Site icon Vistara News

KR Market Flyover | ಪ್ರಚಾರದ ಗೀಳಿಗೆ ಬಿದ್ದು ಹುಚ್ಚಾಟ ಮೆರೆದ ಆ್ಯಂಕರ್ ಅರುಣ್‌, ಅವನಿಗೆ Attention seeking syndrome!

KR Market Flyover

ಬೆಂಗಳೂರು: ಕೆ.ಆರ್‌ ಮಾರ್ಕೆಟ್‌ ಬಳಿಯ ಫ್ಲೈ ಓವರ್‌ (KR Market Flyover) ಮೇಲೆ ನಿಂತು ಕರೆನ್ಸಿ ನೋಟುಗಳನ್ನು ಎಸೆದು ಸುದ್ದಿಯಾದವನು ಆ್ಯಂಕರ್ ಅರುಣ್‌! ಹೊರನೋಟಕ್ಕೆ ಅವನು ಒಬ್ಬ ಹುಚ್ಚನಂತೆ ಎಲ್ಲರಿಗೂ ಕಂಡಿರಬಹುದಾದರೂ ಅವನು ಅತಿಬುದ್ಧಿವಂತ. ನೋಡುವವರಿಗೆ ಅವನು ಕಂತೆ ಕಂತೆ ನೋಟುಗಳನ್ನು ಎಸೆಯುತ್ತಿದ್ದಾನೆ ಎಂದು ಅನಿಸುತ್ತದೆಯಾದರೂ ಅವನು ಎಸೆದಿದ್ದು ಬಹುತೇಕ ೧೦ ರೂ. ನೋಟುಗಳನ್ನು. ಒಟ್ಟಾರೆಯಾಗಿ ಅವನು ಎಸೆದ ನೋಟುಗಳ ಒಟ್ಟು ಮೌಲ್ಯ ೪,೫೦೦! ತನ್ನ ಈ ಹುಚ್ಚಾಟದಿಂದ ಇವತ್ತು ಇಡೀ ದಿನ ಸುದ್ದಿಯ ಕೇಂದ್ರಬಿಂದುವಾಗಿದ್ದಾನೆ. ನಿಜವೆಂದರೆ ಅವನಿಗೆ ಬೇಕಾಗಿದ್ದು ಕೂಡಾ ಅದುವೆ!

ಮೂಲತಃ ಬಸವೇಶ್ವರ ನಗರ ನಿವಾಸಿಯಾಗಿರುವ ಅರುಣ್‌ ಒಬ್ಬ ವೃತ್ತಿಪರ ಕಾರ್ಯಕ್ರಮ ನಿರೂಪಕ. ಸಾರ್ವಜನಿಕ ಕಾರ್ಯಕ್ರಮಗಳನ್ನು ಸ್ವಲ್ಪ ಹುಚ್ಚಾಟಗಳ ಹೊರತಾಗಿಯೂ ಆಕರ್ಷಕವಾಗಿ ನಿರೂಪಿಸುತ್ತಾರೆ. ಚೆನ್ನಾಗಿ ಮಾತನಾಡುತ್ತಾನಾದ್ದರಿಂದ ತಾನೊಬ್ಬ ಮೋಟಿವೇಷನಲ್‌ ಸ್ಪೀಕರ್‌ ಎಂದು ಕರೆಸಿಕೊಳ್ಳುತ್ತಾನೆ.

ಇಷ್ಟೆಲ್ಲದರ ನಡುವೆ ಒಂದೆರಡು ಇವೆಂಟ್‌ ಮ್ಯಾನೇಜ್ಮೆಂಟ್‌, ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ ಸಂಸ್ಥೆಗಳನ್ನು ಕಟ್ಟಿ ಒಂದಷ್ಟು ಜನರನ್ನು ನೇಮಿಸಿಕೊಂಡು ಸಾಕಷ್ಟು ಲಾಭವನ್ನೂ ಮಾಡಿಕೊಂಡಿದ್ದಾರೆ. ಆತ ವಿ ಡಾಟ್‌ ೯ ಇವೆಂಟ್ಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನು ನಡೆಸುತ್ತಿದ್ದಾನೆ. ಇದರಲ್ಲಿ ರಾಜ್ಯದ ಹಲವು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾನೆ. ಹಲವು ಕಂಪನಿಗಳೂ ಅವನ ಆಯೋಜನೆಯಲ್ಲಿ ಕಾರ್ಯಕ್ರಮ ಮಾಡಿವೆ. ಬೆಂಗಳೂರಿನಲ್ಲಿ ಜಿಟಿ ಬಿಸಿನೆಸ್‌ ಎಂಬ ಸಂಸ್ಥೆಯನ್ನು ೨೦೧೫ರಲ್ಲಿ ಆರಂಭಿಸಿದ್ದ ಆತ ಅದರ ಮೂಲಕ ಬಿಸಿನೆಸ್‌ ಕಂಪನಿಗಳನ್ನು ಪ್ರಮೋಟ್‌ ಮಾಡುವ ಕೆಲಸವನ್ನು ಮಾಡುತ್ತಿದ್ದಾನೆ.

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ಹಾಕುವುದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತನ್ನನ್ನು ವೈಭವೀಕರಿಸಿಕೊಳ್ಳುವುದು ಅವನ ಖಯಾಲಿ. ಇಷ್ಟೆಲ್ಲದರ ನಡುವೆ ಆತನಿಗೆ ಇದ್ದ ದೊಡ್ಡ ಆಸೆಯೆಂದರೆ ಸದಾ ಕಾಲ ತಾನು ಸುದ್ದಿಯಲ್ಲಿರಬೇಕು, ಲೈಮ್‌ಲೈಟ್‌ನಲ್ಲಿರಬೇಕು ಎನ್ನುವುದು.

ಆದರೆ, ಆತನ ವಿಡಿಯೊಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಿಗುತ್ತಿದ್ದ ಮನ್ನಣೆ ಅಷ್ಟಕ್ಕಷ್ಟೆ. ಲೈಕ್‌ಗಳು ನೂರರ ಲೆಕ್ಕದಲ್ಲಷ್ಟೇ ಇರುತ್ತಿದ್ದವು. ಆದರೆ, ಬೇರೆಯವರ ವಿಡಿಯೊಗಳು ಲಕ್ಷಾಂತರ ವ್ಯೂಸ್‌ ಪಡೆಯುತ್ತಿರುವಾಗ ತನಗೇಕಿಲ್ಲ ಎನ್ನುವ ನೋವು ಅವನನ್ನು ಕಾಡುತ್ತಿತ್ತು.

ಇವೆಂಟ್‌ ಮ್ಯಾನೇಜ್‌ಜ್ಮೆಂಟ್‌ ಜತೆಗೆ ಸೋಷಿಯಲ್‌ ಮೀಡಿಯಾದ ಮೂಲಕವೂ ದುಡ್ಡು ಮಾಡುವ ಅವನ ಕನಸಿಗೆ ಇಂಬು ಸಿಗದೆ ಇದ್ದಾಗ ಅವನು ಹುಚ್ಚಾಟಕ್ಕೆ ಮುಂದಾಗಿದ್ದ ಎಂದು ಪೊಲೀಸರಲ್ಲಿ ಆತನೇ ಬಾಯಿ ಬಿಟ್ಟಿದ್ದಾನೆ. ಇದೊಂದು ಸಣ್ಣ ಟ್ರಿಕ್‌ ಮಾಡಿದರೆ ಇಡೀ ಜಗತ್ತು ತನ್ನತ್ತ ತಿರುಗಿ ನೋಡುತ್ತದೆ, ತಾನು ಫೇಮಸ್‌ ಆಗುತ್ತೇನೆ, ಮುಂದೆ ಇದು ಫಾಲೋವರ್ಸ್‌, ವ್ಯೂಸ್‌ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಅವನ ಲೆಕ್ಕಾಚಾರ.

ಹೀಗಾಗಿ ತನ್ನ ಯೂಟ್ಯೂಬ್‌ಗೆ ಹೆಚ್ಚು ಹೆಚ್ಚು ಸಬ್‌ಸ್ಕ್ರೈಬ್‌ ಮಾಡಿಸಿಕೊಳ್ಳಲು, ಫಾಲೋವರ್ಸ್‌ ಪಡೆಯಲು ಮಾಡಿದ ಅಗ್ಗದ ತಂತ್ರವೇ ಈ ಹಣ ಎಸೆಯುವುದು. ಈ ರೀತಿ ಹಣ ಎಸೆಯುವುದರಿಂದ ಯಾವುದೇ ದೊಡ್ಡ ಶಿಕ್ಷೆ ಆಗುವುದಿಲ್ಲ ಎನ್ನುವುದು ಕೂಡಾ ಅವನಿಗೆ ಗೊತ್ತಿತ್ತು. ಕೇವಲ ೩೦೦ ದಂಡ, ಅದನ್ನು ಕಟ್ಟದಿದ್ದರೆ ಒಂದು ತಿಂಗಳ ಸಜೆ ಇಷ್ಟೇ ಈ ಅಪರಾಧಕ್ಕಿರುವ ಗರಿಷ್ಠ ದಂಡನೆ. ಐಪಿಸಿ ಸೆಕ್ಷನ್‌ ಪ್ರಕಾರ, ಇದು ಸಾರ್ವಜನಿಕ ನೆಮ್ಮದಿ ಹಾಳುವ ಕೇಸೇ ಹೊರತು, ಬಂಧನಾರ್ಹ, ಶಿಕ್ಷಾರ್ಹ ಅಪರಾಧವೇನೂ ಅಲ್ಲ. ಹೀಗಾಗಿ ಇದೇ ತಂತ್ರವನ್ನು ಅವನು ಬಳಸಿಕೊಂಡಿದ್ದಾನೆ.

ಏನಿದು ಅವನ ಗಡಿಯಾರ ಟ್ರಿಕ್!?
ಫ್ಲೈ ಓವರ್‌ ಮೇಲೆ ಬಂದು ಹಣವನ್ನು ಎಸೆದ ಹೊತ್ತಿನಲ್ಲಿ ಅವನೊಂದು ಗಡಿಯಾರವನ್ನು ನೇತು ಹಾಕಿಕೊಂಡಿದ್ದ. ಇದು ಕೂಡಾ ಆತನ ಪ್ರಚಾರದ ತಂತ್ರ ಎಂದೇ ಭಾವಿಸಲಾಗಿದೆ. ಕೇಳಿದ ಪೊಲೀಸರಿಗೆ ಆತ ಗುಡ್‌ ಟೈಮ್‌ ಬರುತ್ತದೆ ಎಂದು ಭಾವಿಸಿದ್ದಾಗಿ ಹೇಳಿದ್ದಾನೆ. ಗುಡ್‌ ಟೈಮ್‌ ಎನ್ನುವುದು ಆತನ ಸ್ಥಾಪಿಸಿರುವ ಜಿಟಿ ಬಿಸಿನೆಸ್‌ ಸಂಸ್ಥೆಯ ಹೃಸ್ವರೂಪ. ಆತ ಹಿಂದೊಮ್ಮೆ ತನ್ನ ಫೇಸ್‌ ಬುಕ್‌ನಲ್ಲಿ ಟೈಮ್‌ ಈಸ್‌ ಗುರು ಎಂದು ಹೇಳಿಕೊಂಡಿದ್ದಾನೆ.

ಮಾತೆತ್ತಿದರೆ ವೇದಾಂತ ಮಾತನಾಡುವ ಆತ ಈಗ ಹಣ ಎಸೆದ ವಿಷಯಕ್ಕೆ ಬಂದರೂ ಜನರ್ಯಾರು ತಾನು ಕಟ್ಟಿಕೊಂಡಿರುವ ಗಡಿಯಾರವನ್ನು ನೋಡಿಲ್ಲ, ಎಸೆದ ಹಣವನ್ನಷ್ಟೇ ನೋಡಿದ್ದಾರೆ. ಜನರಿಗೆ ಸಮಯ ಮುಖ್ಯವಾಗಿಲ್ಲ, ಹಣವೇ ಮುಖ್ಯ ಎಂದೆಲ್ಲ ಕಥೆ ಹೊಡೆಯುವ ಸಾಧ್ಯತೆಯೂ ಇದೆ.

Attention seeking syndrome
ಅರುಣ್‌ನಂಥವರ ಇಂಥ ಹುಚ್ಚಾಟಗಳಿಗೆ ಮೂಲ ಕಾರಣವಾಗಿರುವುದು, ಅಟೆನ್ಶನ್‌ ಸೀಕಿಂಗ್‌ ಸಿಂಡ್ರೋಮ್‌ ಎಂಬ ಮಾನಸಿಕ ಕಾಯಿಲೆ. ಇದಕ್ಕೆ ಹಿಸ್ಟ್ರಿಯಾನಿಕ್‌ ಪರ್ಸನಾಲಿಟಿ ಡಿಸಾರ್ಡರ್‌ (Histrionic personality disorder-HPD) ಎಂದು ಕೂಡಾ ಕರೆಯುತ್ತಾರೆ. ತಾವಿರುವ ಪರಿಸರದಲ್ಲಿ, ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಎಲ್ಲರ ಗಮನ ಸೆಳೆಯಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ ಇವರು. ಎಲ್ಲರೂ ಹೊಗಳುತ್ತಿದ್ದರೆ, ಅವರ ಬಗ್ಗೆ ಮಾತನಾಡುತ್ತಿದ್ದರೆ ಖುಷಿಯಾಗಿರುವ ಇವರು ತಮ್ಮನ್ನು ನೆಗ್ಲೆಕ್ಟ್‌ ಮಾಡುತ್ತಿದ್ದಾರೆ, ಮಾತನಾಡುತ್ತಿಲ್ಲ ಎಂದೆಲ್ಲ ಅನಿಸಿದಾಗ ಒಂಥರಾ ಹುಚ್ಚರಾಗಬಿಡುತ್ತಾರೆ.

ಹೇಗಾದರೂ ಮಾಡಿ ಜನರ ಗಮನ ಸೆಳೆಯಬೇಕು ಎಂಬ ಕಾರಣಕ್ಕಾಗಿ ಏನೇನೋ ಕಿತಾಪತಿ ಮಾಡುವುದು, ವಿಚಿತ್ರವಾದ ದಿರಸು ಧರಿಸುವುದು, ಜೋರಾಗಿ ಮಾತನಾಡುವುದು, ದಾರಿಯಲ್ಲಿ ಹೋಗುವವರನ್ನು ಕರೆ ಕರೆದು ಮಾತನಾಡುವುದು, ಯಾರೂ ಸ್ಪಂದಿಸದಿದ್ದಾಗ ಸಣ್ಣಗೆ ಅಳುವುದು, ಜಗಳ ಮಾಡುವುದು ಮೊದಲಾದ ಗುಣಲಕ್ಷಣಗಳನ್ನು ಈ ಸಮಸ್ಯೆ ಹೊಂದಿದೆ.

ಹಿಂದೆ ವೈಯಕ್ತಿಕ ನೆಲೆಯಲ್ಲಿ ಮಾತನಾಡಿಸಲ್ಲ, ನಿರ್ಲಕ್ಷ್ಯ ವಹಿಸುತ್ತಾರೆ ಎಂಬಂತೆ ಆಪಾದನೆಗಳು ಈಗ ಸೋಷಿಯಲ್‌ ಮೀಡಿಯಾ ಯುಗದಲ್ಲಿ ಲೈಕ್‌, ಕಮೆಂಟ್‌, ಶೇರ್‌ ರೂಪವನ್ನು ಪಡೆದಿವೆ. ತನ್ನ ವಿಡಿಯೊಗಳನ್ನು ಹೆಚ್ಚು ಜನ ನೋಡದಿದ್ದರೆ, ಕಮೆಂಟ್‌ ಮಾಡದಿದ್ದರೆ, ಬರಹಗಳನ್ನು ಲೈಕ್‌ ಮಾಡದೆ ಹೋದರೆ ಇಂಥವರಿಗೆ ತಳಮಳ ಶುರುವಾಗುತ್ತದೆ. ಇಂಥ ಹೊತ್ತಿನಲ್ಲಿ ಜನರನ್ನು ತನ್ನತ್ತ ಸೆಳೆಯಲು ಬೇರೆ ಬೇರೆ ದಾರಿಯನ್ನು ಹುಡುಕುತ್ತಾರೆ.

ಅರುಣ್‌ ಕೂಡಾ ಮಾಡಿದ್ದು ಇಂಥಹುದೇ ಚೀಪ್‌ ಟ್ರಿಕ್ಕನ್ನು. ಅವನು ಒಂಟಿಯಾಗಿ ಬಂದಿಲ್ಲ. ಕ್ಯಾಮೆರಾ ವ್ಯವಸ್ಥೆಗಳೂ ಜತೆಗಿದ್ದವು. ಹಣ ಎಸೆಯುವ ದೃಶ್ಯಗಳನ್ನು ಆತನೇ ಹಂಚಿಕೊಂಡಿದ್ದಾನೆ. ಅನ್ನುವಲ್ಲಿಗೆ ಇದೆಲ್ಲ ಪ್ರಚಾರದ ಗೀಳಿನಿಂದ ಮಾಡಿದ ಕೃತ್ಯ ಎನ್ನುವುದು ಸ್ಪಷ್ಟ.

ಸೋಷಿಯಲ್‌ ಮೀಡಿಯಾದ ಈ ಕಾಲದಲ್ಲಿ ಈಗಾಗಲೇ ಹುಚ್ಚಾಟಗಳು ಮೇರೆ ಮೀರಿವೆ. ಇನ್ನು ಮುಂದೆ ಇನ್ನಷ್ಟು ಅಪಾಯಕಾರಿಯಾದ ತಂತ್ರಗಳನ್ನು ಮಾಡಬಹುದು. ಹೀಗಾಗಿ ಪೊಲೀಸ್‌ ಇಲಾಖೆ ಕಠಿಣ ಎಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಕೇವಲ ೩೦೦ ರೂ. ದಂಡಕ್ಕೆ ಈ ವ್ಯಕ್ತಿಗಳೆಲ್ಲ ಬಗ್ಗುವುದಿಲ್ಲ. ಅದನ್ನೂ ಕಟ್ಟದೆ ಮತ್ತಷ್ಟು ಸುದ್ದಿಗೆ, ಪ್ರಚಾರಕ್ಕೆ ಹವಣಿಸುತ್ತವೆ.

ಇದನ್ನೂ ಓದಿ | KR Market Flyover: ನೋಟು ಎಸೆದವನಿಗೆ ಪೊಲೀಸ್‌ ನೋಟಿಸ್‌; ಇಷ್ಟೆಲ್ಲ ಮಾಡಿದ್ದಕ್ಕೆ ನೂರೇ ರೂಪಾಯಿ ದಂಡ!

Exit mobile version