ಬಳ್ಳಾರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಭರವಸೆ ಇಟ್ಟು ಬಿಜೆಪಿಗೆ ಮತ ಹಾಕಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ಕರ್ನಾಟಕವನ್ನು ನಾವು ದಕ್ಷಿಣ ಭಾರತದಲ್ಲಿಯೇ ನಂ.1 ರಾಜ್ಯವನ್ನಾಗಿ ಮಾಡುವುದಲ್ಲದೆ, ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕರೆ ನೀಡಿದರು. ಈ ಮೂಲಕ ಯಡಿಯೂರಪ್ಪ ಅವರ ಅನಿವಾರ್ಯತೆಯನ್ನು ಶಾ ಪ್ರಸ್ತಾಪಿಸಿದರು ಎಂದೇ ವಿಶ್ಲೇಷಿಸಲಾಗುತ್ತಿದೆ.
ಅವರು ಸಂಡೂರಿನಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಗೆ ಬಿಎಸ್‌ವೈ ಅನಿವಾರ್ಯ ಎಂಬ ಸಂದೇಶ!
ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಭರವಸೆ ಇಟ್ಟು ಬಿಜೆಪಿಗೆ ಮತ ಹಾಕಿ, ಕರ್ನಾಟಕವನ್ನು ದಕ್ಷಿಣದಲ್ಲಿ ನಂ.1 ರಾಜ್ಯವನ್ನಾಗಿ ಮಾಡುತ್ತೇವೆ ಎಂಬ ಮಾತಿನಲ್ಲಿ ಮುಂದಿನ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲು ಯಡಿಯೂರಪ್ಪ ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಿದರು. ಬಳಿಕ ಬಿ.ಎಸ್. ಯಡಿಯೂರಪ್ಪ ಅವರನ್ನು ಒಳಗೊಂಡಂತೆ ನಾಲ್ಕು ಜಿಲ್ಲೆಗಳ ಕೋರ್ ಕಮಿಟಿ ಸಭೆ ಷಾ ನಡೆಸಿದರು. ಈ ಮೂಲಕ ಬಿಎಸ್‌ವೈ ಬಿಜೆಪಿಗೆ ಅನಿವಾರ್ಯ ಎಂಬ ಸಂದೇಶವನ್ನು ಅವರು ರವಾನಿಸಿದಂತಾಗಿದೆ.
ಅಮಿತ್ ಶಾ ಮಾತುಗಳ ವಿವರ
ನೀವು ಜೆಡಿಎಸ್‌ಗೆ (JDS) ಹಾಕುವ ಒಂದೊಂದು ಮತವು ಕಾಂಗ್ರೆಸ್ (Congress) ಹೋಗುತ್ತದೆ. ಇನ್ನು ನೀವು ಕಾಂಗ್ರೆಸ್‌ಗೆ ನೀಡುವ ಒಂದೊಂದು ಮತವೂ ಸಿದ್ದರಾಮಯ್ಯ (Siddaramaiah) ಮತ್ತವರ ಎಟಿಎಂ ಸರ್ಕಾರಕ್ಕೆ ಹೋಗುತ್ತದೆ. ಅವರು ನವ ದೆಹಲಿಯವರ ಎಟಿಎಂ ಆಗಿದ್ದಾರೆ. ಹೀಗಾಗಿ ಭ್ರಷ್ಟಾಚಾರ ಮಾಡುವ ಇವರನ್ನು ತೊಲಗಿಸಬೇಕಿದೆ ಎಂದು ಅಮಿತ್ ಶಾ ಕರೆ ನೀಡಿದರು.
ಇದು ಹಕ್ಕಬುಕ್ಕ, ಕೃಷ್ಣದೇವರಾಯರು ಆಳಿದ ಭೂಮಿ ಸಂಡೂರು ಆಗಿದೆ. ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಬೇಕು. ರಾಜ್ಯದಲ್ಲಿ ಬಿಜೆಪಿ ಬಹುಮತದಲ್ಲಿ ಅಧಿಕಾರಕ್ಕೆ ಬರಲು ಆಶೀರ್ವದಿಸಬೇಕು ಎಂದು ಅಮಿತ್ ಶಾ ಕೋರಿದರು.
ಇದನ್ನೂ ಓದಿ: Karnataka Election 2023: ಬಗೆಹರಿಯದ ಹಾಸನ ಜೆಡಿಎಸ್ ಟಿಕೆಟ್ ಗೊಂದಲ; ಸರಣಿ ಸಭೆಗೆ ಮುಂದಾದ ರೇವಣ್ಣ ಹೇಳಿದ್ದೇನು?
೨೦೧೪ ಮತ್ತು ೨೦೧೯ರಲ್ಲಿ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರಿಗೆ ನೀವು ಆಶೀರ್ವಾದ ಮಾಡಿದಿರಿ. ಹೀಗಾಗಿ ಅವರು ಪ್ರಧಾನಿಯಾದರು. ಇನ್ನು ೨೦೧೮ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವನ್ನಾಗಿ ನೀವು ಆಶೀರ್ವಾದ ನೀಡಿದಿರಿ. ಆದರೆ, ಪೂರ್ಣ ಬಹುಮತಕ್ಕೆ ಅಲ್ಪ ಸೀಟುಗಳ ಕೊರತೆಯಾಯಿತು. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಭ್ರಷ್ಟಾಚಾರದ ಸರ್ಕಾರವನ್ನು ಮಾಡಿದವು. ಈ ಎರಡೂ ಪಕ್ಷಗಳು ಕುಟುಂಬ ರಾಜಕಾರಣವನ್ನು ಹೊಂದಿವೆ. ಆದರೆ, ಒಂದು ವಿಷಯವನ್ನು ಎಲ್ಲರೂ ಗಮನಿಸಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ಕುಟುಂಬ ರಾಜಕಾರಣ ಹೊಂದಿರುವವರು ಬಡವರ ಕಲ್ಯಾಣವನ್ನು ಮಾಡಿಲ್ಲ. ಮಾಡಲು ಸಾಧ್ಯವಾಗುವುದೂ ಇಲ್ಲ ಎಂದು ಕಿಡಿಕಾರಿದ ಶಾ, ಹೀಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ದೇಶವನ್ನು ಸುರಕ್ಷಿತವಾಗಿಡುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವುಳ್ಳ ಬಿಜೆಪಿ ಪಕ್ಷ ಒಂದು ಕಡೆಯಾದರೆ, ಇನ್ನೊಂದು ಕಡೆಗೆ ರಾಹುಲ್ ಬಾಬಾ ಜತೆಗಿರುವ ತುಕಡೇ ತುಕಡೇ ಆಗಿರುವ ಇತರ ಪಕ್ಷಗಳ ನೇತೃತ್ವದ ಕಾಂಗ್ರೆಸ್ ಪಕ್ಷವಾಗಿದೆ. ಹೀಗಾಗಿ ಈ ಎರಡು ಪಕ್ಷಗಳಲ್ಲಿ ಯಾವುದು ಮುಖ್ಯ ಎಂಬುದನ್ನು ನೀವು ನಿರ್ಧರಿಸಬೇಕಿದೆ ಎಂದು ಶಾ ಕರೆ ನೀಡಿದರು.
ಕರ್ನಾಟಕದಲ್ಲಿ ದುಸ್ವಪ್ನವಾಗಿದ್ದ ಪಿಎಫ್‌ಐ ಸಂಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾನ್ ಮಾಡಿದರು. ಆದರೆ, ಕಾಂಗ್ರೆಸ್ ಸರ್ಕಾರದವರು ಈ ಪಿಎಫ್‌ಐ ಸಂಘಟನೆಯವರ ೧೭೦೦ಕ್ಕೂ ಹೆಚ್ಚು ಕೇಸ್‌ಗಳನ್ನು ವಾಪಸ್ ಪಡೆದುಕೊಂಡರು ಎಂದು ಶಾ ಕುಟುಕಿದರು.
ಇದನ್ನೂ ಓದಿ: Amit Shah: ಭಾವುಕರಾಗಿ ಇಂದ್ರಮ್ಮ ಎಂದು ವೋಟು ಹಾಕಬೇಡಿ, ಆ ಕಾಲ ಮುಗಿಯಿತು; ಸಚಿವ ಆನಂದ್ ಸಿಂಗ್
ಮೋದಿ ಬಂದಿದ್ದಕ್ಕೆ ಮಾತ್ರ ರಾಮಮಂದಿರ ನಿರ್ಮಾಣ
ಇಷ್ಟು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಅಯೋದ್ಯೆಯಲ್ಲಿ ರಾಮ ಮಂದಿರ ಕಟ್ಟಲಿಲ್ಲ. ಕೇವಲ ಜನರನ್ನು ದಿಕ್ಕುತಪ್ಪಿಸುತ್ತಾ ಬಂತು. ಆದರೆ, ೨೦೧೯ರಲ್ಲಿ ನೀವು ಮತ್ತೆ ನರೇಂದ್ರ ಮೋದಿ ಅವರಿಗೆ ಅಧಿಕಾರ ನೀಡಿದಿರಿ. ಇದರ ಪರಿಣಾಮವಾಗಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈಗ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ್ದ ಮೋದಿ ಮಾತ್ರ
ಸುರಕ್ಷಿತ ಭಾರತವನ್ನು ನಿರ್ಮಾಣ ಮಾಡಬೇಕೋ? ಬೇಡವೋ? ಎಂದು ಪ್ರಶ್ನಿಸಿದ ಶಾ, ೧೦ ವರ್ಷಗಳ ಕಾಲ ಎಐಸಿಸಿ ಅಧಿನಾಯಕಿಯಾಗಿದ್ದ ಸೋನಿಯಾ ಗಾಂಧಿ ಹಾಗೂ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಜನರ ದಿಕ್ಕು ತಪ್ಪಿಸಿದರು. ಅವರು ಅಧಿಕಾರದಲ್ಲಿದ್ದಾಗ ಪಾಕಿಸ್ತಾನ ಹಲವು ಬಾರಿ ದಾಳಿ ನಡೆಸಿದರೂ ಯಾವುದೇ ರೀತಿಯಾದಂತಹ ಪ್ರತ್ಯುತ್ತರವನ್ನು ನೀಡಲಿಲ್ಲ. ಆದರೆ, ಆ ಕೆಲಸವನ್ನು ನರೇಂದ್ರ ಮೋದಿ ಅವರ ಸರ್ಕಾರ ಮಾಡಿತು. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ೧೦ ದಿನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಡೆಸಲಾಯಿತು. ಉಗ್ರವಾದಿಗಳ ಮನೆಗೇ ನುಗ್ಗಿ ಅವರ ಮಾರಣಹೋಮ ಮಾಡುವ ಮೂಲಕ ಮೋದಿ ತಕ್ಕ ಉತ್ತರವನ್ನು ನೀಡಿದರು ಎಂದು ಶಾ ಹೇಳಿದರು.
ಸಿಎಂ ಖುರ್ಚಿಗಾಗಿ ಡಿಕೆಶಿ-ಸಿದ್ದರಾಮಯ್ಯ ಕಿತ್ತಾಟ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿತ್ತಾಡಿಕೊಳ್ಳುತ್ತಿದ್ದಾರೆ. ಇವರ ಈ ಕಿತ್ತಾಟಗಳ ಮಧ್ಯೆ ಕರ್ನಾಟಕ ರಾಜ್ಯದ ಜನತೆಯ ಅಭಿವೃದ್ಧಿ ಖಂಡಿತಾ ಆಗದು. ಕಲ್ಯಾಣ ಕರ್ನಾಟಕದ ಕಲ್ಯಾಣವಾಗಬೇಕಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರವೇ ಸಾಧ್ಯ ಎಂದು ಅಮಿತ್ ಶಾ ಹೇಳಿದರು.
ಪ್ರಧಾನಿ ಮೋದಿಯವರು ಬಡವರ ಮನೆಗೆ ಗ್ಯಾಸ್ ಸಂಪರ್ಕ ನೀಡಿದರು, ಶೌಚಾಲಯವನ್ನು ನಿರ್ಮಿಸಿಕೊಟ್ಟರು, ವಿದ್ಯುತ್ ಸಂಪರ್ಕ ನೀಡಿದರು, ಬ್ಯಾಂಕ್ ಅಕೌಂಟ್ ಮಾಡಿಸಿಕೊಟ್ಟರು. ಅಲ್ಲದೆ, ೫ ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆಯನ್ನು ಕಲ್ಪಿಸಿಕೊಟ್ಟರು. ಅಲ್ಲದೆ, ಒಂದು ರೂಪಾಯಿಯನ್ನೂ ಕೊಡದೆ ಕೊರೊನಾ ಲಸಿಕೆಯನ್ನು ಎಲ್ಲರೂ ಹಾಕಿಸಿಕೊಳ್ಳುವಂತೆ ನರೇಂದ್ರ ಮೋದಿಯವರು ನೋಡಿಕೊಂಡರು. ಆ ಮೂಲಕ ಕರ್ನಾಟಕದ ಜನತೆಯ ಸುರಕ್ಷತೆಯನ್ನು ನೋಡಿಕೊಂಡರು ಎಂದು ಅಮಿತ್ ಶಾ ಹೇಳುವ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಕಾಶ್ಮೀರ ನಮ್ಮದಾಗಿದೆ. ಆದರೆ, ಕೆಲವರು ಇದಕ್ಕೆ ಅಡ್ಡಿಪಡಿಸಿದರು. ಆರ್ಟಿಕಲ್ ೩೭೦ ತೆಗೆದುಹಾಕಲು ನಾವು ಮುಂದಾದಾಗ ಮಮತ, ಸಮತಾ, ಎಸ್ಪಿ, ಕಾಂಗ್ರೆಸ್, ಜೆಡಿಯುನಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ನರೇಂದ್ರ ಮೋದಿ ಬಂದ ಮೇಲೆ ಒಂದೇ ಬಾರಿಗೆ ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ಯನ್ನು ತೆಗೆದುಹಾಕಿ ಅದನ್ನು ಭಾರತದೊಂದಿಗೆ ಜೋಡಿಸುವ ಕೆಲಸ ಮಾಡಿದರು. ಆದರೆ, ಇದರ ಬಗ್ಗೆ ರಾಹುಲ್ ಬಾಬಾ (ಗಾಂಧಿ) ಪ್ರತಿಕ್ರಿಯೆ ನೀಡುತ್ತಾ “ಹೀಗೆ ಮಾಡಿದರೆ ರಕ್ತದ ಹೊಳೆಯೇ ಹರಿಯುತ್ತದೆ ಎಂದು ಹೇಳಿದ್ದರು. ಕೊನೆಗೆ ಒಂದು ಕಲ್ಲನ್ನೂ ಅಲ್ಲಾಡಿಸಲು ಆಗಲಿಲ್ಲ ಎಂದು ಅಮಿತ್ ಶಾ ಟೀಕಿಸಿದರು.
ಇದನ್ನೂ ಓದಿ: B. Sriramulu: ಸಂಡೂರಿನಲ್ಲಿಯೂ ಸ್ಪರ್ಧೆ ಕುರಿತು ಗೊಂದಲದ ಹೇಳಿಕೆ ನೀಡಿದ ಸಚಿವ ಬಿ. ಶ್ರೀರಾಮುಲು
ಅಮಿತ್ ಶಾಗೆ ಬೆಳ್ಳಿ ಗದೆ ಉಡುಹೊರೆ!
ಅಮಿತ್ ಶಾ ಅವರಿಗೆ ಬೆಳ್ಳಿ ಗದೆಯನ್ನು ಮತ್ತು ಕುಮಾರಸ್ವಾಮಿ ದೇವಸ್ಥಾನದ ಫೋಟೋ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು, ಶಶಿಕಲಾ ಜೊಲ್ಲೆ ಸೇರಿದಂತೆ ಇತರರು ಇದ್ದರು.