Site icon Vistara News

Amrit Mahotsav | ಬ್ರಿಟಿಷರ ನಿದ್ದೆಗೆಡಿಸಿದ್ದ ಮೈಲಾರ ಮಹಾದೇವಪ್ಪ; ಹಾವೇರಿಯಲ್ಲಿದೆ ವೀರಸೌಧ!

ಸುರೇಶ ನಾಯ್ಕ, ಹಾವೇರಿ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ವಸ್ವವನ್ನೂ ಅರ್ಪಿಸಿದ ದೇಶಭಕ್ತರ ಸಂಖ್ಯೆ ಅಸಂಖ್ಯಾತ. ಅಂತಹವರಲ್ಲಿ ಹಾವೇರಿಯ ಮೈಲಾರ ಮಹಾದೇವಪ್ಪ ಕೂಡ ಒಬ್ಬರು. ಕಾನೂನು ಭಂಗ ಚಳವಳಿಯ ತೀವ್ರತೆ ಸಾರುವ, ತ್ಯಾಗ‌ ಬಲಿದಾನದ ಸಂಕೇತವಾಗಿ ಹಾವೇರಿಯ ತೋಟದಯಲ್ಲಾಪುರದಲ್ಲಿ ವೀರಸೌಧವಿದೆ. ಅಂದು ಬ್ರಿಟಿಷರ ಗುಂಡೇಟಿಗೆ ಹುತಾತ್ಮರಾಗಿದ್ದ ಮಹಾದೇವಪ್ಪ, ತಿರುಕಪ್ಪ, ವೀರಯ್ಯನವರ ಹೋರಾಟವನ್ನು ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಸಿದೆ ಈ ಸ್ಮಾರಕ. ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಈ ಸಂದರ್ಭದಲ್ಲಿ ಅವರ ಸಾಹಸಗಾಥೆಯು ಹೆಮ್ಮೆ ತರಿಸುತ್ತದೆ.

ಮೈಲಾರ ಮಹಾದೇವಪ್ಪ

ಹಾವೇರಿ ಜಿಲ್ಲೆಯ ಮೋಟೆಬೆನ್ನೂರ ಗ್ರಾಮದಲ್ಲಿ 1911ರ ಜೂನ್ 8ರಂದು ಜನಿಸಿದ್ದ ಮೈಲಾರ ಮಹದೇವಪ್ಪ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದವರು. ದೇಶಪ್ರೇಮಿಗಳಾಗಿದ್ದ ಮಾರ್ತಾಂಡಪ್ಪ ಮತ್ತು ಬಸಮ್ಮ ದಂಪತಿ ಮಗನಾದ ಮಹಾದೇವಪ್ಪ ಪ್ರಾಥಮಿಕ ಶಿಕ್ಷಣವನ್ನು ಮೋಟೆಬೆನ್ನೂರಿನಲ್ಲಿ ಮುಗಿಸಿ ಮುಂದಿನ‌ ಶಿಕ್ಷಣ ಹಂಸಬಾವಿಯಲ್ಲಿ ಮುಗಿಸಿದ ಬಳಿಕ ಬಾಗಲಕೋಟ ಜಿಲ್ಲೆಯ ಕಲಾದಗಿಯಲ್ಲಿ ನೇಯ್ಗೆಯ ಶಿಕ್ಷಣ, ಧಾರವಾಡದ ತರುಣ ಸಂಘದಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ತರಬೇತಿ ಪಡೆದರು.

ಇದನ್ನೂ ಓದಿ | Amrit Mahotsav | ಮಸಿಬಿನಾಳದ ಸ್ವಾತಂತ್ರ್ಯ ಹೋರಾಟಗಾರರು; ಮಠದಲ್ಲಿ ಮೊಳಗಿದ ಸಮರ ಗೀತೆ!

ಚಿಕ್ಕ ವಯಸ್ಸಿನಲ್ಲಿಯೆ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ದೇಶಭಕ್ತರೊಬ್ಬರು ಮಾಡಿದ ಭಾಷಣದಿಂದ ಪ್ರೇರಿಪಿತರಾಗಿದ್ದ ಇವರು, ಖಾದಿ ಬಟ್ಟೆಗಳ ಬಗ್ಗೆ ಒಲವು ಹೆಚ್ಚಿಸಿಕೊಂಡವರು. ಕಲಾದಗಿ ಗ್ರಾಮದಲ್ಲಿ ಖಾದಿ ತಯಾರಿಸುವುದನ್ನು ಕಲಿತು, ಊರೂರು ತಿರುಗಿ ಖಾದಿ ಬಳಕೆ ಕುರಿತು ಜಾಗೃತಿ ಮೂಡಿಸಿದರು.

ಸಬರಮತಿ ಆಶ್ರಮದಿಂದ ಬಂದ ಕರೆ
ಸಬರಮತಿ‌ ಆಶ್ರಮದಿಂದ ಕರೆ ಬರುತ್ತಿದ್ದಂತೆ, ಪತ್ನಿ ಸಿದ್ದಮ್ಮರೊಡಗೂಡಿ ಸಬರಮತಿ ಆಶ್ರಮ ಸೇರಿದ ಅವರು ಬಾಪೂಜಿ ಅವರ ನೆಚ್ಚಿನ ಶಿಷ್ಯರಾದರು. ಅದೇ ಸಮಯದಲ್ಲಿ ಶುರುವಾಗಿದ್ದ ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಅವರೊಡನೆ ಭಾಗವಹಿಸಿ 6 ತಿಂಗಳು ಸೆರೆಮನೆ ಶಿಕ್ಷೆ ಅನುಭವಿಸಿದರು. ಬಳಿಕ ಊರಿಗೆ ಬಂದಿದ್ದ ಮಹಾದೇವಪ್ಪ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಜೈಲು ಸೇರಿದರು. ಹಿಂಡಲಗಾ ಜೈಲಿನಲ್ಲಿದ್ದಾಗ ಅವರನ್ನು ಭೇಟಿಯಾಗಿದ್ದ ಗಾಂಧೀಜಿ ಅವರು ಮತ್ತಷ್ಟು ಪ್ರೋತ್ಸಾಹ ನೀಡಿದ್ದರು.

ಬಾಪೂಜಿ ಪ್ರೀತಿಯ ಶಿಷ್ಯ
1930ರಲ್ಲಿ ನಡೆದ ಗಾಂಧೀಜಿ ಅವರ ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ನೂರಾರು ಹೋರಾಟಗಾರರಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದು ಮಹಾದೇವಪ್ಪ ಅವರು ಮಾತ್ರ, ಜತೆಗೆ ಇವರು ಅತ್ಯಂತ ಕಿರಿಯ ಹೋರಾಟಗಾರರಾಗಿದ್ದರು. ಆ ಸಂದರ್ಭದಲ್ಲೇ ರಾಜ್ಯದ ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಇಲ್ಲಿಯ ಜನರನ್ನು ಆವರಿಸಿಬಿಟ್ಟಿತ್ತು. ಕಾನೂನು ಭಂಗ ಚಳವಳಿ ಎಲ್ಲೆಡೆ ವ್ಯಾಪಿಸಿತ್ತು. ಆಗ ಬಂಧನಕ್ಕೊಳಗಾಗಿ ಗಾಂಧೀಜಿ ಅವರೊಡನೆ ಮೈಲಾರ ಮಹಾದೇವರೂ ಜೈಲು ಸೇರಿದರು. 1932ರಲ್ಲಿ ಕಾನೂನು ಭಂಗ ಚಳವಳಿ ಮತ್ತಷ್ಟು ತೀವ್ರಗೊಂಡಾಗ ಮೈಲಾರ ಮಹಾದೇವಪ್ಪನವರು ತಮ್ಮ ಸಂಗಡಿಗರೊಂದಿಗೆ ಚಳವಳಿ ರೂಪಿಸಿದರು. ಸೇಂದಿ ಗಿಡ ಕಡಿಯುವ, ಹೆಂಡದಂಗಡಿ ನಾಶ ಮಾಡಿದ ಪರಿಣಾಮ ಮಹಾದೇವಪ್ಪರನ್ನು ಬ್ರಿಟಿಷರು ಬಂದಿಸಿದ್ದರು. ಕೊರಡೂರಿನಲ್ಲಿ ಸಾಬರಮತಿ ಮಾದರಿಯಲ್ಲಿ ಸೇವಾಶ್ರಮ ಸ್ಥಾಪಿಸಿ ಜನರಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದರು.

ದಿಕ್ಕೆಟ್ಟಿದ್ದ ಬ್ರಿಟಿಷರು
1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಯೊಂದಿಗೆ ಗಾಂಧೀಜಿ ಅವರು ಹೋರಾಟ ತೀವ್ರಗೊಳಿಸಿದಾಗ ದಕ್ಷಿಣ ಭಾಗದಲ್ಲಿ ಚಳವಳಿಗೆ ಮಹಾದೇವಪ್ಪ ಅವರು ನೇತೃತ್ವ ವಹಿಸಿದ್ದರು. ಸವಣೂರು ಬಳಿ ಸಂಗಡಿಗರೊಂದಿಗೆ ರೈಲ್ವೆ ನಿಲ್ದಾಣವನ್ನು ಸುಟ್ಟು ಹಾಕಿದರು. ಹೊನ್ನತ್ತಿ ಗ್ರಾಮದಲ್ಲಿ ಪೊಲೀಸರ ಬಂದೂಕು ಅಪಹರಿಸಿ, ಬಾಳೆಹೊಸೂರಿನ ಪೊಲೀಸ್ ಠಾಣೆಯನ್ನು ಸುಟ್ಟು ಹಾಕಿದರು. ಇವರ ಹೋರಾಟದಿಂದ ದಿಕ್ಕೆಟ್ಟಿದ್ದ ಬ್ರಿಟಿಷರು ಮಹದೇವಪ್ಪನವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.

ಮೈಲಾರ ಮಹಾದೇವಪ್ಪ ಹಾಗೂ ಪತ್ನಿ ಸಿದ್ದಮ್ಮ ಮೈಲಾರಪ್ಪ ಸಮಾಧಿಗಳು.

ಹೊಸರಿತ್ತಿಯ ಕಂದಾಯ ಕಚೇರಿ
ಹೊಸರಿತ್ತಿಯಲ್ಲಿದ್ದ ಕಂದಾಯ ಕಚೇರಿ ಲೂಟಿ ಮಾಡಲು ಮುಂದಾಗಿದ್ದ ಮಹಾದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಬ್ರಿಟಿಷರ ಗುಂಡೇಟಿಗೆ ಬಲಿಯಾದರು. 1943ರ ಏಪ್ರಿಲ್‌ 1ರಂದು ಬೆಳಗಿನ ಸಮಯದಲ್ಲಿ ವೀರಭದ್ರ ದೇವಾಲಯದಲ್ಲಿದ್ದ ಪೊಲೀಸರ ತುಕಡಿ ಪಕ್ಕದಲ್ಲಿದ್ದ ಖಜಾನೆಗೆ ಮುತ್ತಿಗೆ ಹಾಕಿದಾಗ, ಖಜಾನೆಯ ಬೀಗ ಮುರಿಯುವಾಗ ಅಡಗಿ ಕುಳಿತಿದ್ದ ಪೊಲೀಸ್ ಮಹದೇವಪ್ಪನವರ ಎದೆಗೆ ಗುಂಡು ಹಾರಿಸಿದ್ದ. ಇದೇ ದಿನ ಮೂವರನ್ನೂ ಬ್ರಿಟಿಷರು ಮೋಸದಿಂದ ಗುಂಡಿಟ್ಟು ಕೊಂದರು. ಅವರ ಸಮಾಧಿಯಿರುವ ಜಾಗದಲ್ಲಿ ವೀರಸೌಧ ನಿರ್ಮಿಸಲಾಗಿದೆ.

ದಾಸ್ಯದಿಂದ ಬಿಡುಗಡೆಯಾಗಲು ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದ್ದ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ತಾಲೂಕಿನ ಹೊಸರಿತ್ತಿಯಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಈ ಮೂವರ ಸಮಾಧಿ ಹಾವೇರಿ ನಗರದ ಹೊರವಲಯದ ತೋಟದ ಯಲ್ಲಾಪುರದಲ್ಲಿದ್ದು, ಅಲ್ಲಿ ವೀರಸೌಧವನ್ನು ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಚ್ಚೆದೆಯಿಂದ ನಡೆಸಿದ ಹೋರಾಟದ ರಕ್ತ ಚರಿತ್ರೆಯನ್ನು ಈ ವೀರಸೌಧ ಹೇಳುತ್ತದೆ.

ಇದನ್ನೂ ಓದಿ | Amrit Mahotsav | ಪ್ರಥಮ ಸ್ವಾತಂತ್ರ್ಯ ಸೇನಾನಿ ತಿರುನಲ್ವೇಲಿಯ ಪೂಲಿತ್ತೇವನ್

Exit mobile version