Site icon Vistara News

Anant Nag: ಬಿಜೆಪಿ ಮೂಲಕ ರಾಜಕೀಯ ರಿ ಎಂಟ್ರಿ ಮುಂದೂಡಿದ ಅನಂತ್‌ ನಾಗ್‌: ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು

Veteran actor Anant Nag to join BJP today

ಬೆಂಗಳೂರು: ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ನಟಡಿಸಿರುವ ಅನಂತ್‌ ನಾಗ್‌ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಿಂದ ದಿಢೀರನೆ ಹಿಂದೆ ಸರಿದಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆ ಆಗಬೇಕಿತ್ತಾದರೂ ಕಡೇ ಕ್ಷಣದಲ್ಲಿ ಗೈರಾಗಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರಾದ ಮುನಿರತ್ನ, ಡಾ. ಕೆ. ಸುಧಾಕರ್‌ ಸಮ್ಮುಖದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ರೇಣುಕಾ ಪ್ರಸಾದ್, ಕಾಂಗ್ರೆಸ್ ಕೆಪಿಸಿಸಿ ಕಾರ್ಯದರ್ಶಿ ತುಳಸಿರಾಮ್, ಸಪ್ತಗಿರಿ ಶಂಕರ್ ನಾಯ್ಕ್ ಹಾಗೂ ನೆಲಮಂಗಲ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉಮೇಶ್ ಹಾಗೂ ಅನೇಕ ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು.

ಈ ಹಿಂದೆ ಜನತಾ ಪರಿವಾರದಲ್ಲಿದ್ದ ಅನಂತ್‌ ನಾಗ್‌ ಇತ್ತೀಚೆಗೆ ಬಿಜೆಪಿ ತತ್ವ ಸಿದ್ಧಾಂತ ಹಾಗೂ ವಿಶೇಷವಾಗಿ ಮೋದಿ ಕುರಿತು ಹೊಗಳಿಕೆಯ ಮಾತನ್ನಾಡಿದ್ದರು. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಅನಂತ್‌ ನಾಗ್‌ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿದ್ದವು. ಆದರೆ ಸಂಜೆ ಕಾರ್ಯಕ್ರಮಕ್ಕೆ ಅನಂತ್‌ ನಾಗ್‌ ಆಗಮಿಸಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ನಾಯಕರೊಬ್ಬರು, ಮುಂದಿನ ವಾರ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

ಪ್ರಾರಂಭದಲ್ಲಿ ಮಾತನಾಡಿದ ಡಾ. ಕೆ. ಸುಧಾಕರ್‌, ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ ಭಾಗದಲ್ಲಿ ಈಗಾಗಲೇ ನಾವು ಗೆದ್ದಾಗಿದೆ. ಆತ್ಮವಿಶ್ವಾಸದಿಂದಲೇ ಹೇಳುತ್ತಿದ್ದೇವೆ, ಈ ಮೂರು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಇಂದು ಈ ಪಟ್ಟಿಗೆ ನೆಲಮಂಗಲವನ್ನೂ ಸೇರಿಸುತ್ತಿದ್ದೇವೆ. ಇಲ್ಲಿ ನಮ್ಮ ಗೆಲುವು ಖಚಿತ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಕಾಂಗ್ರೆಸ್ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದು 2023 ರ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರು.

ಸಚಿವ ಮುನಿರತ್ನ ಮಾಡತನಾಡಿ, ನಾವು ಹಿಂದೆ ತೆಗೆದುಕೊಂಡ ನಿರ್ಧಾರವನ್ನ ನೀವು ತಡವಾಗಿ ತೆಗೆದುಕೊಂಡಿದ್ದೀರಿ. ಆದರೂ ನಿಮಗೆ ಒಳ್ಳೆಯದಾಗಲಿದೆ. ನೆಮ್ಮದಿ ಸಂತೋಷವಾಗಿ ಇರಬೇಕಾದಲ್ಲಿ ಬಿಜೆಪಿಗೆ ಬರಬೇಕು. ಬೇಧ ಭಾವ ಇಲ್ಲದೆ ನೋಡಿಕೊಳ್ಳುತ್ತಾರೆ. ಇಂತಹ ಪ್ರೀತಿ, ಗೌರವ ಸಿಗುವುದು ಬಿಜೆಪಿಯಲ್ಲಿ ಮಾತ್ರ. ಸಣ್ಣ ಬೇಸರ, ಕಲ್ಮಷ ಇಲ್ಲದೆ ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಈಗಾಗಲೇ ಕಾಂಗ್ರೆಸ್ ಮುಖಂಡರು ಗೆಲುವಿನ ಅಂಕಿ ಸಂಖ್ಯೆಯ ಲೆಕ್ಕಾಚಾರದಲ್ಲಿ ಓಡಾಡುತ್ತಿದ್ದಾರೆ.

ಆದರೆ ಎಲ್ಲಾ ಭಾಗ್ಯ ಕೊಟ್ಟು ಐದು ವರ್ಷ ಅಧಿಕಾರ ನಡೆಸಿ ಬಂದಿದ್ದು 87 ಸ್ಥಾನ. ಸಮ್ಮಿಶ್ರ ಸರ್ಕಾರ ಮಾಡಿ ಸ್ವಯಂಕೃತ ಅಪರಾಧ ಮಾಡಿದರು. ಇದರಿಂದ 17 ಜನರನ್ನು ಕಳೆದುಕೊಂಡು 70 ಕ್ಕೆ ಬಂದಿದ್ದಾರೆ. ಈಗ ಎಲ್ಲಿಂದ ಸರ್ಕಾರ ಮಾಡಲಿದ್ದಾರೆ 60 ಸ್ಥಾನ ದಾಟಲ್ಲ. ಸರ್ಕಾರ ಮಾಡುವುದು ನಾವೇ. ಸೂರ್ಯ ಚಂದ್ರ ಇರುವಷ್ಟೇ ಈ ಮಾತು ಸತ್ಯ. ಮತ್ತೆ ನಮ್ಮದೇ ಸರ್ಕಾರ ಬರಲಿದೆ ಬಿಜೆಪಿಯವರೇ ಸಿಎಂ ಆಗಿರುತ್ತಾರೆ ಎಂದರು.

ನೆಲಮಂಗಲಕ್ಕೆ ಒಳ್ಳೆಯ ಶಾಸಕ ಬೇಕು‌, ನೀವು ಅಲೆಮಾರಿ ಜೀವನ ಮಾಡಬಾರದು. ನೀವೆಲ್ಲಾ ಸೇರಿ ನೆಲಮಂಗಲ ಗೆಲ್ಲಿಸಬೇಕು. ನಾನೇ ಪ್ರಚಾರಕ್ಕೆ ಬರ್ತೇನೆ. ಹೇಗೆ ಗೆಲ್ಲಿಸೋಕೆ ಆಗೋದಿಲ್ಲ ನೋಡೊಣ. ವಿರೋಧಿಗಳು ಎಷ್ಟೇ ಬಲಿಷ್ಠರಾಗಿರಿಲಿ, ನಾವು ಗೆದ್ದು ತೋರಿಸೋಣ. ಬಿಜೆಪಿ ಕವಚ ಕುಂಡಲ ಇದ್ದ ಹಾಗೆ ನಿಮಗೆ. ನಿಮ್ಮನ್ನು ಯಾರು ಟಚ್ ಮಾಡೋಕು ಆಗೋದಿಲ್ಲ. ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂದು ನೆಲಮಂಗಲ ಕಾರ್ಯಕರ್ತರಿಗೆ ಭರವಸೆ ನೀಡುತ್ತಿದ್ದೇನೆ ಎಂದರು.

ಇದನ್ನೂ ಓದಿ: Anant Nag: ಹಿರಿಯ ನಟ ಅನಂತ್‌ ನಾಗ್‌ ಇಂದು ಬಿಜೆಪಿ ಸೇರ್ಪಡೆ

ಪಕ್ಷ ಸೇರಿದ ನಂತರ ಮಾತನಾಡಿದ ರೇಣುಕಾಪ್ರಸಾದ್, ನಾವು ಕಾಂಗ್ರೆಸ್ ನಲ್ಲಿ ಪಿಲ್ಲರ್ ಗಳಂತೆ ಕೆಲಸ ಮಾಡಿದ್ದೆವು. ಈಗ ಮನನೊಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಗದ್ಗದಿತರಾದರು. ಈ ವೇಳೆ ಬಂದ ಮುನಿರತ್ನ, ಇದು ಆನಂದಭಾಷ್ಪ ಎಂದು ಪರಿಸ್ಥಿತಿ ನಿಭಾಯಿಸಿದರು.

ನಂತರ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ಕಾಂಗ್ರೆಸ್ ವಿಚಾರಧಾರೆಯಲ್ಲಿ ಕೆಲಸ ಮಾಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಬೇಸರಗೊಂಡು ಇಂದು ಬಿಜೆಪಿ ಸೇರ್ಪಡೆಗೊಂಡ ಎಲ್ಲರಿಗೂ ಸ್ವಾಗತ. ಒಂದು ಪಾರ್ಟಿಯಲ್ಲಿ ಹತ್ತಾರು ವರ್ಷ ಇದ್ದು ಬೇರೆ ಪಕ್ಷ ಸೇರಿದಾಗ ಆತಂಕ ಇರುತ್ತದೆ. ಆದ್ರೆ ನೀವು ಇಲ್ಲಿ ಸುಧಾಕರ್ ಮುನಿರತ್ನ ಎಲ್ಲರನ್ನು ನೋಡಿದಾಗ ಗೊತ್ತಾಗುತ್ತದೆ. ಅವರು ಇಲ್ಲಿ ಎಷ್ಟು ಖುಷಿಯಾಗಿದ್ದಾರೆ ನೋಡಿ. ಇನ್ನೊಂದು ವರ್ಷದ ನಂತರ ನಿಮಗೂ ಆ ಅನುಭವ ಆಗಲಿದೆ. ಕಾಂಗ್ರೆಸ್ ನಲ್ಲಿ ಕುಟುಂಬ ಆಧಾರಿತ , ನಾಯಕ ಆಧಾರಿತ. ಆದ್ರೆ ನಮಲ್ಲಿ ಅಂತಹ ರಾಜಕೀಯ ಇಲ್ಲ. ಕಾರ್ಯಕರ್ತರಿದ ಬಿಜೆಪಿ ಇರುವುದು. ನಮ್ಮಲ್ಲಿ ಎಲ್ಲರೂ ಒಂದೇ. ಹೊರಗಿನವರು ಒಳಗಿನವರು ಅಂತ ಇಲ್ಲ. ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ಪೈಟ್ ನಡೆಯುತ್ತಿದೆ. ಮುಂದೇ ನಾವು ಅಧಿಕಾರಕ್ಕೆ ಬರ್ತೀವಿ, ನಿಮ್ಮನ್ನ ಪಕ್ಷ ಯಾವತ್ತೂ ಕೈ ಬಿಡಲ್ಲ ಎಂದು ಭರವಸೆ ನೀಡಿದರು.

Exit mobile version