| ಶಾಂತಮೂರ್ತಿ, ಬೆಂಗಳೂರು
ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ಹಾಲಿನ ಉತ್ಪನ್ನಗಳ ಜತೆ ರಾಜ್ಯದ ಜನರಿಗೆ ವಿಶೇಷ ರೀತಿಯ ಬಾಂಧವ್ಯವಿದೆ. ಕನ್ನಡಿಗರ ಮನೆ ಮಾತಾಗಿರುವ ನಂದಿನಿ ಬ್ರ್ಯಾಂಡ್‌ಗೆ ಸೆಡ್ಡು ಹೊಡೆಯಲು ದೇಶದ ಅತಿದೊಡ್ಡ ಡೇರಿ ಬ್ರ್ಯಾಂಡ್, ಗುಜರಾತ್ ಮೂಲದ ಅಮುಲ್ ಸಜ್ಜಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ ಮನೆಗೆ ಹಾಲು, ಮೊಸರು ಪೂರೈಕೆ ಮಾಡಲು ಮುಂದಾಗಿರುವ ಅಮುಲ್ ವಿರುದ್ಧ ಕನ್ನಡಿಗರು ಸಮರ ಸಾರಿದ್ದಾರೆ. ಕರುನಾಡ ಹೆಮ್ಮೆಯ ಬ್ರ್ಯಾಂಡ್ ʼನಂದಿನಿʼ ಉಳಿವಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ʼಸೇವ್ ನಂದಿನಿʼ ( Save Nandini-ನಂದಿನಿ ಉಳಿಸಿ) ಅಭಿಯಾನ ಆರಂಭಿಸಿದ್ದಾರೆ.
ಈ ಹಿಂದೆ ನಂದಿನಿಯನ್ನು ಅಮುಲ್ ಜತೆಗೆ ವಿಲೀನ ಮಾಡಲಾಗುತ್ತದೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಉಂಟಾಗಿತ್ತು. ಅದೇ ರೀತಿ ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂದು ಮುದ್ರಣವಾಗಿದ್ದಕ್ಕೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತವಾಯಿತು. ಇದೀಗ ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಹೊಸದೊಂದು ವಿವಾದ ತಲೆ ಎತ್ತಿದೆ. ಕೆಎಂಎಫ್ಗೆ ಸೆಡ್ಡುಹೊಡೆಯುವ ಹುನ್ನಾರ ನಡೆಯುತ್ತಿದ್ದು, ಅಮುಲ್‌ಗೆ ಮನ್ನಣೆ ನೀಡಲು ಕೆಎಂಎಫ್ ವಿರುದ್ಧ ಕುತಂತ್ರ ನಡೆಸಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ | Nandini: ಕರ್ನಾಟಕದ ಮಾರುಕಟ್ಟೆಗೆ ಅಮುಲ್ ಕೊಡಲಿದೆ ಎಂಟ್ರಿ; ನಂದಿನಿ ಹಾಲಿಗಿಂತ ಅಮುಲ್ ಎಷ್ಟು ದುಬಾರಿ?
ಕೃತಕ ಅಭಾವ ಸೃಷ್ಟಿ ಆರೋಪ
ಕೆಎಂಎಫ್ ಹಾಲಿನ ಬೂತ್‌ಗಳಲ್ಲಿ ನಂದಿನಿ ಉತ್ಪನ್ನಗಳ ಅಲಭ್ಯತೆ ಕುರಿತು ದೂರುಗಳು ಕೇಳಿ ಬರುತ್ತಿದ್ದು, ಅದರಲ್ಲೂ ಅಮುಲ್ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಹೊತ್ತಲ್ಲೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ನಡುವೆ ಗುಜರಾತ್ ಮೂಲದ ಅಮುಲ್ ಕಂಪನಿ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮನೆ ಮನೆಗೆ ಹಾಲು, ಮೊಸರು ಪೂರೈಕೆ ಮಾಡಲು ಸದ್ದಿಲ್ಲದೇ ತಯಾರಿ ನಡೆಸಿದೆ. ಈ ವಿಷಯ ಬಯಲಾಗುತ್ತಿದ್ದಂತೆ ಅಮುಲ್ ವಿರುದ್ಧ ಸಿಡಿದೆದ್ದ ಕನ್ನಡಿಗರು, ಸಾಮಾಜಿಕ ಜಾಲತಾಣಗಳಲ್ಲಿ #Savenandini ಅಭಿಯಾನ ಆರಂಭಿಸಿ ಸಮರ ಸಾರಿದ್ದಾರೆ.
ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಮನೆ ಮಾತಾಗಿರುವ ನಂದಿನಿಗೆ ಅದರದ್ದೇ ಆದ ಮಾರ್ಕೆಟ್ ಇದೆ. ಕನ್ನಡಿಗರ ಮನೆ ಮನದಲ್ಲೂ ನಂದಿನಿ ಬ್ರ್ಯಾಂಡ್‌ಗೆ ವಿಶೇಷ ಸ್ಥಾನ ಕೂಡ ಇದೆ. ಆದರೆ ಇದೀಗ ಬೇರೆ ರಾಜ್ಯದ ಬ್ರ್ಯಾಂಡ್ ಇಲ್ಲಿ ಸದ್ದುಮಾಡಲು ಸಜ್ಜಾಗಿರುವುದಕ್ಕೆ ಸಾರ್ವಜನಿಕರು ಸೇರಿ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ | Inside Story: ಕಾಂಗ್ರೆಸ್ ಮೊಲವಂತೆ, ಬಿಜೆಪಿ ಆಮೆಯಂತೆ: ದಾಪುಗಾಲಿಗೆ ಪುಟಾಣಿ ಹೆಜ್ಜೆಯೇ ಉತ್ತರವಂತೆ ಹೌದಾ?
ನಂದಿನಿ ಪ್ರಚಾರ ರಾಯಭಾರಿ ಆಗಿದ್ದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕೂಡ ಅಮುಲ್ ಆಧಿಪತ್ಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗುಣಮಟ್ಟ, ಉತ್ಕೃಷ್ಟತೆ ಕಾಯ್ದುಕೊಂಡು ಬರುತ್ತಿರುವ ನಂದಿನಿಗೆ ನಮ್ಮ ಬೆಂಬಲ ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಯಾನದ ಕಿಚ್ಚು ಹಚ್ಚಿದ್ದಾರೆ. ಸೇವ್ ನಂದಿನಿ, ಬಾಯ್ಕಾಟ್ ಅಮುಲ್ ಎಂಬ ಅಭಿಯಾನದ ಮೂಲಕ ನಂದಿನಿ ಮೇಲಿನ ಅಭಿಮಾನ ಸಾರಿ ಹೇಳುತ್ತಿದ್ದಾರೆ. ಇವೆಲ್ಲದರ ಮಧ್ಯೆ ಅಮುಲ್ ರಾಜ್ಯದಲ್ಲಿ ತನ್ನ ವಿಸ್ತಾರವನ್ನ ಹೆಚ್ಚಿಸಿಕೊಳ್ಳುತ್ತಾ ಅಥವಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಮೂಲೆ ಸೇರುತ್ತಾ ಎಂಬುವುದನ್ನು ಕಾದುನೋಡಬೇಕಿದೆ.