Site icon Vistara News

Amrit mahotsav | ಸ್ವಾತಂತ್ರ್ಯ ಸಂಗ್ರಾಮದ ಸವಿ ನೆನಪು ಸಾರುವ ಗಾಂಧಿ ಗುಡಿ!

ctd turuvanuru

ಸಿದ್ದಪ್ಪ ಸತ್ಯಣ್ಣವರ್‌, ಚಿತ್ರದುರ್ಗ
ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಹೋರಾಟದ ಕಹಳೆ ಮೊಳಗಿತ್ತು. ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆ ಪಡೆಯಲು ಜಾತಿ, ಧರ್ಮಗಳ ಸಂಕೋಲೆಯ ಮರೆತು ಭೇದಭಾವ ತೋರದೆ ಒಮ್ಮತದಿಂದ ಜನರು ಹೋರಾಟಕ್ಕೆ ಧುಮುಕಿದ್ದರು. ಇಂಥ ಒಂದು ನೆನಪುಗಳ ಕುರುಹುಗಳು ಎಷ್ಟೋ ಕಡೆ ಇರುವುದೇ ಇಲ್ಲ. ಆದರೆ, ಜಿಲ್ಲೆಯ ಗಾಂಧಿ ಸ್ಮಾರಕ ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit mahotsav) ಈ ಸಂದರ್ಭದಲ್ಲಿಯೂ ಸ್ವತಂತ್ರ ಚಳವಳಿಯ ನೆನಪನ್ನು ಸಾರುತ್ತಿದೆ!

ಈ ಸವಿನೆನಪಿಗೆ ಸಾಕ್ಷಿಯಾಗಿರುವುದು ತುರವನೂರು ಗ್ರಾಮ. ಇದು ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ತವರೂರು ಎಂದರೆ ತಪ್ಪಾಗಲಾರದು. ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಇಡಿ ಗ್ರಾಮವೇ ಹೋರಾಟದಲ್ಲಿ ಧುಮುಕಿತ್ತು. ಅದಕ್ಕೂ ಮುಂಚೆ 1939ರಲ್ಲಿ ಮಹಾತ್ಮ ಗಾಂಧಿ ಪಾನ ವಿರೋಧ ಚಳವಳಿಗೆ ಕರೆ ನೀಡಿದ್ದರು. ಈ ಕರೆಗೆ ತುರವನೂರು ಗ್ರಾಮದ 135ಕ್ಕೂ ಹೆಚ್ಚು ದೇಶಪ್ರೇಮಿಗಳು ಧ್ವನಿಗೂಡಿಸಿದ್ದರು. ಈ ಗ್ರಾಮದ ಸುತ್ತಮುತ್ತ ಬೆಳೆದಿದ್ದ ಈಚಲು ಮರಗಳನ್ನು ಕಡಿದು ಮದ್ಯ ತಯಾರಿಸುವುದನ್ನು ತಡೆದು, ಬ್ರಿಟಿಷ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದರು. ಇದರಿಂದ ಕೆಂಡಾಮಂಡಲವಾದ ಬ್ರಿಟಿಷ್ ಸರ್ಕಾರ ಇವರನ್ನೆಲ್ಲ ಜೈಲಿಗೆ ಅಟ್ಟಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ 1942ರಲ್ಲಿ ತಮ್ಮ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿ ಅವರನ್ನು ತುರುವನೂರಿಗೆ ಕಳುಹಿಸಿ ಇವರಲ್ಲಿ ಇನ್ನಷ್ಟು ಸ್ವಾತಂತ್ರ್ಯದ ಕಿಚ್ಚಿನ್ನು ಹಚ್ಚಿಸಿದ್ದರು.

ಗಾಂಧೀಜಿ ಅವರ ಕಂಚಿನ ಪ್ರತಿಮೆ

ಈ ಚಳವಳಿಯ ಸ್ಮರಣಾರ್ಥ ತುರುವನೂರಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಗಾಂಧಿ ಗುಡಿಯನ್ನು ಕಟ್ಟಲು ತೀರ್ಮಾನ ಕೈಗೊಳ್ಳಲಾಯಿತು. ಚಿತ್ರದುರ್ಗ ಜಿಲ್ಲೆಯವರೇ ಆಗಿದ್ದ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಈ ಗಾಂಧಿ ದೇಗುಲವನ್ನು 1968ರ ಅಕ್ಟೋಬರ್ 1ರಂದು ಉದ್ಘಾಟಿಸಿದ್ದರು. ನಂತರದ ದಿನಗಳಲ್ಲಿ ಊರಿನ ಪ್ರಮುಖರು ಪ್ರಮುಖ ಸಭೆಗಳನ್ನು ಇಲ್ಲಿಯೇ ನಡೆಸಿ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. ಈಗಲೂ ಆ ಪರಿಪಾಠ ಮುಂದುವರಿದಿದೆ. ಇನ್ನು ಸ್ವಾತಂತ್ರ್ಯ ದಿನ ಬಂತೆಂದರೆ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ. ಇಡಿ ಊರು ಮಧುವಣಗಿತ್ತಿಯಂತೆ ಶೃಂಗಾರಗೊಂಡಿರುತ್ತದೆ. ವಿಜೃಂಬಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಿ ಗಾಂಧಿ ವಿಚಾರಧಾರೆಯನ್ನು ಮನವರಿಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಗಾಂಧಿ ಪ್ರತಿಮೆಗೆ ನಿತ್ಯ ಪೂಜೆ, ಪುನಸ್ಕಾರ ನಡೆಯುತ್ತದೆ.

ಇದನ್ನೂ ಓದಿ | ಸ್ವಾತಂತ್ರ್ಯ ಅಮೃತ ಮಹೋತ್ಸವ | ಬ್ರಿಟಿಷರ ಗುಂಡಿಗೆ ಎದೆ ಕೊಟ್ಟಿದ್ದ ಹುಬ್ಬಳ್ಳಿಯ ಧೀರ ಬಾಲಕ

ಗಾಂಧೀಜಿ ಶ್ಲಾಘಿಸಿದ್ದರು
ತುರುವನೂರು ಇಡೀ ಜಿಲ್ಲೆಯಲ್ಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಗ್ರಾಮ. ಇಲ್ಲಿ ಆಗ ಮನೆಮನೆಗೂ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಮದ್ಯದ ಮೇಲೆ ಬ್ರಿಟಿಷರು ತೆರಿಗೆ ಹೇರಿದಾಗ ಈಚಲು ಗಿಡಗಳನ್ನು ಕಡಿದು ಜನ ಪ್ರತಿಭಟಿಸಿದ್ದರು. ಈ ವೇಳೆ ಬ್ರಿಟಿಷ್‌ ಸರ್ಕಾರ ನೂರಾರು ಜನರನ್ನು ಜೈಲಿಗಟ್ಟಿತ್ತು. ಈ ಸುದ್ದಿ ಆಗ ಮಹಾತ್ಮ ಗಾಂಧಿ ಅವರಿಗೂ ತಲುಪಿತ್ತು. ಅವರು ಆಗ ಅವರ ಆಪ್ತ ಸಹಾಯಕ ಮಹದೇವ್ ದೇಸಾಯಿ ಅವರನ್ನು ಕಳುಹಿಸಿದ್ದರು‌. ಮುಂದೆ ಗಾಂಧಿ ದಾವಣೆಗೆರೆಗೆ ಬಂದಾಗ ತುರುವನೂರು ಹೋರಾಟವನ್ನು ಶ್ಲಾಘಿಸಿದ್ದರು‌. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಸ್ಮರಣೀಯ. ಭತ್ತೇರಿ ಮೇಲೆ ಇಲ್ಲಿ ಗಾಂಧಿ ಪುತ್ಥಳಿ ಅನಾವರಣ ಮಾಡಲಾಗಿದೆ. ನಿತ್ಯ ಪೂಜೆ ನಡೆಸುವ ಮೂಲಕ ಇಡೀ ಗ್ರಾಮ ಸ್ವಾತಂತ್ರ್ಯ ಹೋರಾಟವನ್ನು ನೆನಪಿನಲ್ಲಿಟ್ಟುಕೊಂಡಿದೆ ಎಂದು ತುರುವನೂರು ಗ್ರಾಮಸ್ಥ ಹನಮಂತರೆಡ್ಡಿ “ವಿಸ್ತಾರ ನ್ಯೂಸ್‌”ಗೆ ಹೇಳಿದ್ದಾರೆ.

ಕಣ್ಮನ ಸೆಳೆಯುವ ಕಂಚಿನ ಗಾಂಧಿ ಪ್ರತಿಮೆ
ಸ್ವಾತಂತ್ರ್ಯ ನಂತರ ಸರ್ಕಾರ ಇಲ್ಲಿನ 136 ಜನರಿಗೆ ಸ್ವಾತಂತ್ರ್ಯ ಯೋಧರ ಮಾಸಾಶನ ಮಂಜೂರು ಮಾಡಿತು. ಗಾಂಧಿ ತತ್ವ ಸಿದ್ಧಾಂತಕ್ಕೆ ಅಪಚಾರವಾಗದಂತೆ ಕಾರ್ಯಕ್ರಮ ನಡೆಸುವ ಈ ಗ್ರಾಮದ ಜನತೆ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ತುರುವನೂರು ಗ್ರಾಮದಲ್ಲಿ ಹೋರಾಟದ ನೆನಪಿಗಾಗಿ ಕಲ್ಲಿನ ಕೋಟೆಯಂಥ ಕಟ್ಟಡದ ಮೇಲೆ ನಿರ್ಮಿಸಿರುವ ಕಂಚಿನ ಗಾಂಧಿ ಪ್ರತಿಮೆ ಇಂದಿಗೂ ಎಲ್ಲರ ಕಣ್ಮನ ಸೆಳೆಯುತ್ತದೆ.

ಇದನ್ನೂ ಓದಿ | Har Ghar Tiranga | ಪ್ರಧಾನಿ ಮೋದಿ ಕರೆಕೊಟ್ಟ ಹರ್​ ಘರ್​ ತಿರಂಗಾಕ್ಕೆ ಭರ್ಜರಿ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​

Exit mobile version