ಶಿವಮೊಗ್ಗ: ದೇಶದಲ್ಲಿ 75ರ ಸ್ವಾತಂತ್ರ್ಯ ಅಮೃತ ಮಹೋತ್ಸವ (Amrit Mahotsav) ಆಚರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಪಾದಯಾತ್ರೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸೊರಬದಲ್ಲಿ ಗುರುವಾರ ಮಾಜಿ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ನಡಿಗೆ ಯಶಸ್ವಿಯಾಗಿ ನಡೆಯಿತು. ಸುರಿಯುತ್ತಿರುವ ಮಳೆಯಲ್ಲಿಯೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪಾದಯಾತ್ರೆ ಬಳಿಕ ಮಾತನಾಡಿದ ಮಧು ಬಂಗಾರಪ್ಪ, ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಕ್ಷದ ಧ್ವಜ, ಬ್ಯಾನರ್ ಬಳಸದೆ ಪಕ್ಷಾತೀತವಾಗಿ ಕಾರ್ಯಕ್ರಮ ನಡೆದಿದೆ. ಇಂದು ಹಾರಾಡುತ್ತಿರುವ ತ್ರಿವರ್ಣ ಧ್ವಜ ಈ ಭೂಮಿ ಇರುವವರೆಗೂ ಶಾಶ್ವತವಾಗಿರಲಿ. ನಮ್ಮ ಸಂವಿಧಾನ, ತ್ರಿವರ್ಣ ಧ್ವಜ ಚಿರಾಯುವಾಗಿರಲಿ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಿಳುವಾಣಿ ಗ್ರಾಮದಿಂದ ಸೊರಬ ಪಟ್ಟಣದವರೆಗೆ ಪಾದಯಾತ್ರೆ ನಡೆಯಿತು. ಸುಮಾರು 15 ಕಿ.ಮೀ. ಪಾದಯಾತ್ರೆ ನಡೆಸಿದ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಸ್ವಾತಂತ್ರ್ಯ ಹೋರಾಟದ ಘೋಷಣೆಗಳನ್ನು ಕೂಗಿದರು. ಮಾರ್ಗದುದ್ದಕ್ಕೂ ಗ್ರಾಮಗಳಲ್ಲಿ ಮಹಿಳೆಯರು ಆರತಿ ಎತ್ತಿ, ಕಂಕಣ, ರಕ್ಷೆ ಕಟ್ಟಿ ಪಾದಯಾತ್ರೆಗೆ ಶುಭಹಾರೈಸಿದರು.
ಮೊದಲ ಬಾರಿಗೆ ಮಧು ಬಂಗಾರಪ್ಪ ಕುಟುಂಬ ಭಾಗಿ
ಮಧು ಬಂಗಾರಪ್ಪ ಅವರ ಪತ್ನಿ ಅನಿತಾ, ಪುತ್ರ ಸೂರ್ಯ ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನಸೆಳೆದರು. ಮಧು ಬಂಗಾರಪ್ಪ ಕುಟುಂಬ ಆರಂಭದಿಂದ ಕೊನೆವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಮುಖಂಡ ಶಿವಮೂರ್ತಿ ನಾಯಕ್, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮತ್ತಿತರರು ಪಾದಯಾತ್ರೆಗೆ ಸಾಥ್ ಕೊಟ್ಟರು.
ಇದನ್ನೂ ಓದಿ | ಸಂವಿಧಾನ ಬದಲಿಸುವವರೇ ಈಗ ʼಹರ್ ಘರ್ ತಿರಂಗʼ ಕಾರ್ಯಕ್ರಮ ಮಾಡುತ್ತಿದ್ದಾರೆ; ಮಧು ಬಂಗಾರಪ್ಪ ಕಿಡಿ