Site icon Vistara News

Karnataka Election: ರಾಜ್ಯದಲ್ಲಿ ಶನಿವಾರ ಮೋದಿ, ಶಾ, ನಡ್ಡಾ ಪ್ರಚಾರದ ಅಬ್ಬರ, ಹೀಗಿದೆ ವಿವರ

Amit Shah, JP Nadda will also Campaign In Karnataka On Saturday

Amit Shah, JP Nadda will also Campaign In Karnataka On Saturday

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election) ಕಣವು ದಿನೇದಿನೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅದರಲ್ಲೂ, ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕು ಎಂಬ ಪಣ ತೊಟ್ಟಿರುವ ರಾಜ್ಯ ಬಿಜೆಪಿಯು ಕೇಂದ್ರದ ನಾಯಕರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಶನಿವಾರ ಒಂದೇ ದಿನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಎಲ್ಲೆಲ್ಲಿ ಮೋದಿ, ಅಮಿತ್‌ ಶಾ ಪ್ರಚಾರ?

ಬೆಂಗಳೂರಿನಲ್ಲಿ ಶನಿವಾರ ನರೇಂದ್ರ ಮೋದಿ ಅವರ ರೋಡ್‌ ಶೋ ಅಬ್ಬರ ಇರಲಿದೆ. ಇದಕ್ಕೂ ಮೊದಲು ಬೀದರ್‌ ಜಿಲ್ಲೆಯ ಹುಮನಾಬಾದ್‌, ವಿಜಯಪುರ, ಕುಡಚಿಯಲ್ಲಿ ಮೋದಿ ಅವರು ಪ್ರಚಾರ, ರೋಡ್‌ ಶೋ ನಡೆಸಲಿದ್ದಾರೆ. ಇನ್ನು ಅಮಿತ್‌ ಶಾ ಅವರು ಶನಿವಾರ ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಡಿಕೇರಿಯಲ್ಲಿ ರೋಡ್ ಶೋ, ಮಧ್ಯಾಹ್ನ 2.30ಕ್ಕೆ ಉಡುಪಿ ಕ್ಷೇತ್ರದ ಕಟಪಾಡಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ, ಕಾಪು ಮತ್ತು ಉಡುಪಿ ಕ್ಷೇತ್ರಗಳನ್ನೊಳಗೊಂಡ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಹಾಗೆಯೇ, ಸಂಜೆ 4 ಗಂಟೆಗೆ ಬೈಂದೂರಿನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದಾರೆ. ಇನ್ನು ಸಂಜೆ 5.40ಕ್ಕೆ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸುವ ಜತೆಗೆ ಸಂಜೆ 7 ಗಂಟೆಗೆ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ರಾತ್ರಿ ಮಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.

ಮೂರು ಜಿಲ್ಲೆಗಳಲ್ಲಿ ನಡ್ಡಾ ಪ್ರಚಾರ

ಜೆ.ಪಿ.ನಡ್ಡಾ ಅವರು ಶನಿವಾರ ಧಾರವಾಡ, ಗದಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11.05ಕ್ಕೆ ಕಲಘಟಗಿ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಪ್ರಚಾರ ಸಭೆ, ಮಧ್ಯಾಹ್ನ 1.25ಕ್ಕೆ ರೋಣ ಕ್ಷೇತ್ರದ ಡೊಂಬ್ಲದಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ, ಸಂಜೆ 4 ಗಂಟೆಗೆ ಮಾಯಕೊಂಡ ಕ್ಷೇತ್ರದಲ್ಲಿ ರೋಡ್ ಶೋ, ಸಂಜೆ 6.20ಕ್ಕೆ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಬೂತ್ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ. ಹೂಡಲಿದ್ದಾರೆ.

ಇದನ್ನೂ ಓದಿ: Modi In karnataka: ಬೆಂಗಳೂರಿಗೆ ಬರ್ತಿದಾರೆ ಮೋದಿ; ನಾಳೆ ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು? ಇಲ್ಲಿದೆ ಡಿಟೈಲ್ಸ್‌

Exit mobile version