Site icon Vistara News

Karnataka Election | ಆಪರೇಷನ್‌ಗೆ ಇಳಿಯಲಿದ್ದಾರೆ ಅಮಿತ್‌ ಶಾ; ಡಿಸೆಂಬರ್‌ 30ರಂದು ಯಾರ‍್ಯಾರು ಬರಲಿದ್ದಾರೆ ಪಕ್ಷಕ್ಕೆ?

amit shah to contact leaders of other parties to invite

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿಯನ್ನು ಸಜ್ಜುಗೊಳಿಸಲು ಆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಡಿಸೆಂಬರ್‌ 30ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಸಭೆ ನಡೆಸಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಡ್ಯದಲ್ಲಿ ಹಾಲು ಉತ್ಪಾದಕರ ಕಟ್ಟಡ ಉತ್ಪಾದನೆ ನೆಪದಲ್ಲಿ ಆಗಮಿಸುತ್ತಿರುವ ಅಮಿತ್‌ ಶಾ, ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಒತ್ತು ನೀಡಲಿದ್ದಾರೆ. ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಿಲ್ಲಾ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯವಾಗಿ ಬಿಜೆಪಿಯು ಹಳೆ ಮೈಸೂರು ಭಾಗವನ್ನು ಈ ಬಾರಿ ಹೆಚ್ಚು ಗಂಭೀರವಾಗಿ ಪರಿಗಣಿಸಿರುವುದು ಗುಟ್ಟಾಗಿ ಉಳಿದಿಲ್ಲ. ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಅನೇಕ ನಾಯಕರು ಈಗಾಗಲೆ ಬಿಜೆಪಿ ಸೇರಿದ್ದಾರೆ. ರಾಮನಗರದಲ್ಲಿ ಐಟಿಬಿಟಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಮಂಡ್ಯದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ಪಕ್ಷವನ್ನು ಬಲಪಡಿಸುತ್ತಿದ್ದಾರೆ.

ಉಳಿದಂತೆ ಮೈಸೂರು, ಹಾಸನ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಪಕ್ಷವನ್ನು ಬಲಪಡಿಸಬೇಕಿದೆ. ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಇತರೆ ಪಕ್ಷಗಳಲ್ಲಿರುವ ಪ್ರಬಲ ನಾಯಕರುಗಳು ಪಕ್ಷಕ್ಕೆ ಆಗಮಿಸಲೇಬೇಕು. ಇದೇ ಕಾರಣಕ್ಕೆ ಅಮಿತ್‌ ಶಾ ಸವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅನೇಕರ ಹೆಸರುಗಳನ್ನು ಸಭೆಯಲ್ಲಿ ಮುಂದಿಟ್ಟಿದ್ದಾರೆ.

ಈ ಪೈಕಿ ಐದಾರು ಹೆಸರುಗಳನ್ನು ತಮ್ಮ ಬಳಿ ಇರಿಸಿಕೊಂಡ ಅಮಿತ್‌ ಶಾ ತಮ್ಮ ಬಳಿಯೇ ಇರಿಸಿಕೊಂಡಿರುವುದು ಮಹತ್ವ ಪಡೆದಿದೆ. ಈ ವ್ಯಯಕ್ತಿಗಳಿಗೆ ತಾವೇ ಸ್ವತಃ ಮಾತನಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಸ್ವತಃ ಅಮಿತ್‌ ಶಾ ಅವರೇ ಮಾತನಾಡುತ್ತಾರೆ ಎಂದರೆ ದೊಡ್ಡವರೇ ಇರಬೇಕು. ಆದರೆ ಅವರ‍್ಯಾರು ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದು ಮೂಲಗಳು ಹೇಳಿವೆ.

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ್ದ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತು ಅನೇಕ ತಿಂಗಳುಗಳಿಂದಲೂ ಚರ್ಚೆಯಲ್ಲಿದೆ. ಅವರೂ, ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿಲ್ಲ. ಬದಲಿಗೆ, ಪಕ್ಷೇತರ ಸಂಸದರಾಗಿರುವುದರಿಂದ ಯಾವುದೇ ಪಕ್ಷ ಸೇರಲು ತಾಂತ್ರಿಕ ಅಡ್ಡಿ ಇದೆ ಎಂದಿದ್ದಾರೆ.

ಪಕ್ಷೇತರರಾದರೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು, ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಸಂಘಟನೆಯನ್ನು ಬಲಪಡಿಸಲು ಯಾವುದೇ ನಿರ್ಬಂಧ ಇಲ್ಲ. ಇತ್ತೀಚೆಗಷ್ಟೇ, ಸುಮಲತಾ ಅವರ ಅತ್ಯಾಪ್ತ ಸ್ಥಳೀಯ ಮುಖಂಡ ಸಚ್ಚಿದಾನಂದ ಅವರು ಬಿಜೆಪಿ ಸೇರಿದ್ದಾರೆ. ಹಾಗಾಗಿ ಅಮಿತ್‌ ಶಾ ಪ್ರವಾಸದ ಸಂದರ್ಭದಲ್ಲಿ ಸುಮಲತಾ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಬಹುದೇ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ.

ಹಳೆ ಮೈಸೂರು ಭಾಗವಷ್ಟೆ ಅಲ್ಲದೆ ರಾಜ್ಯದ ವಿವಿಧೆಡೆಯೂ ಬೇರೆ ಪಕ್ಷಗಳಿಂದ ನಾಯಕರನ್ನು ಸೆಳೆಯುವ ಪ್ರಯತ್ನಗಳು ಸದ್ಯದಲ್ಲೇ ಆರಂಭವಾಗಲಿವೆ. ಅಧಿವೇಶನ ಪೂರ್ಣಗೊಂಡ ನಂತರ ಈ ಚಟುವಟಿಕೆಗೆ ಚುರುಕು ಸಿಗಲಿದೆ ಎನ್ನಲಾಗಿದೆ.

ಈದನ್ನೂ ಓದಿ | CM to Visit Delhi | ದೆಹಲಿಯಲ್ಲಿ ಜೆ.ಪಿ.ನಡ್ಡಾ, ಸಿಎಂ ಬೊಮ್ಮಾಯಿ ಭೇಟಿ, ಡಿ.30ರಂದು ರಾಜ್ಯಕ್ಕೆ ಅಮಿತ್‌ ಶಾ ಆಗಮನ

Exit mobile version