ರಾಯಚೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಕಾಂಗ್ರೆಸ್ ಮುಕ್ತಾಯವಾಗುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ( Amit Shah) ಹೇಳಿದ್ದಾರೆ. ರಾಯಚೂರು ಜಿಲ್ಲೆ ಜಲಜೀವನ್ ಮಿಷನ್ ಕಾಮಗಾರಿಯ ಶಂಕುಸ್ಥಾಪನೆ ಮತ್ತು ದೇವದುರ್ಗ ಹಾಗೂ ರಾಯಚೂರು(ನಗರ) ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದರು.
ರಾಯಚೂರಿನಲ್ಲಿ 4,500 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಕುಡಿಯುವ ನೀರು, ಕೃಷ್ಣ ಭಾಗ್ಯ ಜಲ ನಿಗಮ, ರಸ್ತೆ ಅಭಿವೃದ್ಧಿ ಸೇರಿ 236 ಯೋಜನೆಗಳು ರಾಯಚೂರು ಜಿಲ್ಲೆಗಾಗಿಯೇ ನೀಡಲಾಗಿದೆ. ಇದಕ್ಕೆ ಶಾಸಕರು ಹಾಗೂ ಸಂಸದರಿಗೆ ಅಭಿನಂದನೆಗಳು.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಉತ್ತಮ ಸರ್ಕಾರ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ರೀತಿ ಭಾವಿಸಿದೆ. ಕರ್ನಾಟಕಕ್ಕೆ ಒಳ್ಳೆಯದನ್ನು ಕೇವಲ ಬಿಜೆಪಿ ಮಾತ್ರ ಮಾಡಬಲ್ಲದು. ಕಳೆದ ಬಾರಿ ಅತ್ಯಂತ ಕಡಿಮೆ ಶಾಸಕರನ್ನು ಪಡೆದ ಕುಮಾರಸ್ವಾಮಿ, ಕಾಂಗ್ರೆಸ್ ಮಡಿಲಲ್ಲಿ ಕುಳಿತರು. ಈ ಬಾರಿ ಅಂತಹ ತಪ್ಪು ಮಾಡಬೇಡಿ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಆರ್ಥಿಕವಾಗಿ, ಉತ್ಪಾದನೆಯಲ್ಲಿ, ಕೈಗಾರಿಕೆಯಲ್ಲಿ, ಇಂಧನ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸಿದೆ. 11ನೇ ಆರ್ಥಿಕತೆಯಿಂದ ಭಾರತವು 5ನೇ ಆರ್ಥಿಕತೆಯಾಗಿದೆ. ಈ ದೇಶವನ್ನು ಕಾಂಗ್ರೆಸ್ ಸುರಕ್ಷಿತವಾಗಿ ಇರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಆಲಿಯಾ, ಮಾಲಿಯಾ, ಜಮಾಲಿಯಾ ಬಂದು ನಮ್ಮ ಸೈನಿಕರನ್ನು ಕೊಂದು ಹೋಗುತ್ತಿದ್ದರು. ಸರ್ಕಾರ ಏನೂ ಮಾಡುತ್ತಿರಲಿಲ್ಲ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಪುಲ್ವಾಮಾ ದಾಳಿ ನಡೆಯಿತು. ಕೇವಲ 10ದಿನದಲ್ಲಿ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡಿ ಆತಂಕವಾದಿಗಳನ್ನು ಸಂಹರಿಸಲಾಯಿತು.
ರಾಹುಲ್ ನೇತೃತ್ವದಲ್ಲಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತಾಯವಾಗುತ್ತಿದೆ. ಇತ್ತೀಚೆಗೆ ಈಶಾನ್ಯದಲ್ಲಿ ಮೂರು ಚುನಾವಣೆ ನಡೆದಿದ್ದು, ಒಂದು ರಾಜ್ಯದಲ್ಲೂ ಕಾಂಗ್ರೆಸ್‌ಗೆ ಐದು ಸೀಟುಗಳೂ ಬಂದಿಲ್ಲ. ಮೂರೂ ಕಡೆ ಎನ್‌ಡಿಎ ಸರ್ಕಾರ ಬಂದಿದೆ. ಇಡೀ ದೇಶ ಮೋದಿಯವರ ಜತೆಗೆ ಹೋಗಲು ನಿರ್ಧರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಪೂರ್ಣ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
ಇದನ್ನೂ ಓದಿ: Amit Shah: ಮುಸ್ಲಿಂ ಮೀಸಲಾತಿ ಸಂವಿಧಾನಬದ್ಧವಲ್ಲ: ಮೀಸಲಾತಿ ಕತ್ತರಿಗೆ ಅಮಿತ್ ಶಾ ಸಮರ್ಥನೆ