Site icon Vistara News

ಮೋದಿ ಕನಸಿಗೆ ನಿರ್ಮಲಾ ಬಲ: ಕೋಲಾರದ 75 ಕೆರೆ ಅಭಿವೃದ್ಧಿಗೆ ಹಣಕಸು ಸಚಿವರ ಹಣ

Narendra Modi

ಬೆಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದ 75 ಕೆರೆಗಳನ್ನು ಅಭಿವೃದ್ಧಿಪಡಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಶಯಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ( Nirmala Seetharaman) ಕಾರ್ಯೋನ್ಮುಖರಾಗಿದ್ದಾರೆ.

ಕೋಲಾರ ಜಿಲ್ಲೆಯ 75 ಕೆರೆಗಳನ್ನು ಅಭಿವೃದ್ಧಿಪಡಿಸಲು ತಮ್ಮ ಸಂಸತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ (MPLAD) ಹಣವನ್ನು ಒದಗಿಸುವುದಾಗಿ ಘೋಷಿಸಿದ್ದಾರೆ.

ಭಾರತೀಯ ಜನತಾ ಪಕ್ಷದ (BJP) ಸಂಸ್ಥಾಪನಾ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿ ಪ್ರವಾಸ ಮಾಡಿದ್ದರು. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳ ನಾಯಕರನ್ನು ಭೇಟಿ ಮಾಡಿದ್ದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ (Azadi Ka Amrut Mahotsav) ಸಂದರ್ಭದಲ್ಲಿ ರಾಜ್ಯದ 75 ಕೆರೆಗಳನ್ನು ಅಭಿವೃದ್ಧಿಪಡಿಸಿ ಎಂದಿದ್ದರು. ಈ ಯೋಜನೆಗೆ “ಅಮೃತ ಸರೋವರ” ಯೋಜನೆ ಎಂದು ಹೆಸರಿಟ್ಟಿದ್ದರು.

ಪ್ರಧಾನಿ ಮೋದಿಯವರ ಈ ಕರೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಂದಿಸಿದ್ದಾರೆ. ಈ ಕುರಿತು ತಮ್ಮ Twitter ಖಾತೆಯ ಮೂಲಕ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ 75 ಕೆರೆ ಎಂದು ಪ್ರಧಾನಿ ಹೇಳಿದ್ದರೆ ನಿರ್ಮಲಾ ಅವರು ಕೋಲಾರ ಜಿಲ್ಲೆಯಲ್ಲೆ 75 ಕೆರೆಗಳಿಗೆ ನೆರವು ನೀಡಲು ಮುಂದಾಗಿದ್ದಾರೆ.

“ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಬೇಕೆಂಬ ಪ್ರಧಾನಿ ಮೋದಿಯವರ ದೂರಾಲೋಚನೆಗೆ ನಾನು ಬೆಂಬಲ ನೀಡುತ್ತಿದ್ದೇನೆ. ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಕೋಲಾರ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿಗೆ MPLADS ನಿಂದ ಹಣ ನೀಡಲಾಗುತ್ತದೆ. ₹1.85 ಕೋಟಿಯನ್ನು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೊಂದಿಗೆ(MGNREGA) ಸಂಯೋಜಿಸಿ ಹೂಳು ತೆಗೆಯುವುದು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಅಭಿವೃದ್ಧಿಗಾಗಿ ಕೈಗೊಳ್ಳಲಾಗುವ ಎಲ್ಲ 75 ಕೆರೆಗಳ ಪಟ್ಟಿಯ ಜತೆಗೆ ಈ ಕಾರ್ಯಕ್ಕಾಗಿ MPLADS ಹಣ ಬಿಡುಗಡೆ ಮಾಡುವಂತೆ ಕೋಲಾರ ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನೂ ಲಗತ್ತಿಸಿದ್ದಾರೆ.

Exit mobile version