ್ನು ಭಾಗವಹಿಸುವುದು ಧರ್ಮದ ಕೆಲಸ ಎಂದು ಭಾವಿಸಬೇಕಿಲ್ಲ. ಅಷ್ಟಕ್ಕೂ ಇಲ್ಲಿಗೆ ಹೋಗುವುದರಿಂದ ತಮ್ಮ ಜತೆಗೆ ಇಸ್ಲಾಂ ಹಾಗೂ ಮುಸ್ಲಿಮರನ್ನು ಅವಮಾನಕ್ಕೆ ಒಳಪಡಿಸಿದಂತಾಗುತ್ತದೆ ಎಂದು ಮಂಡಳಿ ಹೇಳಿದೆ.
ಇವರಿಗೆ ಮುಸ್ಲಿಮರನ್ನು ಹಾಗೂ ಇಸ್ಲಾಂ ಅನ್ನು ನಿಂದಿಸುವುದೇ ಉದ್ದೇಶ. ಇವರ ಉದ್ದೇಶಗಳಿಗೆ ಅಧಿಕೃತತೆ ಪಡೆಯುವ ಸಲುವಾಗಿಯಷ್ಟೆ ಕೆಲವು ವಿದ್ವಾಂಸರನ್ನು ಕರೆಯುತ್ತಾರೆ. ನಾವು ಇವರ ಕಾರ್ಯಕ್ರಮ ಬಹಿಷ್ಕರಿಸುವುದರಿಂದಾಗಿ ಅವರ ಟಿಆರ್‌ಪಿ ಕುಸಿಯುವುದರ ಜತೆಗೆ ಅವರ ಉದ್ದೇಶವೂ ವಿಫಲವಾಗುತ್ತದೆ ಎಂದು ಮಂಡಳಿ ಸೂಚಿಸಿದೆ.
ಶಾಂತಿ ಸುವ್ಯವಸ್ಥೆಗೆ ಪೊಲೀಸ್ ಸಭೆ
ಮುಸ್ಲಿಂ ಸಮುದಾಯದವರು ಪ್ರತಿಭಟನೆಗಳನ್ನು ನಡೆಸಬಾರದು ಎಂದು ಧರ್ಮ ಗುರುಗಳ ಸಭೆಯಲ್ಲಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಮನವಿ ಮಾಡಿದ್ದರು. ಪ್ರತಿಭಟನೆ ನಡೆಸಿದರೆ ಕಾನೂನಾತ್ಮಕವಾಗಿ ಆಗುವ ಪರಿಣಾಮಗಳ ಕುರಿತು ಅವರಿಗೆ ತಿಳಿ ಹೇಳಬೇಕು. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ನೋಡಿಕೊಳ್ಳಬೇಕು. ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವನ್ನು ಕಾನೂನಾತ್ಮಕ ಹಾಗೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದವರು ಸಲಹೆ ನೀಡಿದ್ದರು.
ಧರ್ಮಗುರು ಮೌಲಾನಾ ಮಕ್ಸೂದ್ ಇಮ್ರಾನ್ ಮಾತನಾಡಿ ʼʼನೂಪುರ್ ಶರ್ಮಾ ಹೇಳಿಕೆಯಿಂದ ಮುಸ್ಲಿಮರಿಗೆ ನೋವಾಗಿದೆ. ಬೆಂಗಳೂರು ಮತ್ತು ರಾಜ್ಯದಲ್ಲಿ ಯಾವುದೇ ರೀತಿಯ ರ‍್ಯಾಲಿ, ಪ್ರತಿಭಟನೆ ಮಾಡಲ್ಲ. ನಮ್ಮ ನೋವಿನ ಬಗ್ಗೆ ಕಮಿಷನರ್‌ಗೆ ತಿಳಿಸಿದ್ದೇವೆ. ಯಾವ ಧರ್ಮದ ಪ್ರಮುಖರ ಬಗ್ಗೆಯೂ ಯಾರೂ ಮಾತನಾಡಬಾರದು. ವಿವಾದಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಆಗಬೇಕು ಎನ್ನುವುದೊಂದೇ ಮೌಲ್ವಿಗಳ ಮನವಿʼʼ ಎಂದವರು ಹೇಳಿದರು.
ಮೌಲಾನಾ ಮಕ್ಸೂದ್ ಇಮ್ರಾನ್ ರಶೀದಿ, ಮೌಲಾನಾ ಮಫ್ತಿ ಇಫ್ತಿಕರ್ ಅಹ್ಮದ್ ಖಸ್ಮಿ ಸಾಹೇಬ್, ಮೌಲಾನಾ ಸೈಯದ್ ಜುಲ್ಫಿಖರ್ ಅಹ್ಮದ್ ನೂರಿ ಸಾಹೇನ್ ಸೇರಿ 16 ಮೌಲ್ವಿಗಳು ಭಾಗಿಯಾಗಿದ್ದರು.
ಭಾರತ ಇಸ್ಲಾಮಿಕ್ ರಿಪಬ್ಲಿಕ್ ಅಲ್ಲ : ಚಕ್ರವರ್ತಿ ಸೂಲಿಬೆಲೆ
ಉತ್ತರ ಕನ್ನಡ: ಮುಸಲ್ಮಾನರು ಕೋಮು ಸಂಘರ್ಷಕ್ಕೆ ಪ್ರಯತ್ನ ಪಡುತ್ತಲೇ ಇರುತ್ತಾರೆ. ರಾಜ್ಯದಲ್ಲಿ ಹಿಜಾಬ್ ಗಲಾಟೆ ನಂತರ ಹೇಗೆ ಅವರ ಹೋರಾಟವನ್ನು ಹತ್ತಿಕ್ಕಬೇಕು ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ನೂಪೂರ್ ಶರ್ಮಾ ಹಾಗೂ ನವೀನ್ ಜಿಂದಾಲ್ ವಿರುದ್ಧ ಮುಸ್ಲಿಮರ ಹೋರಾಟದ ಬಗ್ಗೆ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಮಾತನಾಡಿದ ಅವರು ʼʼಭಾರತ ಇಸ್ಲಾಮಿಕ್ ರಿಪಬ್ಲಿಕ್ ಅಲ್ಲ, ಸೆಕ್ಯುಲರ್ ಕಂಟ್ರಿ ಎಂಬುದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅರ್ಥ ಮಾಡಿಸಲು ಪ್ರೀತಿಯ ಮಾತುಗಳಿಂದ ಆಗದಿದ್ದರೇ ದಂಡಂ ದಶಗುಣಮ್ ಭವೇತ್ ಎನ್ನುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಿಕ್ಷಿಸಬೇಕುʼʼ ಎಂದರು.
ʼʼಮಹಾತ್ಮ ಗಾಂಧಿ ಕಾಲದಿಂದಲೂ ಹಿಂದೂಗಳನ್ನು ಬಗ್ಗಿಸುವ ಪ್ರಯತ್ನ ನಡೆದಿದೆ. ಮುಸಲ್ಮಾನರಿಂದ ಭಿನ್ನವಾದುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರಿಗೆ ಗೊತ್ತಿರುವುದು ಒಂದೇ- ಯಾರ ಮೇಲೆ ಕಲ್ಲು ಎಸೆಯಬೇಕು, ಯಾರನ್ನು ಸುಡಬೇಕು ಎಂಬುದು. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಪ್ರಜಾಪ್ರಭುತ್ವದ ಮೇಲೆ ಗೌರವ ಇಲ್ಲʼʼ ಎಂದರು.
ಇದನ್ನೂ ಓದಿ | ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ; ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆದ ಮಕ್ಕಳು !