ಬೆಂಗಳೂರು: ನಾಡಿನ ಪ್ರಮುಖ ಉಕ್ಕಿನ ಕಾರ್ಖಾನೆಗಳಲ್ಲೊಂದಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್‌ಎಲ್) ಪ್ರತಿ ಬಾರಿಯಂತೆ ಈ ಬಾರಿಯೂ ವುನಾವಣೆಯ ವಿಷಯವಾಗಿದೆ. ವಿಎಐಎಸ್‌ಎಲ್ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಿ ಕಾರ್ಮಿಕರಿಗೆ ಸಹಾಯ ಮಾಡುವುದಾಗಿ ಈ ಹಿಂದೆ ಜೆಡಿಎಸ್ ಭರವಸೆ ನೀಡಿದ್ದರೆ ಇದೀಗ ಬುಧವಾರ ಒಂದೇ ದಿನ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರೂ ಭರವಸೆ ಕೊಟ್ಟಿದ್ದಾರೆ.
ಭದ್ರಾವತಿ ವಿಧಾನಸಭೆ ಕ್ಷೇತ್ರವು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕ್ಷೇತ್ರ. 2013ರಲ್ಲಿ ಜೆಡಿಎಸ್ ಹಾಗೂ 2018ರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಿಜೆಪಿ ಮಾತ್ರ ಈ ವರೆಗೆ ಭದ್ರಾವತಿಯಲ್ಲಿ ಜಯಗಳಿಸಲು ಸಾಧ್ಯವಾಗಿಲ್ಲ. ಪ್ರತಿ ಬಾರಿ ಚುನಾವಣೆ ಎದುರಾದಾಗಲೂ ಭದ್ರಾವತಿಯಲ್ಲಿ ವಿಐಎಸ್‌ಎಲ್ ವಿಷಯ ಪ್ರಸ್ತಾಪವಾಗುತ್ತದೆ. ಪ್ರತಿ ಪಕ್ಷವೂ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತದೆ.
ಎಚ್.ಡಿ. ಕುಮಾರಸ್ವಾಮಿ ಗುಡುಗು
ಕಾರ್ಖಾನೆಯ ಉಳಿವಿಗಾಗಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಫೆಬ್ರವರಿ 4ರಂದು ಭೇಟಿ ನೀಡಿದ್ದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಅನೇಕ ಕಾರ್ಖಾನೆಗಳನ್ನು ಮುಚ್ಚಿದೆ. ಇದೀಗ ಕೇಂದ್ರ ಸರ್ಕಾರವು ವಿಐಎಸ್‌ಎಲ್ ಅನ್ನೂ ಮುಚ್ಚಲು ಹೊರಟಿದೆ. ಕೇಂದ್ರ ಸರ್ಕಾರಕ್ಕೆ ನಡೆಸಲು ಆಗದಿದ್ದರೆ ನಮಗೆ ಬಿಟ್ಟುಕೊಡಲಿ. ಕಾರ್ಖಾನೆಯನ್ನು ಉಳಿಸಲು ಕನ್ನಡಿಗರು ಇನ್ನೂ ಬದುಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ಡಿ.ಕೆ. ಶಿವಕುಮಾರ್‌ಗೆ ಮನವಿ
ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಭದ್ರಾವತಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ವಿಐಎಸ್‌ಎಲ್ ಕಾರ್ಮಿಕರು ಭೇಟಿ ಮಾಡಿ ಮನವಿ ಸಲ್ಲಿಸಿದರು. ನಿಯೋಗವನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರದಿಂದ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ತಂದು ಪುನರಾರಂಭ ಮಾಡಲು ವಿಫಲರಾಗಿದ್ದಾರೆ. ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದರೆ ಕೇವಲ ಅರ್ಧ ಗಂಟೆಯಲ್ಲಿ ತೀರ್ಮಾನ ಮಾಡಬಹುದು. ಆದರೆ ಈ ಬಗ್ಗೆ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಹೀಗಾಗಿ ಬಿಜೆಪಿಯವರು ಈ ಜನರ ಮುಂದೆ ಬಂದು ಮತ ಕೇಳುವ ನೈತಿಕತೆ ಕಳೆದುಕೊಂಡಿದೆ ಎಂದರು.
ಇದನ್ನೂ ಓದಿ: ಎಲೆಕ್ಷನ್ ಹವಾ | ಭದ್ರಾವತಿ | ಬಿಜೆಪಿಯಿಂದ ಇನ್ನೂ ಭೇದಿಸಲಾಗದ ಕಾಂಗ್ರೆಸ್-ಜೆಡಿಎಸ್ ‘ಭದ್ರʼ ಕೋಟೆ
ಮೈಸೂರು ಮಹಾರಾಜರು ಕೊಟ್ಟ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಹೋದಾಗ, ಸಿದ್ದರಾಮಯ್ಯ ಅವರ ಸರ್ಕಾರವಿತ್ತು. ಆಗ ಸಂಗಮೇಶ್ ಅವರು ಮಾಜಿ ಶಾಸಕರಾಗಿದ್ದರೂ ಈ ಕಾರ್ಖಾನೆಗೆ ಗಣಿ ಜಾಗ ಮಂಜೂರು ಮಾಡಿಸಿದ್ದರು. ಆದರೂ ಕೇಂದ್ರ ಸರ್ಕಾರ ಈ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ ಮತ್ತೆ ಆರಂಭಕ್ಕೆ ಆದ್ಯತೆ ನೀಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು 1 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಭರವಸೆ ನೀಡಿದರು. ನಂತರ ಕೇಂದ್ರ ಸಚಿವರು ಬಂದು 6 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ನೀಡುವುದಾಗಿ ಹೇಳಿದ್ದರು. ಇದ್ಯಾವುದನ್ನೂ ಮಾಡಲಿಲ್ಲ. ಶಿವಮೊಗ್ಗ ಸಂಸದರೂ ಸೇರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದಾರೆ. ಆದರೂ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಈ ಕಾರ್ಖಾನೆ ಉಳಿಸಲು ಪ್ರಯತ್ನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿದೆ. ಈಗ ಈ ಕಾರ್ಖಾನೆ ಮಾರಾಟ ಮಾಡಲು ಮುಂದಾಗಿದ್ದು, ಖರೀದಿ ಮಾಡಲು ಯಾರೂ ಬಂದಿಲ್ಲ ಎಂದು ಈಗ ಮುಚ್ಚಲು ಮುಂದಾಗಿದ್ದಾರೆ.
ಜನರಿಗೆ ಉದ್ಯೋಗ ನೀಡಿ, ಸುಸ್ಥಿರ ವ್ಯಾಪಾರ ವಹಿವಾಟು ನಡೆಸಲು ನೆಹರೂ ಅವರು ಅನೇಕ ಸಾರ್ವಜನಿಕ ಕಾರ್ಖಾನೆ , ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಉಕ್ಕಿನ ಕಾರ್ಖಾನೆ ಹಾಗೂ ಕಾಗದ ಕಾರ್ಖಾನೆ ಎರಡು ಸರ್ಕಾರದ ಸ್ವಾಮ್ಯದಲ್ಲೇ ಮುಂದುವರಿಯಬೇಕು, ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಖಾಸಗಿಯವರಿಂದ ನಡೆಸಲಾಗುವ ಕಾರ್ಖಾನೆಯನ್ನು ಸರ್ಕಾರ ಯಾಕೆ ನಡೆಸಲು ಸಾಧ್ಯವಾಗುತ್ತಿಲ್ಲ? ಅಂದರೆ ನಿಮಗೆ ಆಡಳಿತ ನಡೆಸಲು ಆಗುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದರು.
ಯಡಿಯೂರಪ್ಪನವರು ಕೇಂದ್ರ ಸರ್ಕಾರದಿಂದ ಕಾರ್ಖಾನೆಗೆ 1 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮಾಡಿಸುವ ಭರವಸೆ ನೀಡಿದ್ದರು. ನಂತರ ಕೇಂದ್ರ ಸಚಿವ ತೋಮರ್ ಅವರು 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಮಾತು ಕೊಟ್ಟಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಈ ಕಾರ್ಖಾನೆ ಪುನರಾರಂಭಕ್ಕೆ 150 ಎಕರೆ ಗಣಿ ಭೂಮಿ ಮಂಜೂರು ಮಾಡಿದೆ. ಆದರೂ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಬಂಡವಾಳ ಹೂಡಿಕೆ ಮಾಡಿಸದೇ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಿವರಿಸಿದರು.
ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ: ಸಿಎಂ
ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿಐಎಸ್‌ಎಲ್ ಕಾರ್ಮಿಕರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ವಿಐಎಸ್‌ಎಲ್ ಅತ್ಯಂತ ಮಹತ್ವದ ಕಾರ್ಖಾನೆ. ಜಾಗತೀಕರಣದ ಪರಿಣಾಮ ಅನೇಕ ಸಾರ್ವಜನಿಕ ಸಂಸ್ಥೆಗಳು ಮುಚ್ಚಿವೆ. ವಿಐಎಸ್‌ಎಲ್ ಕಾರ್ಖಾನೆಯು ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದಿಂದ ಉಳಿದುಕೊಂಡು ಬಂದಿದೆ.
ಕೇಂದ್ರ ಸರ್ಕಾರ ಡಿಸ್ಇನ್ವೆಸ್ಟ್‌ಮೆಂಟ್ ಯೊಜನೆ ಅಡಿಯಲ್ಲಿ ಈ ಕಾರ್ಖಾನೆ ಮುಚ್ಚಲು ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ ಇದೆ. ಜಿಂದಾಲ್ ಸಂಸ್ಥೆ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರಬೇಕಾದರೆ, ಈ ಸಂಸ್ಥೆ ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಕ್ಲೋಷರ್ ಪ್ರಕ್ರಿಯೆ ನಿಲ್ಲಿಸಲು ಪ್ರಯತ್ನ ಮಾಡಲಾಗುವುದು. ಬೇರೆ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತಿತರರಿದ್ದರು.
ಇದನ್ನೂ ಓದಿ: VISL Bhadravati | ವಿಶ್ವೇಶ್ವರಯ್ಯ , ನಾಲ್ವಡಿ ಒಡೆಯರ್ ಸ್ಥಾಪಿಸಿದ್ದ ವಿಐಎಸ್ಎಲ್‌ಗೆ ಕೊನೆಯ ಮೊಳೆ