ಬಳ್ಳಾರಿ: ರಾಜ್ಯ ಚುನಾವಣಾ (Karnataka Election 2023) ಹೊಸ್ತಿಲಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಚುನಾವಣಾ ಚಾಣಕ್ಯ ಎಂದು ಕರೆಯಲ್ಪಡುವ ಅಮಿತ್ ಶಾ ಅವರು ರಾಜ್ಯದ ವಿವಿಧೆಡೆ ಪ್ರವಾಸವನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಈಗ ಗಣಿನಾಡಿನತ್ತ ಅವರ ದೃಷ್ಟಿ ನೆಟ್ಟಿದ್ದು, ಸಾರ್ವಜನಿಕ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಫೆ.23ರಂದು ಸಂಡೂರಿಗೆ ಆಗಮಿಸಲಿದ್ದು, ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶನಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ತೋರಣಗಲ್ಲಿನಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಸಂಡೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಪಕ್ಷ ನಾಯಕರು ಬಜೆಟ್ ವೇಳೆ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ಶಿಷ್ಟಾಚಾರ ಪಾಲಿಸದೆ ಅಗೌರವ ತೋರುವ ಕೆಲಸ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿಯಾಗಿದೆ. ಬಜೆಟ್ ಜನರಿಗೆ ತಲುಪದಂತೆ ಮಾಡಬೇಕು ಎಂದು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಮುಲು ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ದೂರದೃಷ್ಟಿ ಮತ್ತು ಜನಸಾಮಾನ್ಯರ ನಾಡಿಮಿಡಿತ ಅರಿತು ಬಜೆಟ್ ಮಂಡಿಸಿದ್ದಾರೆ. ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಂಡು ಬಜೆಟ್ ಮಂಡಿಸದೆ ಆರ್ಥಿಕ ದೃಷ್ಟಿಕೋನವಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಡಾನೆ ರಕ್ಷಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯರ ಶ್ಲಾಘಿಸಿದ ಮೋದಿ
ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ, ಮಹಿಳೆಯರ ಸಬಲೀಕರಣ ಸೇರಿದಂತೆ ಎಲ್ಲ ವಲಯಕ್ಕೆ ಆದ್ಯತೆ ನೀಡಲಾಗಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಮೆಗಾ ಡೇರಿಗೆ ೧೦೦ ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ. ಸಿಗಡಿ ಕೃಷಿ ಕ್ಲಸ್ಟರ್ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.