ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ (Prajwal Revanna Case) ಕೂಡಲೇ ಕರ್ನಾಟಕಕ್ಕೆ ಬಂದು, ನೆಲದ ಕಾನೂನು ಗೌರವಿಸಬೇಕು ಎಂದು ಸಂಸದನ ಅಜ್ಜ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H D Deve Gowda) ಅವರು ಬಹಿರಂಗ ಪತ್ರ ಬರೆದಿದ್ದಾರೆ. ರಾಜ್ಯದ ಜನರು ಕೂಡ ಪ್ರಜ್ವಲ್ ರೇವಣ್ಣ ವಾಪಸ್ ಬರಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ‘ವಿಸ್ತಾರ ನ್ಯೂಸ್’ ಕೂಡ ಪ್ರಜ್ವಲ್ ರೇವಣ್ಣಗೆ ಬಹಿರಂಗ ಪತ್ರದ ಮೂಲಕ ಕರ್ನಾಟಕಕ್ಕೆ ಬರುವಂತೆ ರಾಜ್ಯದ ಜನರ ಪರವಾಗಿ ಆಗ್ರಹಿಸಿದೆ.
ಹೀಗಿದೆ ವಿಸ್ತಾರ ನ್ಯೂಸ್ ಪತ್ರದ ಸಾರಾಂಶ…
“ಮಿಸ್ಟರ್ ಪ್ರಜ್ವಲ್, ನಿಮ್ಮನ್ನ ಇವತ್ತು ಓರ್ವ ಸಂಸದ ಅಂತಾ ಕರೆಯೋದಕ್ಕೆ ನಿಜಕ್ಕೂ ಅಸಹ್ಯವೆನ್ನಿಸ್ತಿದೆ. ಅಮೂಲ್ಯ ಮತ ಹಾಕಿ ನಿಮ್ಮನ್ನ ಗೆಲ್ಲಿಸಿದ ಸಮಸ್ತ ಹಾಸನದ ಜನತೆ ಇಂದು ಪಾಪಪ್ರಜ್ಞೆಯಲ್ಲಿ ಮುಳುಗಿಹೋಗಿದ್ದಾರೆ. ಯಾಕೆಂದ್ರೆ, ಪ್ರಜಾಸತ್ತಾತ್ಮಕವಾದ ನಿಮ್ಮ ಹುದ್ದೆಗೆ ನಯಾಪೈಸೆ ಕಿಮ್ಮತ್ತಿಲ್ಲದ ಹಾಗೆ ನಡೆದುಕೊಂಡವರು ನೀವು. ಚಿಕ್ಕ ವಯಸ್ಸಿಗೆ ಸಂಸತ್ ಪ್ರವೇಶಿಸಿದ್ದ ನೀವು ಯುವ ಪೀಳಿಗೆಗೆ ಆದರ್ಶವಾಗಿ ನಿಲ್ಲಬೇಕಿತ್ತು. ಆದ್ರೆ ಇಂದು ನಿಮ್ಮ ಹೆಸರನ್ನೂ ಅವರ ಮಕ್ಕಳಿಗೆ ಇಡೋಕೆ ನಾಡಿನ ಪೋಷಕರು ಹಿಂದೇಟು ಹಾಕೋ ಸನ್ನಿವೇಶ ಸೃಷ್ಟಿಸಿಕೊಂಡುಬಿಟ್ಟಿದ್ದೀರಿ” ಎಂಬುದಾಗಿ ವಿಸ್ತಾರ ನ್ಯೂಸ್ ತರಾಟೆಗೆ ತೆಗೆದುಕೊಂಡಿದೆ.
ಸಮಸ್ತ ಕರುನಾಡೇ ಹೆಮ್ಮೆಪಡುವಂಥಾ ಕುಟುಂಬದ ಕುಡಿಯಾದ ನೀವು ಇವತ್ತು ಖಳನಾಯಕನ ಜಾಗದಲ್ಲಿ ನಿಂತಿದ್ದೀರಿ. ಒಂದಂತೂ ಸತ್ಯ, ಸಮಸ್ತ ಕರುನಾಡೇ ಗರ್ವದಿಂದ ಬೀಗುವಂತೆ ಪ್ರಧಾನಿ ಹುದ್ದೆಗೇರಿದವರು ನಿಮ್ಮ ತಾತ. ಮರೆಯದಿರಿ, ಅವಿರಿಗೀಗ ಬರೋಬ್ಬರಿ 92 ವರ್ಷ ವಯಸ್ಸು. ಅವರ ಸಂಧ್ಯಾಕಾಲದಲ್ಲಿ ನಿಜಕ್ಕೂ ನಗುನಗುತ್ತಲಿರಬೇಕಿದ್ದ ಜೀವ ಇಂದು ನೋವನ್ನು ಹೇಳಿಕೊಳ್ಳಲಾಗದೆ, ಹೊರಗೂ ಹಾಕಲಾರದೆ ಮೂಕರೋದನದಲ್ಲಿದೆ. ಒಂದೇ ಒಂದು ಕ್ಷಣಕ್ಕೂ ನಿಮ್ಮ ಮನಸ್ಸಿಗೆ ಅಂದು ಅವರ ನೆನಪಾಗಲಿಲ್ಲವೇ…
ನಿಮ್ಮ ವಿರುದ್ಧದ ಆರೋಪಗಳು ಎಂಥಾ ಪ್ರಜ್ಞಾವಂತ ಸಮಾಜವೇ ಆಗಿದ್ರೂ ಕ್ಯಾಕರಿಸಿ ಮುಖಕ್ಕೆ ಉಗಿಯೋಥರದ್ದು ರೀ. ಹೋಗ್ಲಿ ನೀವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ 28 ದಿನಗಳಿಂದ ನೀವು ತಲೆಮರೆಸಿಕೊಂಡಿದ್ಯಾಕೆ. ಅಂದು ಹೇಡಿಯಂತೆ ಕಾರ್ಗತ್ತಲಲ್ಲಿ ಓಡಿಹೋಗಿದ್ದು ಯಾಕೆ? ಓಡಿ ಹೋಗಿಬಿಟ್ರೆ ಮಾಡಿದ ತಪ್ಪು ಮುಚ್ಚಿಹೋಗಿಬಿಡುತ್ತಾ..? ಹಾಗಂತ ನೀವೇನೂ ಒಲಿಂಪಿಕ್ಸ್‌ನಂಥಾ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಪರಮವೀರರಾ..?
ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು. ಆ ಅಸಹಾಯಕ ಜೀವಗಳಿಗೆ ನಿಜಕ್ಕೂ ನ್ಯಾಯ ಸಿಗಲೇಬೇಕು. ಇದು ಸಮಸ್ತ ಕರುನಾಡಿ ಒಕ್ಕೊರಲ ಆಗ್ರಹ.
ನೆನಪಿರಲಿ… ನೀವು ಇಂದು ಸಂಸದನಾಗಿ ನಿಲ್ಲುವಲ್ಲಿ ನಿಮ್ಮ ಕುಟುಂಬಕ್ಕಿರೋ ಆ ವರ್ಚಸ್ಸಿನ ಪಾಲೇ ಹೆಚ್ಚು. ಈ ರಾಜ್ಯದ ಮುಖ್ಯಮಂತ್ರಿಯಾಗಿ ದುಡಿದ ನಿಮ್ಮ ಚಿಕ್ಕಪ್ಪ ಇಂದು ಬಹಿರಂಗವಾಗಿ ಎಲ್ಲಿದ್ರೂ ಬಾರಪ್ಪಾ ಅನ್ನುವಂಥಾ ಅಸಹಾಯಕ ಸ್ಥಿತಿಯನ್ನು ನಿರ್ಮಿಸಿದವರು ನೀವೇ. ನಿಮ್ಮನ್ನ ಎತ್ತಿ, ಮುದ್ದಾಡಿ, ಭವ್ಯ ಭವಿಷ್ಯದ ಕನಸನ್ನು ಕನವರಿಸಿದ್ದ ನಿಮ್ಮ ತಂದೆಯು ನಿಮ್ಮಿಂದಾಗಿ ಜೈಲಿನ ಕತ್ತಲಕೋಣೆಯಲ್ಲಿ ಒಬ್ಬರೇ ಕೂತು ರೋದಿಸಿದ್ದು ನಿಮಗೆ ಗೊತ್ತಿಲ್ವಾ? ನಿಜಕ್ಕೂ ನಿಮ್ಮೊಳಗೊಬ್ಬ ಮಾನವೀಯ ಜೀವಿ ಇಲ್ಲವೇ ಇಲ್ವಾ? ಹೃದಯವೆನ್ನೋದೇ ಕಲ್ಲುಬಂಡೆಯಾಗಿದೆಯಾ? ಪಾಪಪ್ರಜ್ಞೆ ನಿಮ್ಮನ್ನ ಇನ್ನಿಲ್ಲದಂತೆ ಕಾಡ್ತಿಲ್ವಾ?
ನಿಮ್ಮ ತಾಯಿಯ ಮುಖದಲ್ಲಿದ್ದ ನಗು ನಿಮ್ಮಿಂದ ಬಾಡಿ ಹೋಗಿರೋ ಸತ್ಯದ ಅರಿವು ನಿಮಗಿಲ್ವಾ? ನಿಮ್ಮ ಸಹೋದರ ನಾಲ್ಕು ಜನರ ಮುಂದೆ ಮುಖ ಎತ್ತಿ ಮಾತನಾಡದಂಥಾ ಪರಿಸ್ಥಿತಿಯನ್ನು ನಿರ್ಮಿಸಿದ್ದು ನೀವೇ ಅಲ್ವಾ? ಅದೇನೇ ಇರ್ಲಿ. ಇವತ್ತು ನೀವು ಜರ್ಮನಿಯಲ್ಲಿದ್ದೀರೋ, ಇಲ್ಲ ಮತ್ತಿನ್ನೆಲ್ಲೋ ಪುಕ್ಕಲನಂತೆ ಅಡಗಿ ಕುಳಿತಿದ್ದೀರೋ ಅದು ನಿಮಗೆ ಗೊತ್ತು. ಒಂದೇ ಒಂದು ಪ್ರಶ್ನೆ, ನೀವು ದೇಶ ಬಿಟ್ಟು ಓಡಿಹೋಗಿದ್ದಾದ್ರೂ ಯಾಕೆ? ತಪ್ಪು ಮಾಡಿದ್ದೀರೋ, ಇಲ್ವೋ ಅನ್ನೋದನ್ನ ನಿಮ್ಮ ಮನಸಾಕ್ಷಿಯನ್ನೇ ಪ್ರಶ್ನಿಸಿಕೊಂಡು ಬಿಡಿ.
ನಿಮ್ಮ ವಿರುದ್ಧದ ಆರೋಪಗಳೆಲ್ಲ ಕಪೋಲಕಲ್ಪಿತ, ಎದುರಾಳಿಗಳ ಕುತಂತ್ರ, ಷಡ್ಯಂತ್ರವೇ ಅಂತಾ ಭಾವಿಸಿದ್ರೆ, ನೀವ್ಯಾಕೆ 28 ದಿನದಿಂದ ಕದ್ದು ಓಡ್ತಿದ್ದೀರಿ? ಭಾರತಕ್ಕೆ ಬಂದ್ರೆ ಕೇಸ್ ಹಾಕ್ತಾರೆ ಅಂತಾ ಭಯನಾ? ಪೊಲೀಸರು ವಿಚಾರಣೆ ಹೆಸರಲ್ಲಿ ಟಾರ್ಚರ್ ಕೊಡ್ತಾರೆ ಅಂತ ದಿಗಿಲಾ? ಜೈಲಿಗೆ ಹಾಕಿಬಿಡ್ತಾರೆ ಅಂತಾ ಕೈಕಾಲು ತಣಗಾಗ್ತಿವೆಯಾ? ಹಾಗಾದ್ರೆ, ಒಂದು ಕೆಲಸ ಮಾಡಿ. ಕೋರ್ಟ್ ಮುಂದೆ ಬಂದು ಶರಣಾಗಿ.
ಒಂದಲ್ಲ, ಎರಡಲ್ಲ, ಅದೆಷ್ಟು ಜನರು ನಿಮ್ಮಿಂದ ಇಂದು ಕಣ್ಣೀರು ಸುರಿಸ್ತಿದ್ದಾರೋ ಗೊತ್ತಿಲ್ಲ. ಅದೆಷ್ಟು ತಾಯಂದಿರು ನಿಮಗೆ ಹಿಡಿಶಾಪ ಹಾಕ್ತಿದ್ದಾರೋ ತಿಳಿದಿಲ್ಲ. ಸಮಸ್ತ ಹಾಸನವೇ ಇವತ್ತು ತಲೆತಗ್ಗಿಸಿ ನಿಂತಿದೆ ಅಂದ್ರೆ ಅದು ನಿಮ್ಮಿಂದಲೇ ಅನ್ನೋದನ್ನ ಮಾತ್ರ ಮರೆಯದಿರಿ. ಈ ಮಣ್ಣಿನ ಕಾನೂನು ನೊಂದವರಿಗೆ ನ್ಯಾಯದಾನ ಮಾಡಿಯೇ ತೀರುತ್ತದೆ. ಅದೆಷ್ಟು ದಿನ, ಅದೆಲ್ಲೇ ನೀವು ತಲೆಮರೆಸಿಕೊಂಡು ಸುತ್ತಿದ್ರೂ ಪ್ರತಿ ಆರಂಭಕ್ಕೂ ಅಂತ್ಯವಿರುತ್ತೆ. ಪಾಪದ ಕೊಡ ತುಂಬಿ ಬಂದಾಗ ಅದೆಂಥವನೇ ಆದ್ರೂ ತಲೆಬಾಗಲೇಬೇಕು.
ಸಮಸ್ತ ಕರುನಾಡಿನ ಪರವಾಗಿ
ವಿಸ್ತಾರ ನ್ಯೂಸ್ ತಂಡ
ಇದನ್ನೂ ಓದಿ: Prajwal Revanna Case: ಪಾಸ್‌ಪೋರ್ಟ್ ವಿಚಾರವಾಗಿ ಪ್ರಜ್ವಲ್‌ಗೆ ವಿದೇಶಾಂಗ ಸಚಿವಾಲಯ ನೋಟಿಸ್; ಶೀಘ್ರ ಬಂಧನ?