Site icon Vistara News

Amit Shah | ಮಂಡ್ಯದಲ್ಲಿ ಬೃಹತ್‌ ಸಮಾವೇಶಕ್ಕೆ ಸಿದ್ಧತೆ; 1 ಲಕ್ಷ ಜನರನ್ನು ಸೇರಿಸುವ ಗುರಿ

amit-shah-to attend mega rally in mandya

ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ 30ರಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ಬೃಹತ್‌ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, 1 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನಗಳ ಜನರು ಮಂಡ್ಯದ ಸಮಾವೇಶದಲ್ಲಿ ಭಾಗವಹಿಸುವರು. ಅಮಿತ್ ಶಾ ಅವರ ಭೇಟಿಯಿಂದ ಬಿಜೆಪಿ ಬಲ ಹೆಚ್ಚಲಿದೆ. ಈ ಸಮಾವೇಶ 30ರ ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದೆ. ಮಂಡ್ಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ಉಳಿಯುವುದಿಲ್ಲ. ಅಲ್ಲಿ ಸಂಸದರ ಸ್ಥಾನವನ್ನು ಸೋತಿದ್ದಾರೆ. ಸಮಾವೇಶದ ಯಶಸ್ಸಿಗಾಗಿ ಸಚಿವರಾದ ಗೋಪಾಲಯ್ಯ ಮತ್ತು ನಾರಾಯಣಗೌಡರು ಶ್ರಮಿಸುತ್ತಿದ್ದಾರೆ.

2023ರ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನ ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರು ಗೆಲ್ಲಬೇಕೆಂಬ ಗುರಿ ನಮ್ಮದು. ಪಕ್ಷ ಬಲಪಡಿಸಲು ವಿಶೇಷ ಗಮನ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ನಂತರ ಸಂಜೆ 5.30ಕ್ಕೆ ಬೆಂಗಳೂರಿನ ಪ್ಯಾಲೇಸ್‍ನಲ್ಲಿ ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ರೂ. ಸಾಲ ನೀಡುವ ಕಾರ್ಯಕ್ರಮ ನಡೆಯಲಿದೆ. ಯಶಸ್ವಿನಿ ಯೋಜನೆಗೆ 20 ಲಕ್ಷ ಜನರು ನೋಂದಣಿ ಆಗಿದ್ದಾರೆ. ಯೋಜನೆಗೆ ಜನವರಿ ಒಂದರಿಂದ ಮರು ಚಾಲನೆ ನೀಡುವ ಕಾರ್ಯವನ್ನು ಅಮಿತ್ ಶಾ ಅವರು ಉದ್ಘಾಟಿಸುತ್ತಾರೆ. ಅಲ್ಲದೆ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡುತ್ತಾರೆ ಎಂದರು.

ಡಿಸೆಂಬರ್‌ 30ರಂದು ಬೆಳಗ್ಗೆ 11 ಗಂಟೆಗೆ ಮದ್ದೂರಿನ ಮೆಗಾ ಡೇರಿಯನ್ನು ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಬಳಿಕ ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಬಾರ್ಡ್‍ನಿಂದ ಕೊಡುವ 24 ಸಾವಿರ ಕೋಟಿ ರೂ. ಸಾಲವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿಯವರು ಯೋಜಿಸಿದ್ದಾರೆ. ಆ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಡಿಸೆಂಬರ್‌ 31ರಂದು ಮಲ್ಲೇಶ್ವರದ ಸೌಹಾರ್ದ ಫೇಡರೇಶನ್‍ಗೆ ಭೇಟಿ ಕೊಡುತ್ತಾರೆ. ಸೌಹಾರ್ದ ಸಹಕಾರಿಗಳ ಸಭೆ ನಡೆಸುತ್ತಾರೆ.

ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ. ಎನ್‌. ಅಶ್ವತ್ಥನಾರಾಯಣ, ಮಂಡ್ಯದಲ್ಲಿ ಶುಕ್ರವಾರ ನಡೆಯಲಿರುವ ಜನಸಂಕಲ್ಪ ಯಾತ್ರೆಯಲ್ಲಿ ಶಾ ಅವರು ಭಾಗವಹಿಸಲಿದ್ದಾರೆ. ಪಕ್ಷದ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದಿಂದ ಶಾಸಕರು ಆಯ್ಕೆಯಾಗಬೇಕು ಎಂಬುದು ಪಕ್ಷದ ವರಿಷ್ಠರ ಗುರಿಯಾಗಿದೆ ಎಂದಿದ್ದಾರೆ.

ಮಂಡ್ಯ ಜಿಲ್ಲೆಗೆ ಕೊಡುಗೆ
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಅಮಿತ್ ಶಾ ಅವರು ಡಿಸೆಂಬರ್ 30 ಮೇಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಂಡ್ಯದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರದ ಗೃಹ ಸಚಿವರಾಗಿ ಕೇಂದ್ರ ಮತ್ತು ರಾಜ್ಯಕ್ಕೆ ಅದರಲ್ಲೂ ಮಂಡ್ಯ ಜಿಲ್ಲೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಲಕ್ಷಾಂತರ ಜನರಿಗೆ ಬಹಳ ಉಪಯೋಗವಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ | ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Exit mobile version