ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮತ್ತು ಅದರ ಬಳಿಕ ಎದುರಾದ ಕಾರ್ಯಕರ್ತರ ಆಕ್ರೋಶ ಮತ್ತು ರಾಜೀನಾಮೆಗಳಿಂದ ಪಕ್ಷಕ್ಕೆ ಭಾರಿ ಹಾನಿಯಾಗಿದೆ ಎಂದು ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಸುಮಾರು ಒಂದುವರೆ ಗಂಟೆ ಕಾಲ ಚರ್ಚೆ ನಡೆಸಿದ ಅಮಿತ್ ಶಾ ಅವರು ಈಗ ಆಗಿರುವ ಹಾನಿಯನ್ನು ತಕ್ಷಣವೇ ಸರಿಪಡಿಸಿ ಎಂದು ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ದಿನಗಳ ಅವಧಿಯಲ್ಲಿ ನಡೆದ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಫಾಝಿಲ್ ಕೊಲೆ ಪ್ರಕರಣಗಳ ಕುರಿತು ವಿವರವಾದ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಮಿತ್ ಶಾ ಅವರಿಗೆ ನೀಡಿದರು. ಅಮಿತ್ ಶಾ ಅವರು ತಂಗಿರುವ ಹೋಟೆಲ್‌ಗೆ ಈ ಇಬ್ಬರು ನಾಯಕರು ಆಗಮಿಸಿದ್ದರು.
ಈಶ್ವರಪ್ಪ, ಸಿದ್ದೇಶ್ವರ್ ಹೇಳಿಕೆಗಳಿಗೆ ಆಕ್ರೋಶ
ಕಾರ್ಯಕರ್ತರು ಮತ್ತು ನಾಯಕರು ರಾಜೀನಾಮೆ ನೀಡುವಂಥ ಪರಿಸ್ಥಿತಿ ನಿರ್ಮಾಣವಾಗಿರುವುದೇ ತಪ್ಪು. ರಾಜೀನಾಮೆ ವಿಚಾರವಾಗಿ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದು ಅದಕ್ಕಿಂತಲೂ ದೊಡ್ಡ ತಪ್ಪು ಎಂದು ಅಮಿತ್ ಶಾ ಅವರು ಕೆ.ಎಸ್. ಈಶ್ವರಪ್ಪ ಮತ್ತು ಸಂಸದ ಸಿದ್ದೇಶ್ವರ್ ಅವರ ಹೇಳಿಕೆಗಳನ್ನು ಉಲ್ಲೇಖಿಸದೆಯೇ ಅಮಿತ್ ಶಾ ಹೇಳಿದರು ಎನ್ನಲಾಗಿದೆ.
ಕಾರ್ಯಕರ್ತರಿಗೆ ಬಿಜೆಪಿ ಪರ ನಿಲ್ಲುವಂತೆ ಮನವೊಲಿಸಬೇಕು, ಚುನಾವಣಾ ವರ್ಷ ಹಿನ್ನೆಲೆ ಕಾರ್ಯಕರ್ತರ ಅಹವಾಲುಗಳಿಗೆ ಗೌರವ ನೀಡಿ ಎಂದು ಶಾ ಅವರು ಸೂಚನೆ ನೀಡಿದರೆಂದು ತಿಳಿದುಬಂದಿದೆ.
ನಾಯಕರ ಹೇಳಿಕೆಯಿಂದ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಎಂದು ಸಿಟ್ಟು ಮಾಡಿಕೊಂಡಿರುವ ಅಮಿತ್ ಶಾ ಅವರು, ನಮ್ಮದು ಕಾರ್ಯಕರ್ತರ ಪಕ್ಷ, ಕಾರ್ಯಕರ್ತರನ್ನು ಹೀಗೆ ಕಡೆಗಣಿಸಿದ್ರೇ ಹೇಗ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಕಾರ್ಯಕರ್ತರ ವಿರುದ್ದ ಇಂತಹ ಹೇಳಿಕೆ ನೀಡದಂತೆ ರಾಜ್ಯ ನಾಯಕರಿಗೆ ಶಾ ಸೂಚನೆ ನೀಡಿದ್ದಾರೆ.
ʻʻಚುನಾವಣಾ ವರ್ಷವಾಗಿರುವುದರಿಂದ ಕಾರ್ಯಕರ್ತರ ಸೇವೆ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಅವಶ್ಯಕವಾಗಿದೆ. ಇಂತಹ ಹೊತ್ತಲ್ಲಿ ಕಾರ್ಯಕರ್ತರ ವಿರುದ್ದವೇ ಹೇಳಿಕೆ ನೀಡಿದ್ರೆ ಪಕ್ಷ ಯಾವ ಸಂದೇಶ ನೀಡಿದಂತಾಗುತ್ತದೆ. ಅದರಲ್ಲೂ ಬೇಸರದಿಂದ ರಾಜೀನಾಮೆ ನೀಡಿದ ನಾಯಕರು, ಕಾರ್ಯಕರ್ತರನ್ನು ಇನ್ನಷ್ಟು ಕೆರಳಿಸದೆ ಸಮಾಧಾನ ಮಾಡುವ ಕೆಲಸವಾಗಬೇಕು.. ಹೀಗಾಗಿ ಜವಾಬ್ದಾರಿ ಅರಿತು ಕೆಲಸ ಮಾಡಿʼʼ ಎಂದು ಅಮಿತ್ ಶಾ ಸಲಹೆ ನೀಡಿದ್ದಾರೆ.