ಬಳ್ಳಾರಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ (Amrit Mahotsav) ಹಿನ್ನೆಲೆಯಲ್ಲಿ ಹರ್-ಘರ್ ತಿರಂಗ ಅಭಿಯಾನದ ಅಂಗವಾಗಿ ಬಳ್ಳಾರಿಯ ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ಸಾವಿರಾರು ಜನರು ತಿರಂಗ ಧ್ವಜ ಹಿಡಿದು ಜಯಘೋಷದ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಧ್ವಜಾರೋಹಣ ನೇರವೇರಿಸಿದರು.
ನಗರದ ವಿವಿಧ ಶಾಲಾ-ಕಾಲೇಜುಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೈಯಲ್ಲಿ ಧ್ವಜ ಹಿಡಿದು ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ, ದೇಶ ಭಕ್ತಗೀತೆಗಳನ್ನು ಹಾಡುತ್ತಾ ತಂಡೋಪ ತಂಡವಾಗಿ ಗವಿಯಪ್ಪ ವೃತ್ತದಲ್ಲಿ ಜಮಾವಣೆಗೊಂಡರು.
ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೊಡ್ದ ಭಾವುಟವೊಂದನ್ನು ಸಿದ್ಧಪಡಿಸಿ ಧ್ವಜಾರೋಹಣ ಸಂದರ್ಭದಲ್ಲಿ ತರಲಾಯಿತು. ಇಡೀ ವೃತ್ತವೇ ಜನರಿಂದ ಮತ್ತು ವಿದ್ಯಾರ್ಥಿಗಳಿಂದ ಕಿಕ್ಕಿರಿದು ಹೋಗಿತ್ತು. ಸಚಿವ ಶ್ರೀರಾಮುಲು 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜವು ಕಂಭದ ತುತ್ತ ತುದಿಗೆ ಹೋದಾಗ ಜನರ ಘೋಷಣೆ ಮುಗಿಲು ಮುಟ್ಟಿತ್ತು.
ಕಾರ್ಯಕ್ರಮದಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ರಾಯಲ್ ಮತ್ತು ಗವಿಯಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಧ್ವಜಾರೋಹಣದಲ್ಲಿ ಶಾಸಕರು, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಜಿಲ್ಲಾ ಮಟ್ಟದ ಆಧಿಕಾಗಳು ಇದ್ದರು.
ಇದನ್ನೂ ಓದಿ | Amrit Mahotsav | ಮಾಣಿಕ್ ಷಾ ಮೈದಾನಕ್ಕಿಂತ ಚಾಮರಾಜಪೇಟೆ ಮೈದಾನಕ್ಕೇ ಅತಿ ಹೆಚ್ಚು ಖಾಕಿ ಭದ್ರತೆ!