Site icon Vistara News

Karnataka Election 2023: ರಾಜ್ಯದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ: ಅಮಿತ್‌ ಶಾ

Amit Shah

ಧಾರವಾಡ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರು, ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನವಲಗುಂದ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಪರ ಪ್ರಚಾರ ನಡೆಸಿದರು. ಬಳಿಕ ಅಣ್ಣಿಗೇರಿ ಪಟ್ಟಣದ ಶಾಲಾ ಆವರಣದಲ್ಲಿ ಬಿಜೆಪಿ ಸಮಾವೇಶ ಆಯೋಜಿಸಲಾಗಿತ್ತು. ಅಮಿತ್‌ ಶಾ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತಿತರ ನಾಯಕರು ಸಾಥ್‌ ನೀಡಿದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಮಾತನಾಡಿ, ಕರ್ನಾಟಕದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ಹೀಗಾಗಿ ನವಲಗುಂದ ಕ್ಷೇತ್ರದಲ್ಲಿ ಶಂಕರ ಪಾಟೀಲ್ ಮುನೇನಕೊಪ್ಪ ಮತ್ತು ಗದಗ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರನ್ನು ಜನರು ಗೆಲ್ಲಿಸಬೇಕು. ಅವರನ್ನು ಶಾಸಕರ ಜತೆಗೆ ಸಚಿವರನ್ನಾಗಿ ಮಾಡುವ ಅವಕಾಶವಿದೆ ಎಂದು ಹೇಳಿದರು.

ರಾಹುಲ್ ಬಾಬಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವಿದೆ. ಮತ್ತೊಂದೆಡೆ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದೆ. ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ. ರಿವರ್ಸ್ ಗಿಯರ್ ಸರ್ಕಾರ ಬಯಸುತ್ತೀರಾ? ಅದರಿಂದ ಯಾರ ಅಭಿವೃದ್ಧಿಯೂ ಸಾಧ್ಯವಿಲ್ಲ. ರೈತರ ಮೇಲೆ ಗೋಲಿಬಾರ್ ಮಾಡಿದ್ದು ಕಾಂಗ್ರೆಸ್ ಸರ್ಕಾರ. ರೈತರ ಮೇಲೆ ಲಾಠಿ,‌ ಗುಂಡೇಟು ಹೊಡೆದ ಕಾಂಗ್ರೆಸ್‌ಗೆ ಮತ ಕೇಳುವ ನೈತಿಕತೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Karnataka Election: ದುಬಾರಿ ಹೇಳಿಕೆ ನೀಡಿ ಪಕ್ಷಕ್ಕೆ ಘಾಸಿ ಮಾಡದಂತೆ ನಾಯಕರಿಗೆ ‘ಕಾಂಗ್ರೆಸ್ ಥಿಂಕ್‌ ಟ್ಯಾಂಕ್‌’ ತಾಕೀತು

ಯಡಿಯೂರಪ್ಪ ಪ್ರತ್ಯೇಕ ಕೃಷಿ ಬಜೆಟ್ ಮಾಡಿ, ಕೃಷಿಕರ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಈ ಹಿಂದೆ ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆದರೆ ಮಹಾದಾಯಿ ವಿವಾದ ಬಗೆಹರಿಸಲಿಲ್ಲ. ಆದರೆ, ಕಳಸಾ- ಬಂಡೂರಿ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ರೈತರ ಜೀವನದಲ್ಲಿ ಖುಷಿ ತಂದರು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರ‌ದ ಅವಧಿಯಲ್ಲಿ ಇದ್ದ ಕಬ್ಬಿನ ದರವನ್ನು ಬಿಜೆಪಿ ಹೆಚ್ಚಿಸಿತು. ಎಥೆನಾಲ್ ಹೊಸ ಯೋಜನೆಯನ್ನೂ ಮೋದಿ ಜಾರಿಗೆ ತಂದರು ಎಂದ ಅಮಿತ್‌ ಶಾ ಅವರು, ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ನಾನು ಅಂಜುವುದಿಲ್ಲ. ಪಿಎಫ್ಐ ನಿಷೇಧಿಸಿ, ಕರ್ನಾಟಕ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ. ಆದರೆ ಮತಬ್ಯಾಂಕ್‌ಗಾಗಿ ಕಾಂಗ್ರೆಸ್ ಪಿಎಫ್‌ಐಯನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಕಾಶ್ಮೀರ ದೇಶದ ಅವಿಭಾಜ್ಯ ಅಂಗ. ಹೀಗಾಗಿ ಅಲ್ಲಿನ 370ನೇ ವಿಧಿ ವಿಶೇಷ ಸ್ಥಾನಮಾನ‌ವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಆದರೆ, ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳು ಇದಕ್ಕೆ ವಿರೋಧಿಸಿದವು. ರಕ್ತದ ನದಿ ಹರಿಯಲಿದೆ ಅಂತ ರಾಹುಲ್ ಬಾಬಾ ಹೇಳಿದ್ದರು. ಆದರೆ ನಾವು 370ನೇ ವಿಧಿ ತೆಗೆದೆವು. ಈಗ ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಧರ್ಮಾಧರಿತವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿತ್ತು. ಅದನ್ನು‌ ಬಿಜೆಪಿ ವಾಪಸ್ ಪಡೆದಿದೆ. ಆದರೆ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡುವುದಾಗಿ ಹೇಳುತ್ತಿದೆ. ಹಾಗಿದ್ದರೆ ಯಾರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತೀರಿ ಎಂದು ಕಾಂಗ್ರೆಸ್ ನಾಯಕರಿಗೆ ಅಮಿತ್ ಶಾ ಪ್ರಶ್ನಿಸಿದರು.

ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ತಂದು, ಮೋದಿ ಅವರ ಕೈ ಮತ್ತಷ್ಟು ಬಲಪಡಿಸಬೇಕು. ಮುಂದೆ ಮೋದಿ ಸರ್ಕಾರ ಬರಬೇಕೆಂದರೆ ಈಗ ರಾಜ್ಯದಲ್ಲಿ ಕಮಲ ಅರಳಬೇಕು ಎಂದು ಜನರಿಗೆ ನೀಡಿದರು.

ಕಾಂಗ್ರೆಸ್‌ನವರು ದಲಿತರು, ಬಡವರಿಗಾಗಿ ಏನು ಮಾಡಿದ್ದಾರೆ?

ಗದಗ: ನೀವು ಯಾರನ್ನೂ ಮುಖ್ಯಮಂತ್ರಿ ಅಥವಾ ಸಚಿವರನ್ನು ಮಾಡುವ ಸಲುವಾಗಿ ಮತದಾನ ಮಾಡುತ್ತಿಲ್ಲ. ಬದಲಾಗಿ ದೇಶ, ರಾಜ್ಯದ ಭವಿಷ್ಯಕ್ಕಾಗಿ ಮತದಾನ ಮಾಡುತ್ತಿದ್ದೀರಿ. ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮತದಾನ ಮಾಡುತ್ತಿದ್ದೀರಿ. ದೇಶದ ಬಡವರ, ದಿನದಲಿತರ ಜೀವನ ರೂಪಿಸಲು ನಿಮ್ಮ ಮತ ಅಮೂಲ್ಯವಾಗಿದೆ. ನಮ್ಮ ಪಕ್ಷದಿಂದ ಯೋಗ್ಯವಾದ ಅಭ್ಯರ್ಥಿಯನ್ನು ನೇಮಿಸಲಾಗಿದ್ದು, ಅವರಿಗೆ ಬೆಂಬಲ ನೀಡಬೇಕು ಎಂದು ಕೇಂದ್ರ ಸಚಿವ ಅಮಿತ್‌ ಶಾ ಅವರು ಮನವಿ ಮಾಡಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಪರ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಕಳಸಾ ಬಂಡೂರಿಗಾಗಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಮೋದಿ ಸರ್ಕಾರ ಮತ್ತು ಬೊಮ್ಮಾಯಿ ಸರ್ಕಾರ ರೈತರ ಏಳಿಗೆಗಾಗಿ ಕ್ರಮ ವಹಿಸಿತು. ಕೃಷ್ಣ, ಭದ್ರಾ ಮೇಲ್ದಂಡೆ ಯೋಜನೆ ಮುಗಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸರ್ಕಾರ ಇದೆ. ಎಸ್‌ಸಿ, ಎಸ್‌ಟಿ, ಲಿಂಗಾಯತ, ಒಕ್ಕಲಿಗ ಸಮುದಾಯಗಳ ಮಿಸಲಾತಿ ಹೆಚ್ಚಿಸಲಾಗಿದೆ. ಮುಸ್ಲಿಮರಿಗಿದ್ದ ಮೀಸಲಾತಿಯ್ನು ಬಿಜೆಪಿ ಸರ್ಕಾರ ಮಿಸಲಾತಿ ರದ್ದುಪಡಿಸಿದೆ. ಆದರೆ ಕಾಂಗ್ರೆಸ್‌ನವರು ಮತ್ತೆ ಮುಸ್ಲಿಮರ ಮಿಸಲಾತಿಯನ್ನು ಮತ್ತೆ ಮರಳಿ ಕೊಡುತ್ತಿದ್ದೇವೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನವರು ದಲಿತರು, ಬಡವರಿಗಾಗಿ ಏನು ಮಾಡಿದ್ದಾರೆ? ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದಾರೆ ಎಂಬುವುದು ದೇಶದ ಜನರ ಪ್ರಶ್ನೆಯಾಗಿದೆ. ಬಿಜೆಪಿ ಸರ್ಕಾರ ಬಡವರಿಗೆ ಮನೆ, ಕೃಷಿಕರಿಗೆ ರೈತನಿಧಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಲವು ಸೌಲಭ್ಯ ನೀಡುತ್ತಿದ್ದೇವೆ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರಿಗೆ ಆಡಿದ ಮಾತುಗಳು ನಿಮ್ಮ ಮನ ನೋಯಿಸಿದೆ. ಅವರಿಗೆ ನೀವು ಬುದ್ಧಿ ಕಲಿಸಬೇಕು. ಖರ್ಗೆಯವರೆ ನೀವು ಎಷ್ಟು ನರೇಂದ್ರ ಮೋದಿ ವಿರುದ್ಧ ಮಾತುಗಳನ್ನ ಆಡುತ್ತೀರೋ ಅಷ್ಟು ಬಾರಿ ಜನತೆಯ ಮತಗಳು ಬಿಜೆಪಿಗೆ ಬೀಳುತ್ತವೆ. ನಿಮ್ಮ ಹೇಳಿಕೆಯಿಂದ ನಿಮಗೆ ಯಾವುದೇ ಲಾಭ ಆಗುವದಿಲ್ಲ. ನಿಮಗೆ ಜನತೆ ಅಧಿಕಾರ ಕೊಟ್ಟಾಗ ದೆಹಲಿಯನ್ನು ನಿಮ್ಮ ಎಟಿಎಂ ಮಾಡಿಕೊಂಡಿದ್ದಿರಿ ಎಂದು ಆರೋಪಿಸಿದರು.

ಇದನ್ನೂ ಓದಿ | Karnataka Election 2023: ಕುಷ್ಟಗಿ ಮಹಿಳಾ ಸಂವಾದಕ್ಕೆ ರಾಹುಲ್ ಗಾಂಧಿ ಗೈರು; ಕಾರಣ ಏನು?

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು 70 ವರ್ಷಗಳಿಂದ ಕಾಂಗ್ರೆಸ್‌ನವರು ನಿರಾಕರಿಸಿದರು. ಆದರೆ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್, ರಾಹುಲ್ ಗಾಂಧಿ ಅವರೆ ನಿಮ್ಮ ಹಿಂದೆ ಇರುವ ನಾಯಕರು ನಿಮಗೆ ಲಾಭ ತರುವುದಿಲ್ಲ. ಅವರು ಆಡುವ ಮಾತುಗಳು ಬಿಜೆಪಿಗೆ ಹೆಚ್ಚಿನ ಮತಗಳನ್ನು ತಂದು ಕೊಡುತ್ತವೆ. ನೀವು ನರೇಂದ್ರ ಮೋದಿಯವರಿಗೆ ಎಷ್ಟು ಟಿಕಿಸುತ್ತಿರೊ ಅಷ್ಟು ಬಿಜೆಪಿಗೆ ಮತ ಬರುತ್ತವೆ ಎಂದು ಟೀಕಿಸಿದರು.

Exit mobile version