Site icon Vistara News

ಅಮೃತ ನಗರೋತ್ಥಾನ ಯೋಜನೆ ಎರಡೇ ವರ್ಷದಲ್ಲಿ ಪೂರ್ಣಗೊಳಿಸಲು ಸಿಎಂ ಸೂಚನೆ

ಬೆಂಗಳೂರು: ಬಹುನಿರೀಕ್ಷೆಯ ಅಮೃತ ನಗರೋತ್ಥಾನ ಯೋಜನೆಯನ್ನು ಈ ಹಿಂದೆ ನಿಗದಿಪಡಿಸಿದ ಮೂರು ವರ್ಷದ ಬದಲಿಗೆ ಎರಡೇ ವರ್ಷದಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದ 291 ನಗರಗಳ ಸ್ಥಳೀಯ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯನ್ನು ಕಳೆದ ವರ್ಷದ ಆಗಸ್ಟ್‌ 15ರಂದು ಪ್ರಕಟಿಸಲಾಗಿತ್ತು.

ಶುಕ್ರವಾರ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯಲ್ಲಿ ಆಯವ್ಯಯ ಘೋಷಣೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆ ನಡೆಸಿದ ವೇಳೆ ಮಾತನಾಡಿದ ಸಿಎಂ, ಯೋಜನೆಯನ್ನು ಎರಡೇ ವರ್ಷದಲ್ಲಿ ಪೂರ್ಣಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಒಟ್ಟು 3885 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯನ್ನು 2024ರಲ್ಲಿಯೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಐದು ವರ್ಷಗಳಲ್ಲಿ ರಾಜ್ಯದ ಪಾಲೂ ಸೇರಿದಂತೆ ಒಟ್ಟು 9260 ಕೋಟಿ ರೂ. ವೆಚ್ಚದಲ್ಲಿ 287 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ಮತ್ತು ಒಳಚರಂಡಿ ವ್ಯವಸ್ಥೆ ರೂಪಿಸಲಾಗುತ್ತಿದೆ.

ಈ ಯೋಜನೆಯಡಿ, ತಾಂತ್ರಿಕವಾಗಿ ಕಾರ್ಯಸಾಧ್ಯವಾಗಿರುವ ನಗರ ಸ್ಥಳೀಯ ಸಂಸ್ಥೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿ ಕಾಮಗಾರಿ ಪ್ರಾರಂಭಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ನಗರ ಪ್ರದೇಶದ ಬಡಜನರಿಗೆ ಉತ್ತಮ ಸೌಲಭ್ಯ ಒದಗಿಸಲು ಸೂಚಿಸಿದ ಮುಖ್ಯಮಂತ್ರಿಗಳು, ನಗರ ಪ್ರದೇಶದ ಸರಳ ನಿಯಮಗಳೊಂದಿಗೆ ವಸತಿ ಯೋಜನೆ ರೂಪಿಸಲು ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 6000 ಪೌರ ಕಾರ್ಮಿಕರ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ನೇಮಕಾತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಹಾಗೂ ರೋಸ್ಟರ್ ವಿನಾಯಿತಿ ನೀಡಲು ಕ್ರಮ ವಹಿಸುವಂತೆ ತಿಳಿಸಿದರು. ಪೌರ ಕಾರ್ಮಿಕರಿಗೆ 2000 ರೂ. ಹಾರ್ಡ್‍ಷಿಪ್ ಭತ್ಯೆ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯದ ಎಲ್ಲ ವಿಭಾಗಗಳಲ್ಲಿ ಎಲ್ಲ ಸೌಕರ್ಯಗಳನ್ನೂ ಒಳಗೊಂಡ Integrated township ಅನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಯೋಜನೆ ಅನುಷ್ಠಾನಕ್ಕೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲ ವಿಭಾಗಗಳಿಂದ ಸ್ವೀಕರಿಸಲಾದ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಯೋಜನೆಗೆ ಕೂಡಲೇ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಬೇಕು. ಈ ಯೋಜನೆಗೆ ಸಂಬಂಧ ಪಟ್ಟ ಎಲ್ಲ ಇಲಾಖೆಗಳ ಅಭಿಪ್ರಾಯ ಪಡೆದು ಟೌನ್‍ಷಿಪ್ ನ ರೂಪುರೇಷೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಅಜಯ್ ನಾಗಭೂಷಣ್, ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಯುಕ್ತ ಕೆ.ಪಿ. ಮೋಹನ್ ರಾಜ್, ಪೌರಾಡಳಿತ ಇಲಾಖೆ ನಿರ್ದೇಶಕರಾದ ಎಂ.ಎಸ್. ಅರ್ಚನಾ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರ

ಇದನ್ನೂ ಓದಿ: ಮಂಗಳೂರಿನಲ್ಲಿ ಫರ್ನೀಚರ್ ಕ್ಲಸ್ಟರ್ ಆರಂಭಕ್ಕೆ ಕ್ರಮ: CM ಬಸವರಾಜ ಬೊಮ್ಮಾಯಿ

Exit mobile version