ದಾವಣಗೆರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ವಿಷ ಅಂತ ಹೇಳಿದ ಕಾಂಗ್ರೆಸ್‌ಗೆ ನೀವು ಮತ ನೀಡುತ್ತೀರಾ? ಖರ್ಗೆ ಒಬ್ಬರೇ ಅಲ್ಲ, ಗಾಂಧಿ ಪರಿವಾರದ ಕೆಲಸವೇ ಮೋದಿಯನ್ನು ಅವಮಾನಿಸುವುದು. ಈ ಕಾಂಗ್ರೆಸ್‌ನವರು ಮೋದಿಯನ್ನು ಎಷ್ಟು ಅವಮಾನಿಸುತ್ತಾರೋ ಅಷ್ಟು ಕಮಲ ಅರಳುತ್ತದೆ (Karnataka Election). ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ, ಮುಸ್ಲಿಂ ತುಷ್ಟೀಕರಣ ರಾಜಕಾರಣ ಮಾಡುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
ಹರಿಹರದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಸ್ಲಿಮರ 4% ರಷ್ಟು 2ಬಿ ಮೀಸಲಾತಿ ತೆಗೆದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು ಅಂತ ಎಂದು ಹೇಳಿದ್ದರು. ಆದರೆ, ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬೇಕು ಅಂತ ಅಂಬೇಡ್ಕರ್ ಅವರು ಹೇಳಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು ನಾವು ಅದನ್ನು ತೆಗೆದು, ಲಿಂಗಾಯತರು, ಒಕ್ಕಲಿಗರಿಗೆ ನೀಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಓಪನ್ ಮಾಡಲು ಬಂದಿದ್ದೇನೆ: ರಾಹುಲ್ ಗಾಂಧಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಮರ ಮೀಸಲಾತಿ ವಾಪಸ್ ನೀಡುತ್ತೇವೆ ಎಂದು ಹೇಳಿದೆ. ಅಂತಹ ಪಕ್ಷಕ್ಕೆ ನೀವು ಮತ ಹಾಕುತ್ತೀರಾ? ಕಾಂಗ್ರೆಸ್‌ನಲ್ಲಿ ಸಿಎಂಗಾಗಿ ಕಿತ್ತಾಟ ನಡೆಯುತ್ತಿದೆ. ಸಿಎಂ ಆಗಲು ಡಿಕೆಶಿ ಹೊಸ ಬಟ್ಟೆ ಹೊಲಿಸಿಕೊಂಡು ಕೂತಿದ್ದಾರೆ. ಅತ್ತ ಸಿದ್ದರಾಮಯ್ಯ, ಖರ್ಗೆ ಕೂಡ ಸಿಎಂ ಗಾದಿಗೆ ಹೊಡೆದಾಡುತ್ತಿದ್ದಾರೆ. ಅವರು ಸಿಎಂ ಗಾದಿಗಾಗಿ ಹೊಡೆದಾಡುವುದು ಬೇಡ. ಏಕೆಂದರೆ ಚುನಾವಣೆಯಲ್ಲಿ ಗೆಲ್ಲುವುದೇ ನಾವು, ಅಧಿಕಾರ ಹಿಡಿಯುವುದು ಬಿಜೆಪಿಯೇ ಎಂದು ತಿಳಿಸಿದರು.
ನಿಮ್ಮ ಒಂದು ಮತ ಐದು ವರ್ಷ ಸದೃಢ ಸರ್ಕಾರ ನೀಡುತ್ತದೆ. ರಾಜ್ಯದಲ್ಲಿ ಮತ್ತೆ ಬಡಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರತ್ತದೆ. ರಾಹುಲ್ ಬಾಬಾ ರಿವರ್ಸ್ ಪಾಲಿಟಿಕ್ಸ್ ಮಾಡುತ್ತಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ದೆಹಲಿಯ ಎಟಿಎಂ ಆಗುತ್ತದೆ. ಹೀಗಾಗಿ ಕಾಂಗ್ರೆಸ್‌ನಿಂದ ಅಭಿವೃದ್ಧಿ ಅಸಾಧ್ಯ ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ | Modi In karnataka: ಬೆಂಗಳೂರಿಗೆ ಬರ್ತಿದಾರೆ ಮೋದಿ; ನಾಳೆ ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು? ಇಲ್ಲಿದೆ ಡಿಟೈಲ್ಸ್
ಕರ್ನಾಟಕ ಸುರಕ್ಷಿತವಾಗಿ ಇರಬೇಕು ಎಂದರೆ ಭಾಜಪ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರದಲ್ಲಿ ಪಿಎಫ್ಐ ಆ್ಯಕ್ಟಿವ್ ಆಗಿತ್ತು. ಭಾಜಪ ಕೇಂದ್ರಲ್ಲಿ ಬಂದಮೇಲೆ ಪಿಎಫ್ಐ ಬ್ಯಾನ್ ಮಾಡಿ, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿದ್ದೇವೆ ಎಂದು ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ವಿವರಿಸಿದರು.