ಬೆಂಗಳೂರು: ಕಾಲದಿಂದ ಕಾಲಕ್ಕೆ ನಮ್ಮ ಪೊಲೀಸ್ ವ್ಯವಸ್ಥೆ ಬದಲಾಗದೆ ಹೋದರೆ ಅದು ಅಪ್ರಸ್ತುತವಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯೂರೊ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್‌ನ ಪಾತ್ರ ಅತಿ ಮುಖ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಆವತಿ ಗ್ರಾಮದ 35 ಎಕರೆ ಪ್ರದೇಶದಲ್ಲಿ ಬ್ಯೂರೊ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿ.ಪಿ.ಆರ್.ಡಿ.) ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಬೇಹುಗಾರಿಕೆ ತರಬೇತಿ ಶಾಲೆ ಕಟ್ಟಡದ ಶಂಕುಸ್ಥಾಪನೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.
ಪೊಲೀಸ್ ಸಂಶೋಧನೆ ಸಂಸ್ಥೆ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದರೆ ಮೋದಿ ಸರ್ಕಾರ ಈ ಸಂಸ್ಥೆಗೆ ಪ್ರಾಮುಖ್ಯತೆ ನೀಡಿ ಅಗತ್ಯ ಸೌಕರ್ಯ ಕಲ್ಪಿಸುತ್ತಿದೆ ಎಂದು ಶಾ ಹೇಳಿದರು.
ಬ್ಯೂರೊ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್(ಬಿಪಿಆರ್‌ಡಿ) ಪೊಲೀಸ್ ವ್ಯವಸ್ಥೆಗೆ ಬಲ ನೀಡುವ ಸಂಸ್ಥೆಯಾಗಿದೆ. ಪ್ರತಿ ಹತ್ತು, ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸಮಾಜ ಬದಲಾಗುತ್ತಿರುತ್ತದೆ. ಹೊಸ ಹೊಸ ಸವಾಲು ಉದ್ಭವವಾಗುತ್ತದೆ. ಹವಾಲಾ, ಮಾದಕ ದ್ರವ್ಯ ಪೂರೈಕೆ, ಅಕ್ರಮ ಒಳನುಸುಳುವಿಕೆ ಇತ್ಯಾದಿ ಸಂಘಟಿತ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಪೊಲೀಸ್ ವ್ಯವಸ್ಥೆ ಕೂಡ ಇದಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ಈ ಕಾರ್ಯ ಮಾಡುವಲ್ಲಿ ಪೊಲೀಸ್ ಸಂಶೋಧನೆ ಸಂಸ್ಥೆಯ ಪಾತ್ರ ಮುಖ್ಯ ಎಂದವರು ಹೇಳಿದರು.
ಇಂಡೊ ಟಿಬೆಟಿಯನ್ ಪೊಲೀಸ್ ಇಲಾಖೆಯ ಕಟ್ಟಡಕ್ಕೂ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಇಂಡೊ ಟಿಬೆಟಿಯನ್ ಪೊಲೀಸ್ ಸಿಬ್ಬಂದಿಯ ಸಾಹಸ ಮತ್ತು ಕತ್ಯವ್ಯ ಬದ್ಧತೆಯನ್ನು ಶ್ಲಾಘಿಸಿದ ಶಾ, ಮೈನಸ್ 43 ಡಿ.ಸೆ ಉಷ್ಣಾಂಶದಲ್ಲೂ ಇವರು ಗಡಿ ಕಾಯುವ ಕಾಯಕ ನಂಬಲಸಾಧ್ಯ ಎನ್ನುವಂಥದ್ದು. ಅತ್ಯಂತ ದುರ್ಗಮ ಪ್ರದೇಶದಲ್ಲಿ ಇವರು ಸೇವೆ ಸಲ್ಲಿಸುತ್ತಾರೆ ಎಂದು ಶ್ಲಾಘಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದಕೀಯ ಶಿಕ್ಷಣ ಸಚಿವ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್, ಬಿಪಿಆರ್‌ಡಿ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ, ಐಟಿಬಿಪಿ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್, ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಸಿನ್ಹಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ. ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉಪಸ್ಥಿತರಿದ್ದರು.
ಇದನ್ನೂ ಓದಿ | Amit Shah | ಚುನಾವಣಾ ಅಖಾಡ ಸಜ್ಜುಗೊಳಿಸುತ್ತಿರುವ ಬಿಜೆಪಿ, ಬೆಂಗಳೂರಿನಲ್ಲಿ ಇಂದು ಸಂಕಲ್ಪ ಸಮಾವೇಶ