Site icon Vistara News

SSLC Exam: ಪರೀಕ್ಷೆಯಲ್ಲೂ ಮುಸ್ಲಿಮರ ಓಲೈಕೆ; ನಮಾಜ್‌ಗಾಗಿ ಸಮಯವೇ ಬದಲು!

SSLC Preparatory Exam

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ (SSLC Preparatory Exam) ಪ್ರಕಟವಾಗಿದೆ. ಆದರೆ, ಶುಕ್ರವಾರ ಮಾತ್ರ ಬೆಳಗ್ಗೆ ಬದಲಿಗೆ ಮಧ್ಯಾಹ್ನ ಪರೀಕ್ಷೆ ನಡೆಸಲು ಸಮಯ ನಿಗದಿ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರವು, ಈಗ ಪರೀಕ್ಷೆಯಲ್ಲೂ ರಾಜಕೀಯ ಮಾಡುತ್ತಾ, ಮುಸ್ಲಿಮರ ಓಲೈಕೆಗೆ ಮುಂದಾಗಿದೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.

ಫೆ.26ರಿಂದ ಮಾರ್ಚ್‌ 2ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಇದರಲ್ಲಿ ಶುಕ್ರವಾರ ಹೊರತುಪಡಿಸಿ ಬೆಳಗ್ಗೆ 10.15 – 1.30ರವರೆಗೂ ವಿವಿಧ ವಿಷಯಗಳ ಪರೀಕ್ಷೆ ಸಮಯ ನಿಗದಿಯಾಗಿದೆ. ಆದರೆ, ಶುಕ್ರವಾರ ಮಾತ್ರ ಮಧ್ಯಾಹ್ನ 2 ಗಂಟೆಯಿಂದ 5.15ವರೆಗೆ ಶಿಕ್ಷಣ ಇಲಾಖೆ ಸಮಯ ನಿಗದಿ ಮಾಡಿದೆ. ಹೀಗಾಗಿ ಆಕ್ಷೇಪ ವ್ಯಕ್ತವಾಗಿದೆ.

ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ ಸರ್ಕಾರ ಈ ರೀತಿಯ ಆದೇಶ ಮಾಡಿದೆ. ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರಿ ಈ ನಿರ್ದೇಶನ ಹೊರಡಿಸಲಾಗಿದೆ. ಈ ರೀತಿ ವೇಳಪಟ್ಟಿ ಯಾಕೆ ನಿಗದಿ ಮಾಡಲಾಗಿದೆ ಎಂಬುವುದು ಅರ್ಥವಾಗ್ತಿಲ್ಲ ಎಂದು ಶಿಕ್ಷಣ ತಜ್ಞರು ಅಸಮಾಧಾನ ಹೊರಹಾಕಿದ್ದಾರೆ.

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | SSLC Preparatory Exam : ವಿದ್ಯಾರ್ಥಿಗಳಿಂದಲೇ ಪರೀಕ್ಷಾ ವೆಚ್ಚ ವಸೂಲಿ; ಗತಿಗೆಟ್ಟ ಸರಕಾರ ಎಂದು ಹೆಚ್‌ಡಿಕೆ ಕಿಡಿ

ಈ ಬಗ್ಗೆ ಹಿಂದು ಮುಖಂಡ ಭಾಸ್ಕರನ್‌ ಪ್ರತಿಕ್ರಿಯಿಸಿ, ಶಿಕ್ಷಣದಲ್ಲೂ ರಾಜಕೀಯ ಬೆಳೆಯುತ್ತಿದೆ.ಎಲ್ಲ ಧರ್ಮಗಳನ್ನು ಸರ್ಕಾರ ಸಮಾನವಾಗಿ ನೋಡಬೇಕು. ಆದರೆ, ಹಿಂದು ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಕಾಂಗ್ರೆಸ್‌ ಸರ್ಕಾರ ಯತ್ನಿಸುತ್ತಿದೆ. ತಾಂತ್ರಿಕ ಕಾರಣಗಳಿಗೆ ಈ ರೀತಿ ಮಾಡಿದಂತಿಲ್ಲ. ಮುಸ್ಲಿಮರ ಓಲೈಕೆಗೆ ಶಾದಿ ಭಾಗ್ಯ ಮಾಡಿದ್ದ ಇವರು, ಈಗ ಶಾಲಾ ಕೊಠಡಿಗಳಲ್ಲಿ ನಮಾಜ್‌ಗೂ ಅವಕಾಶ ಮಾಡಿಬಿಡಲಿ ಎಂದು ಕಿಡಿ ಕಾರಿದ್ದಾರೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸ್ಪಷ್ಟನೆ ಏನು?

ಫೆ. 26ರಿಂದ ಮಾರ್ಚ್‌ 02ರವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಥಮ ಭಾಷೆ , ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಬೆಳಗಿನ ಅವಧಿಯಲ್ಲಿ ಹಾಗೂ ಮಾರ್ಚ್‌ 1ರಂದು ರಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ, ಆ ಪರೀಕ್ಷೆಗೆ ಕೆಲವು ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಮಾಡಲಾಗಿದೆ. ಹೀಗಾಗಿ ಅಂತಹ ಶಾಲಾ, ಕಾಲೇಜುಗಳಲ್ಲಿಯೇ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಬೇಕಾಗಿರುತ್ತದೆ. ಇದರಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ತೊಂದರೆ ಉಂಟಾಗುವುದನ್ನು ಮನಗಂಡು ಆ ದಿನದಂದು ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಮಂಡಲಿ ಸ್ಪಷ್ಟನೆ ನೀಡಿದೆ.

Exit mobile version