Site icon Vistara News

Karnataka Election | ಹಳೆ ಮೈಸೂರು ಭಾಗ ಗೆಲ್ಲಲು ಬಿಜೆಪಿ ನಾಯಕರಿಗೆ 30+ ಟಾಸ್ಕ್ ನೀಡಿದ ಅಮಿತ್ ಶಾ!

Karnataka Election 2023 Amit Shah to hold massive rally in Sandur on Feb 23 Sriramulu

ಮಾರುತಿ ಪಾವಗಡ, ಬೆಂಗಳೂರು

ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಈ ಬಾರಿ ವಿಭಿನ್ನ ತಂತ್ರದೊಂದಿಗೆ ಸಿದ್ಧವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದೆಯಾದರೂ, ಅದು ಸ್ವಂತ ಸಂಪೂರ್ಣ ಬಹುಮತದಿಂದಲ್ಲ. ಅದು ‘ಆಪರೇಷನ್ ಕಮಲ’ ಮೂಲಕ ‘ಎರವಲು ಬಹುಮತ’ದ ಸರ್ಕಾರವನ್ನು ನಡೆಸುತ್ತಿದೆ. ಹಾಗಾಗಿ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಸ್ವಂತ ಬಲದ ಮೇಲೆಯೇ ಅಧಿಕಾರಕ್ಕೆ ಏರುವ ನಿಟ್ಟಿನಲ್ಲಿ ಈ ಬಾರಿ ಸಜ್ಜಾಗಿದೆ. ಅದೇ ಕಾರಣಕ್ಕೆ, ಸದ್ಯ ಕರ್ನಾಟಕದ ಪ್ರವಾಸದಲ್ಲಿರುವ ಬಿಜೆಪಿಯ ಚಾಣಕ್ಯ ಎಂದು ಕರೆಯಿಸಿಕೊಳ್ಳುವ ಗೃಹ ಸಚಿವ ಅಮಿತ್ ಶಾ ಅವರು, ಸ್ಥಳೀಯ ಬಿಜೆಪಿ ನಾಯಕರಿಗೆ ಹಳೆಯ ಮೈಸೂರು ಭಾಗಕ್ಕೆ (Old Mysore region) ಸಂಬಂಧಿಸಿದಂತೆ 30+ ಟಾಸ್ಕ್ ನೀಡಿದ್ದಾರೆ!

30+ ಟಾಸ್ಕ್ ಏನೆಂದರೆ, ಹಳೆಯ ಮೈಸೂರು ಭಾಗದಲ್ಲಿ 30ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲುವುದಾಗಿದೆ. ಕರ್ನಾಟಕದ ಮಟ್ಟಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ರಾಜ್ಯ ರಾಜಕಾರಣವನ್ನು ನಿರ್ಧರಿಸುವ ಬಹುದೊಡ್ಡ ಸಮುದಾಯಗಳು. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಹೆಚ್ಚಿರುವ ಲಿಂಗಾಯತ ಸಮುದಾಯವು ಹೆಚ್ಚು ಕಡಿಮೆ ಬಿಜೆಪಿಯ ಜತೆಗಿದೆ. ಅದೇ ಕಾರಣಕ್ಕೆ ಬಿಜೆಪಿ 80-90 ಸೀಟುಗಳನ್ನು ಸರಳವಾಗಿ ಗೆಲ್ಲಲು ಸಾಧ್ಯವಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯವು ಇಂದಿಗೂ ಜೆಡಿಎಸ್‌ಗೆ ಶಕ್ತಿಯನ್ನು ತುಂಬುತ್ತಿದೆ. ಆದರೆ, ಈ ಬಾರಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ಕಮಲವನ್ನು ಅರಳಿಸಿಯೇ ಸಿದ್ಧ ಎಂಬ ಆತ್ಮವಿಶ್ವಾಸವನ್ನು ಬಿಜೆಪಿ ಹೊಂದಿದೆ.

ಹಳೆ ಮೈಸೂರು ಟಾರ್ಗೆಟ್!
ಮೈಸೂರು, ಮಂಡ್ಯ, ಬೆಂಗಳೂರು ರೂರಲ್ ಕೇಂದ್ರೀತ ರಾಜಕಾರಣದಲ್ಲಿ ಜೆಡಿಎಸ್ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಆ ಕಾರಣಕ್ಕಾಗಿ ಅದು ಹಳೆ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿದೆ. ಈ ಬಿಜೆಪಿಯ ಈ ನಡೆ ಸಹಜವಾಗಿಯೇ ಜೆಡಿಎಸ್‌ಗೆ ಆತಂಕವನ್ನು ತಂದಿದೆ. ಸದ್ಯಕ್ಕಂತೂ, ಹಳೆ ಮೈಸೂರು ಭಾಗವು ಜೆಡಿಎಸ್‌ನ ಭದ್ರಕೋಟೆಯಾಗಿದೆ. ಈ ಕೋಟೆಯನ್ನು ಕೈವಶ ಮಾಡಿಕೊಳ್ಳಲು ಬಿಜೆಪಿ ಈ ಭಾಗ ಕೇಂದ್ರಿಕೃತವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಮೀಸಲಾತಿಯ ಜಾಣ ನಡೆ
ಒಕ್ಕಲಿಗ ಮೀಸಲಾತಿ ವಿಚಾರದಲ್ಲಿ ಜಾಣ ನಡೆ ಇಟ್ಟು, ಪ್ರಭಾವಿ ಸಮುದಾಯವನ್ನು ಓಲೈಕೆಗೆ ಮುಂದಾಗಿದೆ ಬಿಜೆಪಿ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗ ಮತಗಳನ್ನು ಸೆಳೆಯುವ ಪ್ರಯತ್ನವನ್ನೂ ಬಿಜೆಪಿ ಮಾಡಿದೆ. ಹೀಗೆ ಸಾಲು ಸಾಲು ಪ್ರಯತ್ನಗಳ ಮೂಲಕ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ಈ ಚುನಾವಣೆಯಲ್ಲಿ ಹೆಚ್ಚಿಸಿಕೊಳ್ಳುವುದಕ್ಕೆ ಕಾಯುತ್ತಿದೆ.

ಜೆಡಿಎಸ್‌ಗೆ ಆತಂಕ
ಒಕ್ಕಲಿಗ ಸಮುದಾಯವನ್ನೇ ನಂಬಿ ರಾಜಕಾರಣ ಮಾಡುತ್ತಿರುವ ಜಾತ್ಯತೀತ ಜನತಾ ದಳಕ್ಕೆ ಈಗ ಆತಂಕ ಶುರುವಾಗಿದೆ. ಸಾಕಷ್ಟು ಹಣಬಲ ಮತ್ತು ಜನಬಲವನ್ನು ಹೊಂದಿರುವ ಬಿಜೆಪಿ, ಹಳೇ ಮೈಸೂರು ಭಾಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ತಪ್ಪಿಸುವುದು ಹೇಗೆ ಎಂಬ ಚಿಂತೆಯಲ್ಲಿದೆ. ಅದೇ ಕಾರಣಕ್ಕೆ ಜೆಡಿಎಸ್‌ನ ಪ್ರಮುಖ ನಾಯಕರಾಗಿರುವ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಪಂಚರತ್ನ ಯಾತ್ರೆಯ ಮೂಲಕ ತಮ್ಮ ಪಕ್ಷದ ಮತದಾರರು ಚದುರಿ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ, ಈ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಧ್ರುವೀಕರಣಗೊಂಡರೆ, ಜೆಡಿಎಸ್‌ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಅದರಲ್ಲೇನೂ ಅನುಮಾನಗಳಿಲ್ಲ. ಹಾಗಾಗಿ, ತಮ್ಮ ಮತಗಳು ಬೇರೆ ಕಡೆ ವಾಲದಂತೆ ನೋಡಿಕೊಳ್ಳುವುದು ಜೆಡಿಎಸ್‌ಗೆ ದೊಡ್ಡ ಸವಾಲಾಗಿದೆ.

ಹೇಗಿದೆ ಮಿಷನ್ 30+ ಲೆಕ್ಕಾಚಾರ?
ಹಳೆ ಮೈಸೂರು ಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು, ರಾಮನಗರ ಜಿಲ್ಲೆಯಲ್ಲಿ 4, ಮಂಡ್ಯ ಜಿಲ್ಲೆಯಲ್ಲಿ 7 ಹಾಗೂ ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 26 ಕ್ಷೇತ್ರಗಳಾಗುತ್ತವೆ. ಅದೇ ರೀತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳಿವೆ.

ಸದ್ಯದ ಪರಿಸ್ಥಿತಿ ಹೇಗಿದೆ?
ಬೆಂಗಳೂರು ಗ್ರಾಮಂತರ ಜಿಲ್ಲೆಯ ಹೊಸಕೋಟೆ ಪಕ್ಷೇತರ ಪಾಲಾಗಿದೆ(ಶರತ್ ಬಚ್ಚೇಗೌಡ), ದೇವನಹಳ್ಳಿ-ಜೆಡಿಎಸ್(ನಾರಾಯಣಸ್ವಾಮಿ ಎಲ್ ಎನ್), ದೊಡ್ಡಬಳ್ಳಾಪುರ-ಕಾಂಗ್ರೆಸ್(ವೆಂಕಟರಮಣಯ್ಯ), ನೆಲಮಂಗಲ-ಜೆಡಿಎಸ್(ಕೆ ಶ್ರೀನಿವಾಸಮೂರ್ತಿ) ಶಾಸಕರಿದ್ದಾರೆ.

ಅದೇ ರೀತಿ ರಾಮನಗರ ಜಿಲ್ಲೆಯ ರಾಮನಗರ ಕ್ಷೇತ್ರವು ಜೆಡಿಎಸ್(ಅನಿತಾ ಕುಮಾರಸ್ವಾಮಿ) ಪಾಲಾಗಿದ್ದರೆ, ಚೆನ್ನಪಟ್ಟಣ-ಜೆಡಿಎಸ್(ಎಚ್ ಡಿ ಕುಮಾರಸ್ವಾಮಿ), ಕನಕಪುರ- ಕಾಂಗ್ರೆಸ್(ಡಿ ಕೆ ಶಿವಕುಮಾರ್) ಮತ್ತು ಮಾಗಡಿಯಲ್ಲಿ ಜೆಡಿಎಸ್(ಎ ಮಂಜುನಾಥ್) ಶಾಸಕರಿದ್ದಾರೆ.

ಇನ್ನು ಮಂಡ್ಯ ಜಿಲ್ಲೆಯ ಒಟ್ಟು ಏಳು ಕ್ಷೇತ್ರಗಳ ಪೈಕಿ ಕೆ ಆರ್ ಪೇಟೆ ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕೆ ಆರ್ ಪೇಟೆಯಲ್ಲಿ ಮಾತ್ರ ಬಿಜೆಪಿಯ ನಾರಾಯಣಗೌಡ ಶಾಸಕರಾಗಿದ್ದಾರೆ. ಇನ್ನೂ ಮೈಸೂರು ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳನ್ನು ನೋಡುವುದಾದರೆ, ಒಟ್ಟು 11 ಕ್ಷೇತ್ರಗಳಿವೆ. ಈ ಪೈಕಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ, 3 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ತನ್ನ ಪ್ರಾತಿನಿಧ್ಯ ವನ್ನುಹೊಂದಿದೆ.

ಈ ನಾಲ್ಕು ಜಿಲ್ಲೆಗಳ ಒಟ್ಟು 26 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7, ಜೆಡಿಎಸ್ 14, ಬಿಜೆಪಿ 4 ಹಾಗೂ ಪಕ್ಷೇತರ 1 ಕ್ಷೇತ್ರದಲ್ಲಿ ಪ್ರಾತಿನಿಧ್ಯವನ್ನು ಹೊಂದಿದೆ. ಇನ್ನು ತುಮಕೂರು ಜಿಲ್ಲೆಯನ್ನು ಪರಿಗಣಿಸುವುದಾದರೆ, ಒಟ್ಟು 10 ಕ್ಷೇತ್ರಗಳಿವೆ. ಈ ಪೈಕಿ 4 ಕ್ಷೇತ್ರದಲ್ಲಿ ಬಿಜೆಪಿ, 3 ಕ್ಷೇತ್ರದಲ್ಲಿ ಕಾಂಗ್ರೆಸ್, 3 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅದೇ ರೀತಿ, ಹಾಸನ ಜಿಲ್ಲೆಯಲ್ಲಿ ಒಟ್ಟು 7 ಕ್ಷೇತ್ರಗಳಿವೆ. ಈ ಪೈಕಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೆ, ಒಂದು ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಅಂದರೆ, ಹಳೇ ಮೈಸೂರು ಭಾಗದಲ್ಲಿ ಬೆಂಗಳೂರು ಹೊರತು ಪಡಿಸಿ 59 ಕ್ಷೇತ್ರಗಳಲ್ಲಿ ಬಿಜೆಪಿಯ ಕನಿಷ್ಠ 30 ಸ್ಥಾನಗಳನ್ನಾದರೂ ಗೆಲ್ಲುವ ರಣ ತಂತ್ರವನ್ನು ಹೆಣೆಯುತ್ತಿದೆ ಎಂದು ಹೇಳಬಹುದು.

ಇದನ್ನೂ ಓದಿ | Amit shah | ಹಳೇ ಮೈಸೂರು ಭಾಗದಲ್ಲಿ 30ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು: ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

Exit mobile version