ಬೆಂಗಳೂರು: ಪೊಲೀಸರು ಇನ್ನು ಮುಂದೆ ಸೋಮಾರಿಗಳಾಗಿರಬಾರದು. ಫಿಟ್ನೆಸ್ ಕಾಯ್ದುಕೊಳ್ಳಬೇಕಿದ್ದು, ಯಾವುದೇ ಕಾರಣಕ್ಕೂ ಬೊಜ್ಜು ಕಾಣಬಾರದು. ಇದರ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ನೂತನ ಪೊಲೀಸ್ ಮಹಾ ನಿರ್ದೇಶಕ (ಡಿಜಿ & ಐಜಿಪಿ) ((DGP Karnataka) ಅಲೋಕ್ ಮೋಹನ್ (Alok Mohan) ಕಟ್ಟೆಚ್ಚರವನ್ನು ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಿಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಲ್ಲದೆ, ಹಿರಿಯ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ, ಇನ್ನು ಮುಂದೆ ಕಾರ್ಯನಿರ್ವಹಣೆ ಹೇಗೆ ಇರಬೇಕು ಎಂಬ ಬಗ್ಗೆಯೂ ಕಟ್ಟಪ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ; ಈಗ ಎಲ್ಲ ಮಂತ್ರಿಗಳೂ ನನ್ನ ವ್ಯಾಪ್ತಿಗೆ ಬರುತ್ತಾರೆ: ಯು.ಟಿ. ಖಾದರ್
ರೌಡಿಗಳನ್ನು ಮಟ್ಟ ಹಾಕಬೇಕಿದ್ದು, ರೌಡಿಸಂಗೆ ಅವಕಾಶ ನೀಡಬಾರದು. ಜನಸ್ನೇಹಿ ಪೊಲೀಸರು ಎಂದು ಅನ್ನಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ನಗರದಲ್ಲಿ ರೌಡಿಸಂ ಅನ್ನು ನಿಯಂತ್ರಣಕ್ಕೆ ತೆಗೆದಕೊಳ್ಳಲೇಬೇಕಿದೆ. ಮುಂದಿನ ದಿನಗಳಲ್ಲಿ ರೌಡಿ ಮುಕ್ತ ನಗರಕ್ಕೆ ಒತ್ತು ಕೊಡಬೇಕು. ಇನ್ನು ಸಾಮಾಜಿಕವಾಗಿ ವರ್ತನೆಗಳೂ ಬದಲಾಗಬೇಕು. ಇನ್ನು ಡ್ರಗ್ಸ್ ಜಾಲದ ಬಗ್ಗೆ ವಿಶೇಷ ನಿಗಾ ವಹಿಸಬೇಕಿದ್ದು, ಪತ್ತೆಗೆ ಹೊಸ ತಂತ್ರಗಾರಿಕೆಯನ್ನು ಅನುಸರಿಸಬೇಕು ಎಂದು ಸಭೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಡಿಜಿಪಿ ಅಲೋಕ್ ಮೋಹನ್ ಸೂಚನೆಯನ್ನು ನೀಡಿದ್ದಾರೆ.
ಅಲ್ಲದೆ, ಹಿರಿಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕಾರ್ಯನಿರ್ವಹಣೆ ಮಾಡುತ್ತೇನೆ ಎನ್ನುವುದನ್ನು ಬಿಡಬೇಕು. ಆಯಾ ವಿಭಾಗದ ಎಸಿಪಿಗಳು ಪ್ರತಿ ದಿನ ಪ್ರತಿ ಸ್ಟೇಷನ್‌ಗಳಿಗೆ ಕನಿಷ್ಠ ಒಂದು ಬಾರಿ ಭೇಟಿ ನೀಡಬೇಕು. ಡಿಸಿಪಿ ಮಟ್ಟದ ಅಧಿಕಾರಿ ದಿನಕ್ಕೆ ಒಂದು ಸ್ಟೇಷನ್‌ಗಾದರೂ ಭೇಟಿ ನೀಡಿ ಅಲ್ಲಿ ಯಾವ ರೀತಿ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆಂಬುದನ್ನು ಗಮನಿಸಬೇಕು. ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು. ಸರಿಯಾಗಿ ಕಾರ್ಯನಿರ್ವಹಣೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವೆಲ್ಲವನ್ನೂ ನಾನು ಮಾನಿಟರ್ ಮಾಡುತ್ತಿರುತ್ತೇನೆ ಎಂದೂ ಡಿಜಿಪಿ ಅಲೋಕ್ ಮೋಹನ್ ಸೂಚಿಸಿದ್ದಾರೆ.
ಇದನ್ನೂ ಓದಿ: Education News : ಮಗುವನ್ನು ಶಾಲೆಗೆ ಸೇರಿಸಲು ಹೊರಟಿರಾ? ವಯಸ್ಸಿನ ಲೆಕ್ಕಾಚಾರವನ್ನು ಸರಿಯಾಗಿ ತಿಳಿದುಕೊಳ್ಳಿ!
ಇನ್ನು ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿರುವುದರಿಂದ ಜನಸ್ನೇಹಿ ಪೊಲೀಸಿಂಗ್ ಅಡಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬೇಕು. ಸಾರ್ವಜನಿಕರ ಜತೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಹಿರಿಯ ಅಧಿಕಾರಿಗಳು ತಿಳಿಹೇಳಬೇಕು ಎಂದು ಸಭೆಯಲ್ಲಿ ಅಲೋಕ್ ಮೋಹನ್ ಹೇಳಿದ್ದಾರೆ.