Site icon Vistara News

Lok Sabha Election 2024: ಮೈಸೂರು-ಕೊಡಗು ಅಭಿವೃದ್ಧಿಗೆ ಶ್ರಮಿಸಲು ಅವಕಾಶ ನೀಡಿ: ಯದುವೀರ್ ಮನವಿ

Allow us to work for the development of Mysuru-Kodagu says Yaduveer

ಮೈಸೂರು: ಮೈಸೂರು- ಕೊಡಗು ಕ್ಷೇತ್ರದ (Lok Sabha Election 2024) ಬಿಜೆಪಿ ಟಿಕೆಟ್‌ ದೊರೆತ ಹಿನ್ನೆಲೆಯಲ್ಲಿ ಅಭ್ಯರ್ಥಿಯಾಗಲು ಕಾರಣರಾದ ಎಲ್ಲರಿಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Krishnadatta Chamaraja Wadiyar) ಅವರು ಧನ್ಯವಾದ ತಿಳಿಸಿದ್ದಾರೆ. ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ಆಶಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಯದುವೀರ್ ಅವರು, ಸಮಸ್ತ ಮೈಸೂರು-ಕೊಡಗು ಪ್ರಜಾಬಾಂಧವರಿಗೆ ನನ್ನ ನಮಸ್ಕಾರ… ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವಂತೆ, ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ.

ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗೂ ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದು, ಅನೇಕ ಪ್ರಜಾಬಾಂಧವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು, ನನ್ನನ್ನು ನೀವೆಲ್ಲರೂ ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ. ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ.

ಇದನ್ನೂ ಓದಿ | Lok Sabha Election 2024 : ಪ್ರತಾಪ್‌ಸಿಂಹ, ಕಟೀಲ್‌ ಸಹಿತ 8 ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌

ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ ಹಾಗೂ ಮೈಸೂರು-ಕೊಡಗಿನ ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ.

ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ನನ್ನ ಮೇಲೆ ನಂಬಿಕೆ ಇಟ್ಟಿರುವ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹಮಂತ್ರಿ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿ.ಎಲ್. ಸಂತೋಷ್ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷದ ಆತ್ಮ ಜೀವವಾಗಿರುವ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ನಾನು ಪ್ರತಾಪ್ ಸಿಂಹ ಅವರನ್ನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷೆಗಳಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ಆಶಿರ್ವಾದಾನುಗ್ರಹಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Lok Sabha Election 2024: ಬಿಜೆಪಿ ಪಟ್ಟಿ ರಿಲೀಸ್‌; ಮೈಸೂರಿಗೆ ಯದುವೀರ್‌, ಬೆಂ. ಉತ್ತರಕ್ಕೆ ಶೋಭಾ ಶಿಫ್ಟ್, ಉಡುಪಿಗೆ ಕೋಟ!

ಶುಕ್ರವಾರ ಬಿಜೆಪಿಗೆ ಯದುವೀರ್ ಸೇರ್ಪಡೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಯದುವೀರ್ ಒಡೆಯರ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನದ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

Exit mobile version