Site icon Vistara News

SC Internal Reservation: ಎಸ್‌ಸಿ ಒಳಮೀಸಲಾತಿ ರದ್ದುಪಡಿಸಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

Amit Shah says No one can abolish SC internal reservation

Amit Shah says No one can abolish SC internal reservation

ಬೆಂಗಳೂರು: ಎಸ್‌ಸಿ ಒಳಮೀಸಲಾತಿಯನ್ನು (SC Internal Reservation) ನಾವು ದೀರ್ಘವಾಗಿ ಆಲೋಚಿಸಿ ಜಾರಿ ಮಾಡಿದ್ದೇವೆ, ಯಾರೂ ಇದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರಗಳನ್ನು ಅಮಿತ್ ಶಾ ಪ್ರಸ್ತಾಪಿಸಿದ್ದಾರೆ. ಒಳಮೀಸಲಾತಿ ಕುರಿತು ಅಧ್ಯಯನ ನಡೆಸಲು ಮಾಧುಸ್ವಾಮಿ‌ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯು ಜನಸಂಖ್ಯೆಯನ್ನು ಲೆಕ್ಕ ಮಾಡಿ, ಅನೇಕ ದತ್ತಾಂಶಗಳ ವಿಶ್ಲೇಷಣೆ ಮಾಡಿ, ಎಸ್‌ಸಿ ಸಮುದಾಯದ ಪ್ರಾತಿನಿಧಿತ್ವವನ್ನೂ ಗಮನದಲ್ಲಿರಿಸಿಕೊಂಡು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು ಎಂದು ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ಸಮುದಾಯದ ಮುಖಂಡರು, ಸಾಮಾಜಿಕ ನಾಯಕರೊಂದಿಗೆ ಸರ್ಕಾರ ಸುದೀರ್ಘ ಚರ್ಚೆ ನಡೆಸಿದ ನಂತರ ಒಳಮೀಸಲಾತಿ ನಿಗದಿ ಮಾಡಲಾಗಿದೆ. ತಾನು ಅಧಿಕಾರಕ್ಕೆ ಬಂದರೆ ಒಳಮೀಸಲನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ, ನಾವು ಜಾರಿ ಮಾಡಿರುವ ಎಸ್‌ಸಿ ಎಡ, ಬಲ, ಇತರೆ ಎಸ್‌ಸಿ ಸಮುದಾಯಗಳ ಮೀಸಲಾತಿ ಹಾಗೆಯೇ ಉಳಿಯಲಿದೆ. ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ | Karnataka Election: ಅಭಿವೃದ್ಧಿ ಕೆಲಸ, ಸಾಧನೆಗಳೇ ಮತ್ತೆ ಅಧಿಕಾರ ತಂದು ಕೊಡಲಿವೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಮುಸ್ಲಿಮರಿಗೆ ಮೀಸಲಾತಿ ನೀಡುವುದಷ್ಟೆ ಅಲ್ಲ, ಶೇ.6ಕ್ಕೆ ಹೆಚ್ಚಿಸಲಾಗುವುದು ಹಾಗೂ ಒಟ್ಟು ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಲಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಶೇ.75 ಮೀಸಲಾತಿ ತಮಿಳುನಾಡಿನಲ್ಲಿದೆ, ಆದರೆ ಅದು ಸುಪ್ರೀಂಕೋರ್ಟ್ ಆದೇಶ ಆಗುವುದಕ್ಕೂ ಮೊದಲಿನದ್ದು. ಸುಪ್ರೀಂ ಕೋರ್ಟ್ ಸುದೀರ್ಘ ಚರ್ಚೆಯ ನಂತರ ತಮಿಳುನಾಡು ವಿಚಾರವನ್ನು ತನ್ನ ತೀರ್ಪಿನಿಂದ ಹೊರಗಿಟ್ಟಿದೆ. ಹಾಗಾಗಿ ಮುಸ್ಲಿಂ ಸಮುದಾಯಕ್ಕೆ ಶೇ.6 ಮೀಸಲಾತಿ ನೀಡುವುದಾದರೆ ಯಾರ ಮೀಸಲಾತಿ ಕಡಿಮೆ ಮಾಡುತ್ತೀರ? ಎಸ್‌ಸಿ, ಎಸ್‌ಟಿ, ಒಬಿಸಿ, ಲಿಂಗಾಯತ, ಒಕ್ಕಲಿಗ… ಹೀಗೆ ಯಾವ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡಿ‌ ಮುಸ್ಲಿಮರಿಗೆ ನೀಡುವ ಆಲೋಚನೆ ಇದೆ ಎನ್ನುವುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ.

Exit mobile version