ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರ ವಿರುದ್ಧ ಬಿಜೆಪಿ ನಾಯಕರ ಆಕ್ಷೇಪ, ಅಸಮಾಧಾನ ಮುಂದುವರಿದಿದೆ. “ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಗೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಹಾಗೆಯೇ, ಕೇಂದ್ರ ಸಚಿವ ಸ್ಥಾನ ನೀಡುವುದಾಗಿಯೂ ತಿಳಿಸಿದ್ದರು. ಆದರೂ, ಶೆಟ್ಟರ್ ಅವರು ಮೋಸ ಮಾಡಿದರು” ಎಂದು ನ್ಯೂಸ್ 18ಗೆ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
“ಜಗದೀಶ್ ಶೆಟ್ಟರ್ ಅವರಿಗೆ ಅಮಿತ್ ಶಾ ಅವರು ಕೂಡ ವೈಯಕ್ತಿಕವಾಗಿ ಕರೆ ಮಾಡಿದರು. ಬಿಜೆಪಿ ಟಿಕೆಟ್ ಮಿಸ್ ಆಗಿದ್ದರ ಬಗ್ಗೆ ಹೇಳುತ್ತ, ನಿಮ್ಮನ್ನು ರಾಜ್ಯಸಭೆಗೆ ಕಳುಹಿಸಲಾಗುತ್ತದೆ. ಹಾಗೆಯೇ, ನೀವು ಕೇಂದ್ರ ಸಚಿವರಾಗುವಿರಿ ಎಂಬುದಾಗಿ ಕೇಂದ್ರ ಗೃಹ ಸಚಿವರು ಭರವಸೆ ನೀಡಿದ್ದರು. ಆದರೆ, ಅಮಿತ್ ಶಾ ಅವರ ಮಾತನ್ನು ಕಡೆಗಣಿಸಿ, ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮೋಸ ಮಾಡಿದರು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಶೇ.99ರಷ್ಟು ಗ್ಯಾರಂಟಿ ಎಂದು ಹೇಳಿದ್ದಿರಿ. ಆದರೆ, ಟಿಕೆಟ್ ಸಿಗಲಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, “ಆ ವಿಷಯದ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಜಗದೀಶ್ ಶೆಟ್ಟರ್ ಅವರ ಪತ್ನಿಗೆ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅವರಿಗೂ ಹೈಕಮಾಂಡ್ ಉನ್ನತ ಸ್ಥಾನ ನೀಡುವುದಾಗಿ ತಿಳಿಸಿತ್ತು. ಆದರೂ ಅವರು ಕಾಂಗ್ರೆಸ್ ಸೇರಿದರು. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಶೆಟ್ಟರ್ ಗೆಲುವು ಕಷ್ಟ” ಎಂದು ಹೇಳಿದರು.
ಸಂತೋಷ್ ವಿರುದ್ಧ ಶೆಟ್ಟರ್ ಆರೋಪದ ಬಗ್ಗೆ ಬಿಎಸ್‌ವೈ ಹೇಳಿದ್ದೇನು?
ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದ ಬಳಿಕ ಬಿಜಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಇದೆಲ್ಲ ಸತ್ಯಕ್ಕೆ ದೂರವಾದ ಮಾತು. ಬಿಜೆಪಿಯಲ್ಲಿ ಎಲ್ಲರೂ ಸರಿ ಸಮಾನರು. ಹಾಗೆಯೇ, ಯಾರೋ ಒಬ್ಬರು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಪಕ್ಷ ಹೀಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ಬಿ.ಎಲ್.ಸಂತೋಷ್ ಅವರೇ ಹೇಳಿದ್ದಾರೆ” ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಸ್ತಾರ ಅಂಕಣ: ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದರ ಹಿಂದೆ ಬಿ.ಎಲ್ ಸಂತೋಷ್ ಸ್ವಹಿತಾಸಕ್ತಿ ಏನಿದೆ?