ಶಶಿಧರ ಮೇಟಿ ಬಳ್ಳಾರಿ
ಕಮಲ ಅರಳದ ಕ್ಷೇತ್ರ ಸಂಡೂರಿನಲ್ಲಿ ಬಿಜೆಪಿ ಚುನಾವಣಾ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸಮಾವೇಶ ನಡೆಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಮುಂದಾಗಿದ್ದಾರೆ. ಅಲ್ಲದೆ, ಈ ಭಾಗದ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯ ಮೂಲಕ ಚುನಾವಣೆಗೆ ಬೂಸ್ಟ್ ನೀಡಲಿದ್ದಾರೆ. ಈ ಮೂಲಕ ಈ ಭಾಗದಲ್ಲಿ ವಿಧಾನಸಭಾ ಚುನಾವಣೆಯ (Karnataka Election 2023) ಕಾವನ್ನು ಹೆಚ್ಚಿಸಲಿದ್ದಾರೆ.
ಅಮಿತ್ ಶಾ ಭೇಟಿಯ ಮಹತ್ವ
ಸಚಿವ ಶ್ರೀರಾಮುಲು ಅವರನ್ನು ಸಂಡೂರು ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆಯಲ್ಲಿರುವ ಅಮಿತ್ ಶಾ, ಕಠಿಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಪಡಿಸುವ ಮೂಲಕ ಇತರ ಕ್ಷೇತ್ರಗಳಿಗೆ ಸಂದೇಶ ರವಾನಿಸುವ ಲೆಕ್ಕಾಚಾರವನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಡೂರಿನಲ್ಲಿ ಫೆ.23ರಂದು ನಡೆಯುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರ ಸಮಾವೇಶ ಮಹತ್ವ ಪಡೆದುಕೊಂಡಿದೆ. ಸಂಡೂರು ಕ್ಷೇತ್ರದ ಇತಿಹಾಸದಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. 2008ರಲ್ಲಿ ಗಣಿನಾಡಿನ ಬಿಜೆಪಿ ಪ್ರಾಬಲ್ಯದಲ್ಲಿಯೂ ಸೇರಿದಂತೆ ಈಗಿನ ಅವಳಿ ಜಿಲ್ಲೆಯ 10 ಕ್ಷೇತ್ರದಲ್ಲಿ 9ರಲ್ಲಿ ಬಿಜೆಪಿ ಗೆದ್ದಿದ್ದರೆ ಸಂಡೂರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದುಕೊಂಡಿತ್ತು.
ಘಟಾನುಘಟಿ ನಾಯಕರ ಆಗಮನ
ಸಂಡೂರಿನ 18 ಎಕರೆ ಪ್ರದೇಶದ ಎಸ್ಆರ್‌ಎಸ್ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ, ಸುಮಾರು 80 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ನಾಯಕರ ದಂಡೇ ಭಾಗವಹಿಸಲಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: 7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ
ನಾಲ್ಕು ಜಿಲ್ಲೆಗಳ ನಾಯಕರಿಗೆ ಚುನಾವಣೆಯ ಪಾಠ
ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿರುವುದರಿಂದ ಬಿಜೆಪಿ ಕಾರ್ಯಕರ್ತರಿಗೆ, ಪ್ರಮುಖರಿಗೆ ಸ್ವಲ್ಪ ತಲೆನೋವು ತಂದಿತ್ತು. ಈಗ ಗಣಿ ಜಿಲ್ಲೆಯ ಬಿಜೆಪಿಗೆ ಅಮಿತ್ ಶಾ ಭೇಟಿಯು ಹೆಚ್ಚಿನ ಶಕ್ತಿ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ ನಾಲ್ಕು ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಎಂಎಲ್‌ಸಿ, ಮಾಜಿ ಎಂಪಿ, ಮಾಜಿ ಶಾಸಕರು, ಮಾಜಿ ಎಂಎಲ್‌ಸಿ ಹಾಗೂ ಜಿಲ್ಲಾಧ್ಯಕ್ಷರು ಸೇರಿದಂತೆ ಪ್ರಮುಖರ ಸಭೆಯನ್ನು ಸಂಡೂರಿನ ಶಿವ ವಿಲಾಸ್ ಪ್ಯಾಲೇಸ್‌ನಲ್ಲಿ ನಡೆಸಲಿದ್ದಾರೆ. ಈ ಮೂಲಕ ನಾಲ್ಕು ಜಿಲ್ಲೆಗಳಲ್ಲಿ ಚುನಾವಣೆಯ ರಣಕಹಳೆ ಊದಲಿದ್ದಾರೆ. ಕಳೆದ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಯ 22 ಕ್ಷೇತ್ರದ ಪೈಕಿ 10 ಕ್ಷೇತ್ರದಲ್ಲಿ ಬಿಜೆಪಿ, 10 ಕ್ಷೇತ್ರದಲ್ಲಿ ಕಾಂಗ್ರೆಸ್, 2 ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು.
ಷಾ ಆಗಮನ ಯಾವಾಗ, ಹೇಗೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ.23ರಂದು ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸಂಡೂರಿಗೆ ಆಗಮಿಸಲಿದ್ದಾರೆ. ಸಮಾವೇಶದ ಶಿವ ವಿಲಾಸ್ ಪ್ಯಾಲೇಸ್‌ನಲ್ಲಿ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿ, ಮುಖಂಡರ ಸಭೆ ನಡೆಸಿ, ಸಂಜೆ ಬೆಂಗಳೂರಿಗೆ ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಸಿದ್ಧತೆ ಬಹುತೇಕ ಪೂರ್ಣ
18 ಎಕರೆ ಪ್ರದೇಶದ ಎಸ್ಆರ್‌ಎಸ್ ಮೈದಾನದಲ್ಲಿ ಸಮಾವೇಶವನ್ನು ನಡೆಸಲಾಗುತ್ತಿದೆ. ಈಗಾಗಲೇ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಅಮಿತ್ ಶಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಾಹರಿಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಮಿತ್ ಶಾ ಸಂವಾದ
ಭಾರತದ ರಾಜಕಾರಣದಲ್ಲಿ ೬೫ ವರ್ಷದ ಸ್ಥಿತಿಗತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಾದ ಸ್ಥಿತ್ಯಂತರ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಫೆ. ೨೩ರ ಸಂಜೆ ೬ ಗಂಟೆಗೆ ಅಮಿತ್ ಶಾ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿಂತಕ ಹಾಗೂ ನಟ ಪ್ರಕಾಶ್ ಬೆಳವಾಡಿ ಸೇರಿದಂತೆ ಆಯ್ದ ಗಣ್ಯರಿಗೆ ಈ ಸಂವಾದದಲ್ಲಿ ಆಹ್ವಾನ ನೀಡಲಾಗಿದೆ.