ಬೆಂಗಳೂರು: ಮಂಡ್ಯ ಜನರು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ ಹಾಗೂ ಬಿಜೆಪಿಯ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದು, ಹಳೆ ಮೈಸೂರು ಕರ್ನಾಟಕದ ರಾಜಕಾರಣದ ಮೇಲೆ ಬಿಜೆಪಿ ಕಣ್ಣಿಟ್ಟಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅಮಿತ್ ಶಾ, ದೇಶದ ವಿವಿಧ ವಿಚಾರಗಳ ಜತೆಗೆ ಕರ್ನಾಟಕದ ರಾಜಕಾರಣದ ಕುರಿತೂ ಮಾತನಾಡಿದ್ದಾರೆ.
ಇತ್ತೀಚೆಗೆ ದಕ್ಷಿಣ ಕನ್ನಡ ಪ್ರವಾಸದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಅಮಿತ್ ಶಾ, ಪಿಎಫ್‌ಐಗೆ ಕಾಂಗ್ರೆಸ್ ಬೆಂಬಲಿಸಿತ್ತು ಎಂದಿದ್ದರು. ಈ ಕುರಿತು ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಹಾಗೂ ಪಿಎಫ್‌ಐ ಒಂದೇ ಎಂದು ನಾನು ಹೇಳಿಲ್ಲ. ಪಿಎಫ್‌ಐ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು, ಅದಕ್ಕೆ ನ್ಯಾಯಾಲಯ ಅದಕ್ಕೆ ತಡೆ ನೀಡಿದೆ. ನಾವು ಪಿಎಫ್‌ಐ ಅನ್ನು ನಿಷೆಧಿಸಿದ್ದೇವೆ. ಈ ದೇಶದಲ್ಲಿ ಪಿಎಫ್ ವತಿಯಿಂದ ಭಯೋತ್ಪಾದನೆಯ ಕಚ್ಚಾ ವಸ್ತು ತಯಾರಿಸುತ್ತಿದ್ದು, ಧರ್ಮಾಂಧತೆಯನ್ನು ನಿರ್ಮಾಣ ಮಾಡುಚವ ಚಟುವಟಿಕೆಗಳು ನಡೆಯುತ್ತಿದ್ದವು. ವೋಟ್ ಬ್ಯಾಂಕ್ ರಾಜಕಾರಣ ಮಾಡದೆ ಈ ನಿರ್ಧಾರ ಕೈಗೊಂಡಿದ್ದೇವೆ.
ಒಂದು ಸಮಯದಲ್ಲಿ ಪಿಎಫ್‌ಐ ಎನ್ನುವುದು ಕೇರಳ ಹಾಗೂ ಕರ್ನಾಟಕದ ಸಮಸ್ಯೆ ಆಗಿತ್ತು. ಆದರೆ ನಾವು ಬ್ಯಾನ್ ಮಾಡುವ ಸಮಯದಲ್ಲಿ ಬೇರೆ ರಾಜ್ಯಗಳಿಗೂ ವಿಸ್ತಾರ ಮಾಡುತ್ತಲಿತ್ತು. ಅದಕ್ಕಾಗಿಯೇ ನಿರ್ದಯವಾಗಿ ಬ್ಯಾನ್ ಮಾಡಿದೆವು, ಇದಕ್ಕೆ ಸಮಾಜದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಪುತ್ತೂರಿನ ಅಮರಗಿರಿಯಲ್ಲಿ ಭಾರತ ಮಾತಾ ಮಂದಿರ ಉದ್ಘಾಟನೆಯು ರಾಜಕೀಯ ಉದ್ದೇಶ ಹೊಂದಿದೆ ಎಂಬ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅಮಿತ್‌ಶಾ, ಈ ಕುರಿತು ರಾಜಕೀಯ ವಿವಾದ ಸೃಷ್ಟಿಸುತ್ತಿರುವುದು ಸರಿಯಲ್ಲ. ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ ಪರಮವೀರ ಚಕ್ರದವರೆಗೆ ಎಲ್ಲರ ಗುರುತನ್ನೂ ನಿರ್ಮಿಸಿದ್ದಾರೆ. ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ, ಆ ಟ್ರಸ್ಟ್‌ಗೆ ಅಭಿನಂದಿಸುತ್ತೇನೆ ಎಂದರು.
ಅಮಿತ್ ಶಾ ಹಾಗೂ ಮೋದಿ ಕರ್ನಾಟಕಕ್ಕೆ ಎಷ್ಟೇ ಬಾರಿ ಆಗಮಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಅವರು ನಮ್ಮ ವಿರುದ್ಧ ಚುನಾವಣೆ ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಹೀಗೆಯೇ ಹೇಳಬೇಕು, ಅದರಲ್ಲಿ ವಿಶೇಷವೇನಿಲ್ಲ. ಕರ್ನಾಟಕಕ್ಕೆ ಎರಡು ತಿಂಗಳಲ್ಲಿ ಐದು ಬಾರಿ ಬಂದಿದ್ದೇನೆ. ನಾನು ಜನರ ಭಾವನೆ ನೋಡಿದ್ದೇನೆ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ.
ನಾನು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಹೋಗಿದ್ದೇನೆ. ವಿಶೇಷವಾಗಿ ಮಂಡ್ಯದಲ್ಲಿ ಇಷ್ಟು ದೊಡ್ಡ ರ‍್ಯಾಲಿ ಎಂದೂ ಆಗಿರಲಿಲ್ಲ. ಮಂಡ್ಯದ ಜನರು ಇಂದು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ. ಬಿಜೆಪಿಯ ಅಭಿವೃದ್ಧಿ ಮಾದರಿಯನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ಬಿಜೆಪಿಯಲ್ಲೂ ಪರಿವಾರವಾದದ ಆರೋಪದ ಕುರಿತು ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಎರಡನೇ ಹಾಗೂ ಮೂರನೇ ಪೀಳಿಗೆಯ ರಾಜಕೀಯ ಕಾರ್ಯಕರ್ತರು ಬಿಜೆಪಿಯಲ್ಲಿಯೂ ಇದ್ದಾರೆ. ಆದರೆ ಒಬ್ಬರ ನಂತರ ಮತ್ತೊಬ್ಬರೇ ಅಧ್ಯಕ್ಷ ಆಗುತ್ತಾರೆ, ಎಂಪಿ ಆಗುತ್ತಾರೆ ಎನ್ನುವ ಸ್ಥಿತಿ ಬಿಜೆಪಿಯಲ್ಲಿಲ್ಲ. ಅವರು ಪೂರಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸಮಾಪ್ತಗೊಳಿಸಿದ್ದಾರೆ. ಜನರ ಕಣ್ಣಿಗೆ ಮಣ್ಣೆರೆಚುವ ಇಂತಹ ವಾದಗಳನ್ನು ಮುಂದಿಟ್ಟು ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.