ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕ, ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್ ೪ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಆಗಮಿಸುವುದು ಬೆಂಗಳೂರಿನ ಸಿಐಐ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಎಂಬುದು ನಿಜವಾದರೂ ರಾಜ್ಯದಲ್ಲಿ ಎದ್ದಿರುವ ಬಿಜೆಪಿ ಕಾರ್ಯಕರ್ತರ ಕೋಪ ಶಮನದ ಕೆಲಸವನ್ನೂ ಅವರು ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನು ದೊಡ್ಡ ಮಟ್ಟದಲ್ಲಿ ಕೆರಳಿಸಿದೆ. ರಾಜ್ಯ ಸರಕಾರ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡುವಲ್ಲಿ ಸೋತಿದೆ. ಹಿಂದು ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ವಿಫಲವಾಗಿದೆ ಎಂಬ ಆಕ್ರೋಶದೊಂದಿಗೆ ಎಲ್ಲ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಕಾರ್ಯಕರ್ತರು ಬಿಜೆಪಿ ನಾಯಕರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೇ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನೇ ಅಡಿಮೇಲು ಮಾಡಲು ಪ್ರಯತ್ನ ನಡೆದಿತ್ತು.
ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಸೇರಿದಂತೆ ನಾಯಕರೆಲ್ಲ ಕಾರ್ಯಕರ್ತರ ಕೋಪ ಶಮನಕ್ಕೆ ಯತ್ನಿಸಿದ್ದರೂ ಅದು ಫಲ ನೀಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಒಂದು ಕಡೆ ಅವರು ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಗೃಹ ಸಚಿವರ ಬಗ್ಗೆ ಕೇಳಿಬರುತ್ತಿರುವ ಅಸಹಾಯಕತೆಯ ಆರೋಪದ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬಹುದು. ಸಮಾಜದಲ್ಲಿ ಹಿಂಸೆ ಹರಡುವ ಶಕ್ತಿಗಳನ್ನು ಮಟ್ಟ ಹಾಕಲು ಯುಪಿ ಮಾದರಿ ಅನುಸರಿಸಲು ಸೂಚಿಸುವ ಸಾಧ್ಯತೆಯೂ ಇಲ್ಲದಿಲ್ಲ.
ಈ ನಡುವೆ, ಅಮಿತ್ ಶಾ ಅವರು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರಾಣ ಕಳೆದುಕೊಂಡಿರುವ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡುವ ಮೂಲಕ ಸಾಂತ್ವನ ಹೇಳುತ್ತಾರೆ ಎಂಬ ಮಾಹಿತಿಯೂ ಕೇಳಿಬರುತ್ತಿದೆ. ಆದರೆ, ಗೃಹ ಇಲಾಖೆಗೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಒಂದೊಮ್ಮೆ ಶಾ ಅವರು ಭೇಟಿ ನೀಡಿ ಭರವಸೆ ನೀಡಿದರೆ ಅದು ಕಾರ್ಯಕರ್ತರ ಕೋಪವನ್ನು ತಣಿಸಬಹುದು ಎಂಬ ಸಣ್ಣ ಆಶಾವಾದವೂ ಬಿಜೆಪಿಯಲ್ಲಿದೆ.
ಕೇರಳ ಮಾದರಿ ಹತ್ಯೆ: ಕರಂದ್ಲಾಜೆ
ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ರಾಜ್ಯದಲ್ಲಿ ಕೇರಳ ಮಾದರಿ ಹತ್ಯೆ ನಡೆಯುತ್ತಿದೆ. ನಿರಂತರವಾಗಿ ಹಿಂದು ಯುವಕರನ್ನು ಮತಾಂಧರು ಕಗ್ಗೊಲೆಗೈಯ್ಯುತ್ತಿದ್ದಾರೆ. ಕತ್ತು ಕತ್ತರಿಸಿ ಎಲ್ಲರನ್ನೂ ಕೊಲೆ ಮಾಡಲಾಗಿದೆ ಈ ಕೊಲೆಗಳಲ್ಲಿ ಸಾಮ್ಯತೆ ಇದೆ/ ಈ ಗಂಭೀರ ಸಮಸ್ಯೆಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿವರ ನೀಡಿದ್ದೇನೆ ಎಂದು ಹೇಳಿದ್ದಾರೆ.
ಈ ಕೊಲೆಗಳಿಗೆ ತರಬೇತಿ ಎಲ್ಲಿ ಸಿಗುತ್ತಿದೆ? ಇವುಗಳಿಗೆ ಹಣಕಾಸಿನ ನೆರವು ನೀಡುತ್ತಾ ಇರುವವರು ಯಾರು?ಕರ್ನಾಟಕದಲ್ಲಿ ಅವರಿಗೆ ಸ್ಥಳೀಯವಾಗಿ ಬೆಂಬಲಿಸುತ್ತಿರುವವರು ಯಾರು? ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದು ಅಗ್ರಹಿಸಿದ್ದಾರೆ.
ಸಮಗ್ರ ತನಿಖೆಗೆ ಒತ್ತಾಯಿಸಿದ್ದೇನೆ. ರಾಜ್ಯದಲ್ಲಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು, ಮೊದಲಾದ ಹಲವಾರು ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇನೆ. ಇದಕ್ಕೆ ಶಾ ಅವರು ಸ್ಪಂದಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.