Site icon Vistara News

ಅಗ್ನಿಪಥದಿಂದ ಸೇನೆಗೆ ಯಾವುದೇ ಹಾನಿಯಿಲ್ಲ; ಚಿತ್ರದುರ್ಗದಲ್ಲಿ ನಡ್ಡಾ ಹೇಳಿಕೆ

j p nadda

ಚಿತ್ರದುರ್ಗ: ಅಗ್ನಿಪಥ ನೇಮಕಾತಿ ಯೋಜನೆಯಿಂದ ಭಾರತೀಯ ಸೇನೆಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಈ ಬಗ್ಗೆ ಹರಡಿರುವ ತಪ್ಪು ಮಾಹಿತಿಯಿಂದ ದಿಕ್ಕು ತಪ್ಪಿರುವ ಯುವಜನತೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.

ಕೇಂದ್ರ ಸರಕಾರದ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಉದ್ದೇಶದಿಂದ ಇಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸೇನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಷ್ಟು ಕ್ರಮಗಳನ್ನು ಈ ಹಿಂದಿನ ಯಾವ ಸರ್ಕಾರವೂ ತೆಗೆದುಕೊಂಡಿರಲಿಲ್ಲ, ಬಿಜೆಪಿ ಸದಾ ಯುವಕರ ಹಿತದ ಬಗ್ಗೆ ಯೋಚಿಸುವ ಪಕ್ಷವಾಗಿದೆ ಎಂದು ವಿವರಿಸಿದರು.

ಅಗ್ನಿಪಥವು ಒಂದು ಕ್ರಾಂತಿಕಾರಿ ಯೋಜನೆಯಾಗಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಯುವಜನತೆ ಪಡೆದುಕೊಳ್ಳಬೇಕು. ಯುವಕರ ಪಕ್ಷವಾದ ಬಿಜೆಪಿ ಯುವಜನರ ಹಿತ ಕಾಪಾಡುತ್ತದೆ. ಇದರ ಬಗ್ಗೆ ಅನುಮಾನವೇ ಬೇಡ ಎಂದರು.

ಕೇಂದ್ರ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಒಂದೊಂದಾಗಿ ವಿವರಿಸಿದ ನಡ್ಡಾ, ಈ ಹಿಂದೆ ಗ್ರಾಮ ಪಂಚಾಯತ್‌ಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷಗಳ ಲೆಕ್ಕದಲ್ಲಿ ಹಣ ದೊರೆಯುತ್ತಿತ್ತು. ಅದೀಗ ಕೋಟಿಗಳ ಲೆಕ್ಕಕ್ಕೆ ಏರಿದೆ. ದಿಲ್ಲಿಯಲ್ಲಿ ಬಿಡುಗಡೆಯಾಗುವ ಹಣ ಮಧ್ಯವರ್ತಿಗಳ ಪಾಲಾಗದೆ ನೇರವಾಗಿ ಗ್ರಾಮ ಪಂಚಾಯ್ತಿಗಳಿಗೇ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ಮೊದಲ ಪ್ರಚಾರ ಸಭೆಯಂತೆ ಚುನಾವಣಾ ಭಾಷಣ ಮಾಡಿದ ನಡ್ಡಾ, ನಾಡಿನ ಹಿರಿಗೆ-ಗರಿಮೆಯನ್ನು ಹಾಡಿ ಹೊಗಳಿದರು. ರಾಜ್ಯದಲ್ಲಿ ʼಅಮೃತ ಕರ್ನಾಟಕʼ ಯೋಜನೆ ಉತ್ತಮವಾಗಿ ಅನುಷ್ಠಾನವಾಗುತ್ತಿದೆ. ರಾಜ್ಯ ಬಯಲು ಶೌಚಮುಕ್ತ ರಾಜ್ಯವಾಗಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಬಣ್ಣಿಸಿದರು.

ಎಲ್ಲರ ಮನೆಗೂ ನೀರು

ಜಲಜೀವನ ಯೋಜನೆ ಮೂಲಕ 2024ರೊಳಗೆ ಎಲ್ಲರ ಮನೆಗೂ ಕುಡಿಯುವ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ  75 ವರ್ಷದಲ್ಲಿ ಕೇವಲ 24 ಲಕ್ಷ ಮನೆಗೆ ನೀರು ಕೊಡಲಾಗಿತ್ತು. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರ ಎಲ್ಲರಿಗೂ ಕುಡಿಯುವ ನೀರು ದೊರೆಯುವಂತೆ ಮಾಡಿದೆ. ನಾವು ಬರೀ ಒಂದೂವರೆ ವರ್ಷದಲ್ಲಿ 25 ಲಕ್ಷ ಮನೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದೇವೆ ಎಂದರು.

ಕನ್ನಡದ ಧ್ವನಿಯಾಗಿ, ಕನ್ನಡಿಗರಿಗಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ ಎಂದು ಬಣ್ಣಿಸಿದ ಅವರು, ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ತಮ್ಮ ಮಾತಿನಲ್ಲಿ ಪ್ರಸ್ತಾಪಿಸದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಮುಂದೆ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದರು. ಮೋದಿಯವರದು ಹೆಂಗರಳು ಎಂದರು.

ಮೋದಿ ಅವರ ಸರಕಾರ ನಮಗೆ ಆನೆಬಲ ಕೊಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಕೊಡಲಿದೆ. 1500 ಹೊಸ ಪಂಚಾಯತಿಗಳನ್ನು ಅಭಿವೃದ್ಧಿ ಮಾಡುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದರು. ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಮುರುಘಾಮಠದಲ್ಲಿ ಹಲವಾರು ಮಠಾಧೀಶರನ್ನು ಜೆ ಪಿ ನಡ್ಡಾ ಭೇಟಿಯಾದರು.

ಸಾವಿರಾರು ಪ್ರತಿನಿಧಿಗಳು ಭಾಗಿ

ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದ ಈ ಸಮಾವೇಶದಲ್ಲಿ ರಾಜ್ಯದ ಎಲ್ಲೆಡೆಯಿಂದ ಸಾವಿರಾರು ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಮಾವೇಶದ ಮುಖ್ಯ ಆಕರ್ಷಣೆಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿದ್ದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಬಂದಿಳಿದ ನಡ್ಡಾ ಅವರಿಗೆ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದರು. ಚಿತ್ರದುರ್ಗಕ್ಕೆ ಬಂದಿಳಿದ ಕೂಡಲೇ ಮುರುಘಾಮಠಕ್ಕೆ ಭೇಟಿ ನೀಡಿದ ನಡ್ಡಾ ಅವರು ಮುರುಘಾ ಶರಣರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ವಿವಿಧ ಮಠಾಧೀಶರನ್ನು ಅವರು ಭೇಟಿ ಮಾಡಿದರು.
ನಂತರ ಸಮಾವೇಶ ಆಯೋಜಿತವಾಗಿದ್ದ ಅನುಭವ ಮಂಟಪಕ್ಕೆ ಆಗಮಿಸಿದ ನಡ್ಡಾ, “ಮಂಬರುವ ಚುನಾವಣೆಯಲ್ಲಿ ಪಂಚಾಯತಿಗಳಿಂದ ಕಮಲ ಅರಳಬೇಕು. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳಿಗೆ ನರೇಂದ್ರ ಮೋದಿ ಸರಕಾರದ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕುʼʼ ಎಂದು ಸಲಹೆ, ಸೂಚನೆ ನೀಡಿದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಶ್ರೀರಾಮುಲು, ಬಿ.ಸಿ.ಪಾಟೀಲ್, ಶಾಸಕರಾದ ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಜಿ.ಎಚ್.ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ | ಬೆಂಗಳೂರಿನಲ್ಲಿ ಜೆ.ಪಿ. ನಡ್ಡಾ: BJP ಎಸ್‌.ಸಿ. ಮೋರ್ಚಾ ಕಾರ್ಯಕ್ರಮದಲ್ಲಿ ಭಾಗಿ

Exit mobile version