ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ (Anekal Shootout) ಉಪವಿಭಾಗದ ಪೊಲೀಸರು, ಇಬ್ಬರು ಅಪರಾಧಿಗಳಿಗೆ ತುಪಾಕಿ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಇಬ್ಬರು ಆರೋಪಿಗಳಿಗೆ ಗುಂಡಿಟ್ಟು ಬಂಧಿಸಲಾಗಿದೆ.
ವರುಣ್ ಅಲಿಯಾಸ್ ಕೆಂಚ ಹಾಗೂ ಅಜಯ್ ಅಲಿಯಾಸ್ ಮೆಂಟಲ್ ಬಂಧಿತ ಆರೋಪಿಗಳು. ಇವರಲ್ಲಿ ಆರೋಪಿ ವರುಣ್, ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆನೇಕಲ್ ಠಾಣೆ ಪೊಲೀಸ್ ಪೇದೆ ರಂಗನಾಥ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈತನ ಕಾಲಿಗೆ ಜಿಗಣಿ ಸಮೀಪದ ಕಲ್ಲುಬಾಳು ಬಳಿ ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಚಂದ್ರಪ್ಪ ಗುಂಡು ಹೊಡೆದು ಬಂಧಿಸಿದ್ದಾರೆ.
ಮನೆಯೊಂದರಲ್ಲಿ ಆರೋಪಿ ವರುಣ್ ಅವಿತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬಂಧಿಸಲು ಮುಂದಾದಾಗ ಪೊಲೀಸ್ ಕಾನ್ಸ್‌ಟೆಬಲ್ ಶಂಕರ್ ಮೇಲೆ ಆರೋಪಿ ವರುಣ್ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಚಂದ್ರಪ್ಪ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಕಿಶೋರ್ ಎಂಬ ಮತ್ತೊಬ್ಬ ಆರೋಪಿಯನ್ನೂ ಬಂಧಿಸಲಾಗಿದೆ.
ಇದನ್ನೂ ಓದಿ | Road Accident | ಸಿಂಧನೂರಿನಲ್ಲಿ ಭೀಕರ ರಸ್ತೆ ಅಪಘಾತ; ಟಿಪ್ಪರ್ ಚಕ್ರದಡಿ ಸಿಲುಕಿ ಬೈಕ್ ಸವಾರರಿಬ್ಬರ ಸಾವು
ಮತ್ತೊಂದು ಪ್ರಕರಣದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಬನ್ನೇರುಘಟ್ಟ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡ್ನ್ಯಾಪ್ ಮತ್ತು ರಾಬರಿ ಮಾಡಿ ಜನಸಾಮಾನ್ಯರಿಗೆ ಆತಂಕ ಮೂಡಿಸಿ, ಪೊಲೀಸರಿಗೆ ತಲೆ ನೋವಾಗಿದ್ದ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ ಮತ್ತು ತಂಡವನ್ನು ಜಿಗಣಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಹಾವಳಿ ಕೃಷ್ಣನ ಸಹಚರ ಅಜಯ್ ಅಲಿಯಾಸ್ ಮೆಂಟಲ್, ಹಾರಗದ್ದೆ ಸಮೀಪದ ನಾಯನಹಳ್ಳಿ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲು ಮುಂದಾದ ಜಿಗಣಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಕ್ರೈಮ್ ಸಿಬ್ಬಂದಿ ಮಹೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕೂಡಲೇ ಇನ್ಸ್‌ಪೆಕ್ಟರ್ ಸುದರ್ಶನ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ಜಗ್ಗದಿದ್ದಾಗ ಅಜಯ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಈಗಾಗಲೇ ಕಳ್ಳಕೃಷ್ಣ ಸೇರಿದಂತೆ ನಾಲ್ವರು ಸಹಚರರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.
ಇದನ್ನೂ ಓದಿ | Lovers Suicide | ಪ್ರೀತಿಗೆ ಕುಟುಂಬಸ್ಥರ ಅಡ್ಡಿ; ರೈಲು ಹಳಿ ಮೇಲೆ ಕೈಕೈ ಹಿಡಿದು ಮಲಗಿ ಪ್ರೇಮಿಗಳಿಬ್ಬರ ಆತ್ಮಹತ್ಯೆ