Site icon Vistara News

Amit Shah Visit : ವಿಜಯೇಂದ್ರ ಹೆಗಲ ಮೇಲೆ ಕೈ, ಅವರಿಂದಲೇ ಹೂಗುಚ್ಛ ಸ್ವೀಕಾರ; ದೊಡ್ಡ ಸಂದೇಶ ರವಾನಿಸಿದ ಅಮಿತ್‌ ಶಾ

BSY vijayendra Amit shah karnataka election yediyurappa is being blackmailed accused congress

#image_title

ಬೆಂಗಳೂರು: ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿಯ ನಂಬರ್‌ ಟು ನಾಯಕ, ಕೇಂದ್ರ ಸಚಿವ ಅಮಿತ್‌ ಶಾ (Amit Shah Visit) ಅವರು ಶುಕ್ರವಾರ ಮುಂಜಾನೆಯೇ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿ ದೊಡ್ಡ ಸಂದೇಶವೊಂದನ್ನು ರವಾನಿಸಿದ್ದಾರೆ. ಶುಕ್ರವಾರ ಮುಂಜಾನೆ ಉಪಾಹಾರಕ್ಕಾಗಿ ಸ್ವತಃ ತಾವೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ ಅಮಿತ್‌ ಶಾ ಅವರು ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ ಅವರ ಜತೆ ನಡೆದುಕೊಂಡ ರೀತಿ, ತೋರಿದ ಆತ್ಮೀಯತೆಗಳು ಹಲವು ಸಂದೇಶಗಳನ್ನು ನೀಡಿದವು.

ಗುರುವಾರ ರಾತ್ರಿ ನವದೆಹಲಿಯಿಂದ ಬೆಂಗಳೂರಿಗೆ ಬಂದು ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದ ಅಮಿತ್‌ ಶಾ ಅವರು ಬೆಳಗ್ಗೆ ಎದ್ದು ಬಿಎಸ್‌ವೈ ಅವರ ಕಾವೇರಿ ನಿವಾಸಕ್ಕೆ ಬೆಳಗ್ಗಿನ ಉಪಾಹಾರಕ್ಕೆ ತೆರಳಿದರು.

ವಿಜಯೇಂದ್ರ- ಅಮಿತ್‌ ಶಾ ಆತ್ಮೀಯತೆ

ಕಾವೇರಿ ನಿವಾಸಕ್ಕೆ ಬಂದು ಕಾರಿನಿಂದ ಇಳಿಯುತ್ತಿದ್ದಂತೆಯೇ ಬಿ.ಎಸ್‌ ಯಡಿಯೂರಪ್ಪ ಅವರು ಹೂಗುಚ್ಛ ಕೊಟ್ಟು ಸ್ವಾಗತಿಸಲು ಮುಂದಾದರು. ಆಗ ಅಮಿತ್‌ ಶಾ ಅವರು ನಗುತ್ತಲೇ ಬಿ.ವೈ. ವಿಜಯೇಂದ್ರ ಅವರ ಕಡೆಗೆ ಕೈ ತೋರಿಸಿದರು. ಆಗ ವಿಜಯೇಂದ್ರ ಹೂಗುಚ್ಛ ಹಿಡಿದು ಹತ್ತಿರ ಬಂದಾಗ ಹೆಗಲ ಮೇಲೆ ಕೈ ಹಾಕಿ ಬರಸೆಳೆದುಕೊಂಡರು ಅಮಿತ್‌ ಶಾ. ಅದು ಅವರಿಬ್ಬರ ನಡುವಿನ ಆತ್ಮೀಯತೆ ಸಂದೇಶವನ್ನು ರವಾನೆ ಮಾಡಿತು. ಅದಾದ ಬಳಿಕ ಬಿ.ಎಸ್‌. ಯಡಿಯೂರಪ್ಪ ಅವರೂ ಹೂಗುಚ್ಛ ನೀಡಿದರು. ಈ ಸನ್ನಿವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಅಚ್ಚರಿಯಿಂದ ನೋಡಿದರು.

ಅಮಿತ್‌ ಶಾಗೆ ತಿನಿಸು ಬಡಿಸುತ್ತಿರುವ ವಿಜಯೇಂದ್ರ

ಉಪಾಹಾರದ ಸಂದರ್ಭದಲ್ಲೂ ಆತ್ಮೀಯತೆ

ಬಳಿಕ ಮನೆಯೊಳಗೆ ಹೋಗಿ ಸಣ್ಣ ಮಾತುಕತೆ ನಡೆಸಿದ ಅಮಿತ್‌ ಶಾ ಬಳಿಕ ಉಪಾಹಾರಕ್ಕೆ ಕುಳಿತರು. ಈ ಸಂದರ್ಭದಲ್ಲೂ ಅಮಿತ್‌ ಶಾ ಮತ್ತು ವಿಜಯೇಂದ್ರ ನಡುವಿನ ಸಂಬಂಧದ ಹಲವು ಸುಳಿವುಗಳನ್ನು ನೀಡಿತು. ವಿಜಯೇಂದ್ರ ಅವರು ಒಂದೊಂದೇ ತಿನಿಸನ್ನು ಬಡಿಸುತ್ತಿದ್ದರೆ ಅಮಿತ್‌ ಶಾ ಅವರು ಖುಷಿಯಿಂದ ತಿಂದರು. ಬಡಿಸುವಾಗ ಅವರ ನಡುವಿನ ಮಾತುಕತೆ, ನೋಟಗಳು ಕೂಡಾ ಸಾಕಷ್ಟು ಆತ್ಮೀಯವಾಗಿಯೇ ಇತ್ತು.

ಆನೆ ಬಲ ಬಂದಂತಾಗಿದೆ ಎಂದ ವಿಜಯೇಂದ್ರ

ʻʻಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮ ಮನೆಯ ಉಪಹಾರಕ್ಕೆ ಬಂದಿದ್ದರು. ಅವರು ಉಪಹಾರಕ್ಕೆ ಬಂದಿದ್ದು
ಬಹಳ ಸಂತೋಷ ಆಗಿದೆ. ಕೆಲಸದ ಒತ್ತಡದ ನಡುವೆಯೂ ನಮ್ಮ ಮನೆಗೆ ಬಂದಿದ್ದು ಸಂತೋಷ ಆಯ್ತು. ಅವರು ಹೆಗಲ ಮೇಲೆ ಕೈ ಹಾಕಿದ್ದು ಆನೆ ಬಲ ಬಂದಂತಾಗಿದೆʼʼ ಎಂದು ಬಳಿಕ ವಿಜಯೇಂದ್ರ ಹೇಳಿದರು.

ʻʻನಮಗೆ ಚುನಾವಣೆ ಎದಿರುಸುವ ಸಮಯ ಬಂದಿದೆ. ಉಪಹಾರದ ವೇಳೆ ಒಂದಷ್ಟು ವಿಚಾರ ಆಯ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಆಗಲು ಬಿಡಲ್ಲ. ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆʼʼ ಎಂದರು.

ಬಿಎಸ್‌ವೈ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಭಾಗವಹಿಸಿದವರು.

ರವಾನೆ ಮಾಡಿದ ಸಂದೇಶವೇನು?

ರಾಜ್ಯದಲ್ಲಿ ಬಿಎಸ್‌ ಯಡಿಯೂರಪ್ಪ ಅವರೇ ಬಿಜೆಪಿಯ ಅಗ್ರ ನಾಯಕ. ಈಗಲೂ ಸಾಕಷ್ಟು ಜನಪ್ರಿಯರಾಗಿರುವ, ಮುಂದೆ ಬೆಳೆಯಬಲ್ಲ ಛಾತಿ ಇರುವ ವಿಜಯೇಂದ್ರ ಅವರನ್ನು ಬೆಳೆಸಬೇಕಾಗಿದೆ. ಅದಕ್ಕೆ ತನ್ನ ಬೆಂಬಲವಿದೆ ಎಂಬ ಸಂದೇಶವನ್ನು ಅಮಿತ್‌ ಶಾ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರೆ ವಿಜಯೇಂದ್ರ ಅವರನ್ನು ಮುಂಚೂಣಿಗೆ ತರಬೇಕಾದ ಅವಶ್ಯಕತೆ ಇದೆ ಎನ್ನುವುದನ್ನೂ ಅಮಿತ್‌ ಶಾ ಅವರು ಪ್ರತಿಪಾದಿಸಿದಂತಿದೆ.

ಇದರ ನಡುವೆ, ರಾಜ್ಯ ಬಿಜೆಪಿಯಲ್ಲಿ ಕೆಲವರು ವಿಜಯೇಂದ್ರ ಅವರನ್ನು ವಿರೋಧಿಸುತ್ತಿದ್ದಾರೆ. ಅವರಿಗೆಲ್ಲರಿಗೂ ಅಮಿತ್‌ ಶಾ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ : Amit Shah Visit : ಅಮಿತ್‌ ಶಾಗೆ ಬಿಎಸ್‌ವೈ ನಿವಾಸದಲ್ಲಿ ಬೆಳಗ್ಗಿನ ಉಪಾಹಾರ, ಪವರ್‌ ಸೆಂಟರ್‌ ಆದ ಕಾವೇರಿ ನಿವಾಸ

Exit mobile version