Site icon Vistara News

Bengaluru Pothole | ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘ಅಲ್ಲಾಡ್ಸು- ಪಾಟ್‌ಹೋಲ್ ಸಾಂಗ್‌’!

Bengaluru Pothole @ Chindi Chitranna

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು, ಮೂಲ ಸೌಕರ್ಯ ಕೊರತೆಯ ಕಾರಣದಿಂದಾಗಿ ಆಗಾಗ ಪ್ರಚಾರ ಪಡೆದುಕೊಳ್ಳುತ್ತದೆ. ವಿಶೇಷವಾಗಿ, ರಸ್ತೆ ಹೊಂಡಗಳಿಂದಾಗಿ (Bengaluru Pothole) ನಿತ್ಯ ಸುದ್ದಿಯಲ್ಲಿರುತ್ತದೆ. ರಸ್ತೆ ಗುಂಡಿಗಳ್ನು ಮುಚ್ಚಿ ಎಂದು ಹೈಕೋರ್ಟ್ ಎಷ್ಟೇ ಸಾರಿ ಛೀಮಾರಿ ಹಾಕಿದರೂ, ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ! ಈಗ ರಸ್ತೆ ಗುಂಡಿಗಳನ್ನೇ ವಿಷಯವನ್ನಾಗಿಸಿಕೊಂಡು ‘ಚಿಂದಿ ಚಿತ್ರಾನ್ನ’ ಎಂಬ ಯುಟ್ಯೂಬ್ ಚಾನೆಲ್, ‘ಅಲ್ಲಾಡ್ಸು- ದಿ ಪಾಟ್ ಹೋಲ್ ಸಾಂಗ್‌’ ರಿಲೀಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Viral News).

ರಸ್ತೆ ಹೊಂಡಗಳಿಂದಾಗಿ ಸಂಭವಿಸಿದ ಅಪಘಾತದಲ್ಲಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇಷ್ಟಾಗಿಯೂ ಪೂರ್ಣ ರಸ್ತೆ ರಿಪೇರಿ ಮಾಡುವ ಇಲ್ಲವೇ ಗುಂಡಿ ಮುಚ್ಚುವ ಕೆಲಸವಾಗಲೀ ಆಗಿಲ್ಲ. ಈ ಬಗ್ಗೆ ಹಲವು ಎನ್‌ಜಿಒಗಳು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ಪ್ರತಿಭಟನೆ ಮಾಡಿ, ಗಮನ ಸೆಳೆದಿದ್ದಾರೆ. ಆದರೂ ಏನೂ ಪ್ರಯೋಜನವಾಗಿಲ್ಲ.

ಅಲ್ಲಾಡ್ಸು ಸಾಂಗ್
ಈ ರಸ್ತೆ ಗುಂಡಿಗಳನ್ನೇ ಮುಖ್ಯವಾಗಿಟ್ಟುಕೊಂಡು ಚಿಂದಿ ಚಿತ್ರಾನ್ನ ಯುಟ್ಯೂಬ್ ಚಾನೆಲ್‌ನವರು, ಅಲ್ಲಾಡ್ಸು ಎಂಬ ರ್ಯಾಪ್ ಸಾಂಗ್ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ”ಎಲ್ಲಾ ಪ್ರಯಾಣಿಕರಿಗೆ ನಿಧಾನವಾಗಿ ಹೋಗಬೇಕಂತೆ ವಿನಂತಿ, ಗುಂಡಿಗಳ ಕಾಟ…” ಎಂದು ಶುರುವಾಗುವ ಹಾಡು, ವಿಡಂಬನಾತ್ಮಕವಾಗಿ ಸರ್ಕಾರವನ್ನು ಟೀಕಿಸುವ ಸಾಲುಗಳನ್ನು ಹೊಂದಿವೆ. ”ಹಾಕಿದ ರಸ್ತೆ ಒಂದೇ ತಿಂಗಳಲ್ಲಿ ತೂತು ಬಿದ್ದೋಯ್ತು, ಪೆಟ್ರೋಲ್‌ಗೆ ಕೊಟ್ಟ ಕಾಸಿನಲ್ಲಿ ಸರ್ಕಾರ ಉಡಾಯಿಸಿತು…” ಸಾಲುಗಳನ್ನು ಕಾಣಬಹುದು. ಜತೆಗೆ, ರಸ್ತೆ ಗುಂಡಿಗೆ ಪೂಜೆ ಮಾಡುವುದು, ಗುಂಡಿಯಲ್ಲಿ ನಿಂತ ನೀರಿನಲ್ಲಿ ಮೀನು ಹಿಡಿಯುವ ದೃಶ್ಯಗಳ ಮೂಲಕ ಬೆಂಗಳೂರು ರಸ್ತೆ ಗುಂಡಿಗಳ ಪರಿಸ್ಥಿತಿಯನ್ನು ವಿಡಂಬನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ | Pothole | ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್‌ ಸವಾರ ಬಲಿ; ಸಾರ್ವಜನಿಕರ ಆಕ್ರೋಶ

Exit mobile version