Site icon Vistara News

Karnataka Election: ಸಿಎಂ ಕುರ್ಚಿಗೆ ಕಚ್ಚಾಡುವವರನ್ನು ತಿರಸ್ಕರಿಸಿ ದೇಶಭಕ್ತರನ್ನು ಆಯ್ಕೆಮಾಡಿ ಎಂದು ಕರೆ ನೀಡಿದ ಅಮಿತ್‌ ಶಾ

amit shah calls for reject congress and elect bjp in karnataka election

#image_title

ಬೆಂಗಳೂರು: ಯಾರು ಸಿಎಂ ಆಗಬೇಕು ಎಂಬ ಕಾರಣಕ್ಕೆ ಪರಸ್ಪರ ಕಚ್ಚಾಡುವವರನ್ನು ಮುಂಬರು ಚುನಾವಣೆಯಲ್ಲಿ (Karnataka Election) ತಿರಸ್ಕರಿಸಿ ಎನ್ನುವ ಮೂಲಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ, ಶಿಸ್ತು ಹಾಗೂ ದೇಶಭಕ್ತರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಿದ ನಂತರ ಅಮಿತ್‌ ಶಾ ಮಾತನಾಡಿದರು.

ಕರ್ನಾಟಕ ಹಾಗೂ ಭಾರತದ ಸಂದೇಶವನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯವನ್ನು ಈ ಇಬ್ಬರೂ ಮಹನೀಯರು ಮಾಡಿದ್ದಾರೆ. ವಿಧಾನಸೌಧಕ್ಕೆ ಮುಂದೆ ಯಾರೆಲ್ಲ ಶಾಸಕರಾಗಿ ಆಗಮಿಸುತ್ತಾರೆಯೋ ಅವರು ಇಬ್ಬರು ಮಹನೀಯರ ಮೌಲ್ಯಗಳನ್ನು ಕಲಿಯಲಿದ್ದಾರೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ನಾನು ಸೌಭಾಗ್ಯವಂತ ಎಂದು ಭಾವಿಸಿದ್ದೇನೆ.

ಬಸವಣ್ಣನವರ ಪ್ರತಿಮೆ, ಭಾರತವು ಪ್ರಜಾಪ್ರಭುತ್ವದ ತಾಯಿ ಎಂಬ ಸಂದೇಶವನ್ನು ನೀಡುತ್ತದೆ. ಅನುಭವ ಮಂಟಪದ ಮೂಲಕ ಸಮಾಜದ ಎಲ್ಲರನ್ನೂ ಒಟ್ಟಿಗೆ ತಂದ ಸಾಹಸವನ್ನು ಬಸವೇಶ್ವರರನ್ನು ಬಿಟ್ಟು ಬೇರೆ ಯಾರೂ ಮಾಡಲಿಲ್ಲ. ಮಹಿಳೆಯರೂ ಅನುಭವ ಮಂಟಪದಲ್ಲಿ ತಮ್ಮ ವಿಚಾರವನ್ನು ಪ್ರಕಟಿಸಿದರು. ದಾಸೋಹ ಪರಿಕಲ್ಪನೆಯನ್ನು ಬಸವಣ್ಣ ಕಲಿಸಿದರು. ಅನೇಕ ಸಮಾಜ ಸುಧಾರಕರನ್ನು ಜಗತ್ತಿಗೆ ಪರಿಚಯಿಸಿದರು. ದರ್ಶ ಜೀವನ ಏನು ಎಂದು ತಿಳಿಯಲು ಬಸವಣ್ಣನವರ ಮಾರ್ಗದಲ್ಲಿ ನಡೆಯಬೇಕು. ಪ್ರಜಾಪ್ರಭುತ್ವದ ಮೇಳೆ ನಂಬಿಕೆ ಇಡುವ ಜಗತ್ತಿನ ಎಲ್ಲರಿಗೂ ಬಸವಣ್ಣನವರ ಪ್ರತಿಮೆಯೇ ಮಾದರಿ.

ನಾಡಪ್ರಭು ಕೆಂಪೇಗೌಡರು ಉತ್ತಮ ಆಡಳಿತ ನಡೆಸಿದರು. ಶಕ್ತಿ ಎನ್ನುವುದು ಪ್ರಬಲ ಧ್ವನಿಯಲ್ಲಿ ಇರುವುದಿಲ್ಲ, ವಿಚಾರದಲ್ಲಿರುತ್ತದೆ. ಏಕೆಂದರೆ ಬೆಳೆಯು ಮಳೆಯಿಂದ ಬರುತ್ತದೆಯೇ ಹೊರತು ಪ್ರವಾಹದಿಂದಲ್ಲ. ಡಳಿತದ ಶಾಶ್ವತ ಕೆಲಸ ಹೇಗಿರಬೇಕು ಎಂದು ತಿಳಿಯಲು ನಾಡಪ್ರಭು ಕೆಂಪೇಗೌಡರನ್ನು ಅರಿಯಬೇಕು. ಸಾಮ್ರಾಟ್ ಅಚ್ಯುತರಾಯರ ಮಾರ್ಗದರ್ಶನದಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದರು.

ಮೊದಲು ಯಡಿಯೂರಪ್ಪ, ನಂತರ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೋದಿಯವರು ಟೀಂ ಇಂಡಿಯಾ ಭಾವದಲ್ಲಿ ಈ ನಾಲ್ಕು ವರ್ಷದಲ್ಲಿ ಮುನ್ನಡೆಸಿದ್ದಾರೆ. ಸರ್ಕಾರ ಲಕ್ಷಾಂತರ ಕೋಟಿ ರೂ. ಮೊತ್ತದ ಹೂಡಿಕೆ ಆಕರ್ಷಿಸಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ ಒಂದು ಕೋಟಿ ಡಾಲರ್ನ ಅನೇಕ ಸ್ಟಾರ್ಟಪ್ಗಳಿವೆ, ನಾವೀನ್ಯತೆಯಲ್ಲೂ ಕರ್ನಾಟಕ ಮುಂದಿದೆ.

ಕೋವಿಡ್ ಸಮಯದಲ್ಲಿ ಆಡಳಿತ ನಡೆಸಿದ್ದಕ್ಕೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ಯಡಿಯೂರಪ್ಪ ಅವರ ಮಾರ್ಗದಲ್ಲೇ ಬೊಮ್ಮಾಯಿ ಅವರು ಆಡಳಿತ ನಡೆಸಿದ್ದಾರೆ. ಇವರಿಬ್ಬರ ಆಡಳಿತದಲ್ಲಿ ಕರ್ನಾಟಕ ಅನೇಕ ಸಾಧನೆ ಮಾಡಿದೆ. ಹಿಂದಿನ ಚುನಾವಣೆಯಲ್ಲಿ ಸ್ವಲ್ಪ ಕಡಿಮೆ ಸೀಟುಗಳು ಬಂದವು, ಇದರಿಂದ ಅನೇಕ ತೊಂದರೆ ಆಯಿತು. ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿ. ಈ ಸರ್ಕಾರವು ಕರ್ನಾಟಕವನ್ನು ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಎಂದು ಭರವಸೆ ನೀಡುತ್ತೇನೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಮೀಸಲಾತಿ ನೀಡುತ್ತಿದ್ದರು. ಈ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯತರಿಗೆ ನೀಡುವ ಮೂಲಕ ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನಕ್ಕೆ ಅನುಗುಣವಾಗಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಮೋದಿ ಸರ್ಕಾರ ಅನೇಕ ಕೊಡುಗೆ ನೀಡಿದೆ. ಚೆನ್ನೈ-ಬೆಂಗಳೂರು-ಮೈಸೂರು ಜೋಡಿಸುವ ಮಾರ್ಗಕ್ಕೆ ಸರ್ಕಾರ ಸುಮಾರು 75 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. 2009ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ತೆರಿಗೆ ಪಾಲು ಹಾಗೂ ಅನುದಾನದ ರೂಪದಲ್ಲಿ ಕರ್ನಾಟಕಕ್ಕೆ 94 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ 2014ರಿಂದ 2019ರವರೆಗೆ 2.25 ಲಕ್ಷ ಕೋಟಿ ರೂ. ನೀಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸ್ನೇಹಿತರು ಉತ್ತರ ನೀಡಬೇಕು.

ಯಾರು ಮುಖ್ಯಮಂತ್ರಿ ಆಗಬೇಕು ಎಂದು ಜಗಳ ಮಾಡುವವರು ಬೇಕಿಲ್ಲ. ಶಿಸ್ತಿನ ದೇಶಭಕ್ತರ ಸಮೂಹ ಮೋದಿ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತದೆ. ಬೆಂಗಳೂರಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಮಲ ಅರಳುವಂತೆ ಮಾಡಿ ಎಂದು ಜನರಿಗೆ ಮನವಿ ಮಾಡಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಬೆಂಗಳೂರು ನಾಡಪ್ರಭು ಕೆಂಪೇಗೌಡರ ಕಾರ್ಯ ಅವಿಸ್ಮರಣೀಯ. ಪ್ರಸ್ತುತ ಕಾಲದಲ್ಲೂ ಕೆರೆಕಟ್ಟೆಗಳು ನೀರಿನ ಬವಣೆಯನ್ನು ನೀಗಿಸಿವೆ. ಇತ್ತೀಚೆಗೆ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡಿದ್ದರು, ಈ ಪ್ರತಿಮೆಯನ್ನು ಅಮಿತ್ ಶಾ ಅವರು ಅನಾವರಣ ಮಾಡುತ್ತಿರುವುದು ಹೆಮ್ಮೆಯ ವಿಚಾರ. ನಾನು ಸಿಎಂ ಆಗಿದ್ದಾಗ ಸರ್ವರಿಗೂ ಸಮಪಾಲು, ಸಮಬಾಳು ಎಂದವನು. ಆ ಜಾತಿ, ಈ ಜಾತಿ ಎಂದು ಭೇದ ಮಾಡದೆ ಎಲ್ಲರಿಗೂ ಸೇರುವಂತೆ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಸಿಎಂ ಬೊಮ್ಮಾಯಿ ಅವರೂ ಉತ್ತಮ ಆಡಳಿತ ನೀಡುತ್ತಿರುವುದು ಶ್ಲಾಘನೀಯ ಎಂದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಹಾಕಿಕೊಟ್ಟ ತತ್ವಾದರ್ಶಗಳ ನೆಲೆಯಲ್ಲಿ ಆಡಳಿತ ನಡೆಸಿದ ಧರ್ಮಪ್ರಭು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಬಳಿ ಸ್ಥಾಪಿಸಬೇಕು ಎಂದು ಕೇಳಿಕೊಂಡಾಗ ಒಪ್ಪಿದ್ದನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿಕೊಟ್ಟಿದ್ದಾರೆ. ಆರ್. ಅಶೋಕ್ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡು ನಡೆಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮದ ಅವಶ್ಯಕತೆ ಇತ್ತು. ಯಾವುದೇ ವ್ಯಕ್ತಿಗೆ ಮಾನಸಿಕ ಶಕ್ತಿ ಬರುವುದು ಸಂಸ್ಕೃತಿಯಿಂದ. ಸಂಸ್ಕೃತಿಯೇ ನಿಮ್ಮನ್ನು ಇತರರಿಂದ ಬೇರ್ಪಡಿಸುತ್ತದೆ. ಕಲೆಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗೆ ಶಕ್ತಿ ಬರುತ್ತದೆ ಎನ್ನುವಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಿಧಾನಸೌಧ ನಿರ್ಮಾಣ ಆದ ಮೇಲೆ ಅನೇಕ ಪುತ್ಥಳಿಗಳು ಸ್ಥಾಪನೆಯಾಗಿವೆ. ಇಲ್ಲಿ ಅನೇಕ ಸಮಾರಂಭಗಳು ನಡೆದಿವೆ. ಆದರೆ ಇಂದು ಈ ನಾಡಿಗೆ ಬೆಳಕು ನೀಡಿದ, ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ. ಇವನಾರವ ಇವನಾರವ ಎನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಎಂಬುದನ್ನು ಅರಿತು ಎಲ್ಲರೂ ಆಡಳಿತ ನಡೆಸಿದ್ದರೆ ಈ ಜಗತ್ತಿನಲ್ಲಿ ಯಾವ ಯುದ್ಧವೂ ನಡೆಯುತ್ತಿರಲಿಲ್ಲ. ಆಡಳಿತ ಹೇಗೆ ನಿರ್ವಹಣೆ ಮಾಡಬೇಕು, ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಮಾದರಿ ನಾಡಪ್ರಭು ಕೆಂಪೇಗೌಡರು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ರಾಜ್ಯ ಆದ ಮೊದಲ ಹತ್ತು ವರ್ಷದಲ್ಲೇ ಈ ಕಾರ್ಯಕ್ರಮ ನಡೆಯಬೇಕಿತ್ತು. ಕಾಯಕಯೋಗಿ, ಸಮಾನತೆಗೆ ನಿಜವಾದ ಅರ್ಥ ನೀಡಿದವರು ವಿಶ್ವ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರು. ಇಂದು ಇಡೀ ಜಗತ್ತಿನಲ್ಲಿ ಬೆಳಗುತ್ತಿರುವ ಬೆಂಗಳೂರಿನ ವಿಧಾನಸೌಧದ ಎದುರು ಇಬ್ಬರ ಪ್ರತಿಮೆ ಇರಬೇಕಾದ್ದು ಅತ್ಯಂತ ಸಹಜವಾಗಿರಬೇಕಾಗಿತ್ತು.

ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವದ ಸಂಸತ್ ಭವನ ಇದ್ದರೆ ಅನುಭವ ಮಂಟಪ. ಪಶ್ಚಿಮ ದೇಶದಲ್ಲಿ ಮ್ಯಾಗ್ನಾ ಕಾರ್ಟಾ ಮೊದಲು ಎನ್ನುತ್ತಾರೆ, ಅದಕ್ಕಿಂತಲೂ ಮೊದಲು ಈ ಅನುಭವ ಮಂಟಪ. ಅಲ್ಲಿನ ವೈಚಾರಿಕ ಇನ್ನಷ್ಟು ಹೆಚ್ಚು ಮೂಡಿ ಬರಲಿ ಎಂದು ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗಿದೆ. ನಾಡಪ್ರಭು ಕೆಂಪೇಗೌಡರು ಆಡಳಿತ, ಕೆರೆಕಟ್ಟೆ ನಿರ್ಮಾಣ, ಮಾರುಕಟ್ಟೆ ನಿರ್ಮಾಣ, ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶ ನೀಡಿದ್ದಾರೆ. ಬಸವಣಣನವರ ಆಶಯಗಳನ್ನು ಜಾರಿಗೊಳಿಸಿದವರು ಕೆಂಪೇಗೌಡರು ಎಂದು ತಿಳಿಸಿದರು.

Exit mobile version