ಕಾರವಾರ: ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೊನೆಗೂ ಚುನಾವಣಾ (Karnataka Election 2023) ಅಖಾಡಕ್ಕೆ ಇಳಿದಿದ್ದಾರೆ. ಮಂಗಳವಾರದಿಂದ (ಏ. 4) ಕ್ಷೇತ್ರದಲ್ಲಿ ಸಂಚಾರವನ್ನು ಪ್ರಾರಂಭ ಮಾಡಿದ್ದಾರೆ. ಆದರೆ, ಅವರು ತಮ್ಮ ಸ್ಪರ್ಧೆ ಬಗ್ಗೆ ಗೌಪ್ಯತೆಯನ್ನು ಕಾಯ್ದುಕೊಂಡಿದ್ದು, ಬುಧವಾರ (ಏ. 5) ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚೈತ್ರಾ ಕೊಠಾರಕರ್ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ, ರಾಷ್ಟ್ರೀಯ ಪಕ್ಷವೊಂದನ್ನು ಸೇರಿ ಆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದು ಹೇಳಿಕೆ ನೀಡುತ್ತಾ ಬಂದಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಕೊನೆಗೆ ಪಕ್ಷೇತರ ಇಲ್ಲವೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಇದು ಅವರ ಹಿಂಬಾಲಕರಿಗೆ ಒಂದಷ್ಟು ಬಲ ತಂದಿತ್ತು. ಇದೇ ಏಪ್ರಿಲ್ 5 ರಂದು ತಮ್ಮ ನಿರ್ಧಾರವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚೈತ್ರಾ ಕೊಠಾರಕರ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರೊಂದಿಗೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Karnataka Elections : ಬಿಜೆಪಿ ನಾಯಕನ ಮನೆಗೆ ಜಿಎಸ್ಟಿ ದಾಳಿ; ಸೀರೆ, ಗಿಫ್ಟ್ ವಸ್ತುಗಳು ಪತ್ತೆ
ಈಗಾಗಲೇ ಕಾರವಾರ ಕ್ಷೇತ್ರಕ್ಕೆ ಸತೀಶ್ ಸೈಲ್ ಅವರನ್ನು ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಇಷ್ಟಾದರೂ ಟಿಕೆಟ್ ಆಸೆಯನ್ನು ಹೊಂದಿರುವ ಚೈತ್ರಾ ತಮಗೇ ಬಿ ಫಾರಂ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಟಿಕೆಟ್ ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆಮಾಡುವ ಎಚ್ಚರಿಕೆಯನ್ನೂ ಸಹ ಈಗಾಗಲೇ ನೀಡಿದ್ದಾರೆ. ಈ ಮಧ್ಯೆ ಅವರ ನಿವಾಸಕ್ಕೆ ಭೇಟಿ ನೀಡಿರುವ ಅಸ್ನೋಟಿಕರ್ ಚರ್ಚೆ ನಡೆಸಿದ್ದಾರೆ. ಹೀಗಾಗಿ ಅಸ್ನೋಟಿಕರ್ ನಡೆ ಏನೆಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಬೆಂಬಲಿಗ ಭೇಟಿಗೆ ಮುಂದಾಗಿರುವ ಆನಂದ್
ಒಂದು ಮೂಲಗಳ ಪ್ರಕಾರ ಬೆಂಬಲಿಗರು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರೆ ಕಣಕ್ಕೆ ಇಳಿಯಲು ಆನಂದ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಕ್ಷ ಸೇರ್ಪಡೆ ಮುನ್ನವೇ ಕಾರವಾರ-ಅಂಕೋಲಾ ತಾಲೂಕಿನಲ್ಲಿ ಮುಖಂಡರ ಮನೆಗಳಿಗೆ ಅಸ್ನೋಟಿಕರ್ ಭೇಟಿ ನೀಡಿತ್ತಿದ್ದು, ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇಲ್ಲಿ ವ್ಯಕ್ತವಾಗುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪಡೆದುಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.
ಈ ಮೂಲಕ ರಾಷ್ಟ್ರೀಯ ಪಕ್ಷವನ್ನು ಸೇರುವುದಾ? ಪಕ್ಷೇತರ ಅಥವಾ ಜೆಡಿಎಸ್‌ನಿಂದ ಕಣಕ್ಕೆ ಇಳಿಯುವುದಾ ಎಂಬ ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿರುವ ಅಸ್ನೋಟಿಕರ್ ತಾವು ಒಂದು ವೇಳೆ ಚುನಾವಣೆಗೆ ಸ್ಪರ್ಧೆ ಮಾಡಿದರೆ, ಎಷ್ಟು ಮತಗಳನ್ನು ಸೆಳೆಯಬಹುದು, ಪ್ರಚಾರ ಕಾರ್ಯತಂತ್ರ ಹೇಗಿರಬೇಕು? ಇದಕ್ಕೆ ಯಾರ ಯಾರ ಬೆಂಬಲ ಸಿಗುತ್ತದೆ? ಗೆಲುವು ಸಾಧ್ಯವಿದೆಯೇ ಎಂಬಿತ್ಯಾದಿಗಳ ಬಗ್ಗೆ ಸಾಧ್ಯಾ ಸಾಧ್ಯತೆ ಬಗ್ಗೆ ಲೆಕ್ಕಾಚಾರ ಹಾಕಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Inside Story: ನಕಲಿ ಅಭ್ಯರ್ಥಿ ಪಟ್ಟಿಗೆ ಬಿಜೆಪಿ ಸಭೆ ಗಲಿಬಿಲಿ: ಘಟಾನುಘಟಿಗಳಿಗೇ ಶಾಕ್ ನೀಡಿದ ಕಿಲಾಡಿಗಳು
ಸತೀಶ್ ಸೈಲ್‌ಗೆ ಬೆಂಬಲ?
ಇನ್ನೊಂದೆಡೆ ಕಾಂಗ್ರೆಸ್ ಸೇರಿ ಅಭ್ಯರ್ಥಿ, ಮಾಜಿ ಶಾಸಕ ಸತೀಶ್ ಸೈಲ್‌ಗೆ ಬೆಂಬಲ ವ್ಯಕ್ತಪಡಿಸಿದರೆ ಹೇಗೆ ಎಂಬ ಬಗ್ಗೆಯೂ ಆನಂದ್ ಚಿಂತಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಮಧ್ಯೆ ಸ್ಪರ್ಧೆ ಮಾಡಲೇಬೆಕು ಎಂದು ಬೆಂಬಲಿಗರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಪಕ್ಷೇತರವಾಗಿಯಾದರೂ ನಿಲ್ಲುವಂತೆ ಒತ್ತಾಯಿಸಿದ್ದರಿಂದ ಬುಧವಾರ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.