Site icon Vistara News

Toilet Cleaning: ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನಿಂಗ್; ಅಂದ್ರಹಳ್ಳಿ ಶಾಲೆ ಮುಖ್ಯಶಿಕ್ಷಕಿಗೆ ನ್ಯಾಯಾಂಗ ಬಂಧನ

Andrahalli school Headmistress

ಬೆಂಗಳೂರು: ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣದಲ್ಲಿ (Toilet Cleaning) ಅಂದ್ರಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮೀದೇವಮ್ಮ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಶುಕ್ರವಾರ ಅಮಾನತು ಮಾಡಲಾಗಿತ್ತು.

ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಆರೋಪದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್‌ ವಿಚಾರಣೆ ನಡೆಸಿ‌ ಮುಖ್ಯಶಿಕ್ಷಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದೆ.

ಬಂಧನಕ್ಕೂ ಮೊದಲು ಮಾತನಾಡಿದ್ದ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರು, ನಾನು ಈ ಶಾಲೆಯಲ್ಲಿ ಇರಬಾರದೆಂದು ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ವಿದ್ಯಾರ್ಥಿಗಳಿಂದ ನಾನು ಟಾಯ್ಲೆಟ್ ಕ್ಲೀನ್ ಮಾಡಿಸಿಲ್ಲ. ನಾನು ರಜೆಯ ಮೇಲೆ ಹೋದಾಗ ಕ್ಲೀನ್ ಮಾಡಿಸಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ | ‌Self Harming : ಒಂದೇ ಕಂತು ಬಾಕಿ ಇಟ್ಟಿದ್ದಕ್ಕೆ ಮಹಿಳೆ ಪ್ರಾಣವನ್ನೇ ಬಲಿ ಪಡೆದ ಫೈನಾನ್ಸ್‌ ಮಾಫಿಯಾ

ಏನಿದು ಪ್ರಕರಣ?

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಸ್ವಚ್ಛ ಮಾಡಿಸಿದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿತ್ತು, ಈ ಶಾಲೆಯಲ್ಲಿ ಒಟ್ಟು 600 ಜನ ಮಕ್ಕಳಿದ್ದಾರೆ. ಅಲ್ಲದೆ, ಇಲ್ಲಿ ಮಕ್ಕಳೇ ಶೌಚಾಲಯವನ್ನು ಕ್ಲೀನ್ ಮಾಡಬೇಕು. ಜತೆಗೆ ಶಿಕ್ಷಕರು ಊಟ ಮಾಡುವ ತಟ್ಟೆ ಕೂಡ ತೊಳೆಯಬೇಕು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದರು.

ಮಕ್ಕಳಿಂದ ಶೌಚಾಲಯ ಸ್ವಚ್ಛತೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ವಿವಿಧೆಡೆ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣಗಳು (Toilet Cleaning) ಬೆಳಕಿಗೆ ಬರುತ್ತಿವೆ. ಕೋಲಾರದ ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲಾ ಮಕ್ಕಳಿಂದ ಮಲ ಗುಂಡಿ ಸ್ವಚ್ಛತೆ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನ ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿರುವುದು ಕಂಡುಬಂದಿದೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಶಾಲೆಯ ಶೌಚಾಲಯಗಳನ್ನು ಶುಚಿಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವುದು ಅತ್ಯಂತ ಹೀನ ಕೃತ್ಯ. ಇತ್ತೀಚೆಗೆ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯ ಇಲ್ಲ. ಈಗಾಗಲೇ ವರದಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಂಡಿದ್ದಾರೆ. ಇಂತಹ ಕೃತ್ಯಗಳು ಬೇರೆ ಶಾಲೆಗಳಲ್ಲಿ ನಡೆಯುತ್ತಿದ್ದರೆ ಅವುಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದೇನೆ. ಶಾಲೆ-ಕಾಲೇಜುಗಳ ಹಾಸ್ಟೆಲ್‌ಗಳಲ್ಲಿಯೂ ಈ ಬಗ್ಗೆ ನಿಗಾವಹಿಸುವಂತೆ ಸಮಾಜ ಕಲ್ಯಾಣ ಸಚಿವರಿಗೂ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Hijab Row: ಹಿಜಾಬ್‌ ನಿಷೇಧ ವಾಪಸ್‌ ಮಾಡಿಲ್ಲ; ಉಲ್ಟಾ ಹೊಡೆದ ಸಿಎಂ!

ಪ್ರತಿಯೊಂದು ಶಾಲೆಯಲ್ಲಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರಬೇಕು ಮತ್ತು ಅವುಗಳನ್ನು ಪ್ರತಿದಿನ ಶುಚಿಗೊಳಿಸಲು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಈ ಬಗ್ಗೆ ಒಂದು ಸಮೀಕ್ಷೆ ನಡೆಸಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ವರದಿ ತರಿಸುವಂತೆ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

Exit mobile version