ಚಾಮರಾಜನಗರ: ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಚಾಮರಾಜನಗರ (Chamarajanagar News) ಮೆಡಿಕಲ್ ಕಾಲೇಜು ಡೀನ್ ಡಾ.ಜಿ.ಎಂ.ಸಂಜೀವ್ ಅವರ ಕಾರಿನ ಮೇಲೆ ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆ ಮುಖಂಡರು ಕಲ್ಲು ತೂರಾಟ ನಡೆಸಿ ಮುಖಕ್ಕೆ ಮಸಿ ಬಳಿದಿದ್ದಾರೆ.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ಸಿಮ್ಸ್) ಬಳಿ ಶುಕ್ರವಾರ ಘಟನೆ ನಡೆದಿದೆ. ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಹಗುರವಾಗಿ ಮಾತಾಡಿದ್ದಾರೆ ಎಂದು ಡಾ.ಸಂಜೀವ್ ವಿರುದ್ಧ ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ.ಸಂಜೀವ್ ಕಾರಿನಲ್ಲಿ ಪತ್ನಿಯೊಂದಿಗೆ ಆಗಮಿಸಿದಾಗ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ್ದರಿಂದ ಕಾರಿನ ಗಾಜು ಪುಡಿಪುಡಿಯಾಗಿದ್ದು, ಈ ವೇಳೆ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ನಂತರ ಡಾ.ಸಂಜೀವ್ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ | Students drowned: ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು
ವೇತನ ನೀಡದ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೌಕರರು ಮೆಡಿಕಲ್ ಕಾಲೇಜು ಬಳಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಡಾ.ಸಂಜೀವ್, ನೌಕರರೊಬ್ಬರನ್ನು ತಳ್ಳಿ ಗಾಯಗೊಳಿಸಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಡೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಠಾಣೆ ಬಳಿ ಜಮಾಯಿಸಿದ ನೂರಾರು ದಲಿತ ಸಂಘಟನೆ ಕಾರ್ಯಕರ್ತರು
ಸಿಮ್ಸ್ ಡೀನ್ ಡಾ. ಸಂಜೀವ್ ಅವರನ್ನು ಚಾಮರಾಜನಗರ ಗ್ರಾಮಾಂತರ ಠಾಣೆಗೆ ಕರೆದೊಯ್ದ ಬಳಿಕ ನೂರಾರು ಸಂಖ್ಯೆಯಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಡಾ. ಸಂಜೀವ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಈ ಕೂಡಲೇ ಬಂಧಿಸಬೇಕು ಎಂದು ಬಿಎಸ್‌ಪಿ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಒತ್ತಾಯಿಸಿದರು. ನಂತರ ಬಿಎಸ್‌ಪಿ ಜಿಲ್ಲಾಧ್ಯಕ್ಷ ನಾಗಯ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಡಾ. ಸಂಜೀವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.