ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ರಾಜಧಾನಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದ್ದ ಅಂಗನವಾಡಿ ಕಾರ್ಯಕರ್ತರು ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾಗಿರುವ ನಿರ್ಧಾರವನ್ನು ಸಂಜೆಯವರೆಗೆ ಮುಂದೂಡಿದ್ದಾರೆ. ಸರ್ಕಾರ ಏನು ಮಾಡಲಿದೆ ಎಂಬ ಕುತೂಹಲ ವ್ಯಕ್ತವಾಗಿದೆ.
ನಮ್ಮ ಹೋರಾಟದ ಕೂಗು ಸರ್ಕಾರದ ಕಿವಿಗೆ ಬಿದ್ದಿಲ್ಲ. ಬೇಡಿಕೆಗಳನ್ನು ಈಡೇರಿಸಿದ ಸರ್ಕಾರವನ್ನು ವಿರೋಧಿಸಿ ಇಂದು ಸಿಎಂ ಮನೆಗೆ ಮುತ್ತಿಗೆಗೆ ಮುಂದಾಗಿದ್ದೆವು. ಆದರೆ ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡುತ್ತೇವೆ ಎಂದು ಸಿಎಂ ಕಚೇರಿಯಿಂದ ಕರೆ ಮಾಡಿದ್ದು, ಅವರ ನಿರ್ಣಯವೇನು ಎಂದು ಸಂಜೆಯವರೆಗೆ ಕಾದು ನೋಡಲು ನಿರ್ಧರಿಸಿದ್ದೇವೆ. ಅದನ್ನನುಸರಿಸಿ ಹೋರಾಟದ ರೂಪುರೇಶೆಗಳನ್ನು ಮಾಡಿಕೊಳ್ಳಲಿದ್ದೇವೆ ಎಂದು ಕಾರ್ಯಕರ್ತೆಯರು ಹೇಳಿದ್ದಾರೆ.
ಇದನ್ನೂ ಓದಿ: Anganawadi Workers: ನಾ ಕೊಡೆ ನೀ ಬಿಡೆ ಪರಿಸ್ಥಿತಿ; 7ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ
ಬೇಡಿಕೆಗಳ ಈಡೇರಿಕೆಗೆ ಆದೇಶ ಹೊರಬೀಳದಿದ್ದರೆ ಸಿಎಂ ಮನೆ ಮುತ್ತಿಗೆ ಫಿಕ್ಸ್ ಎಂದು ಅಂಗನವಾಡಿ ಕಾರ್ಯಕರ್ತೆಯರ ಮುಖಂಡರಾಗಿರುವ ವರಲಕ್ಷ್ಮೀ ಕರೆ ಕೊಟ್ಟಿದ್ದರು. ಲಾಠಿಚಾರ್ಜ್, ಗೋಲಿಬಾರ್ ಆದರೂ ನಾವು ಸುಮ್ಮನಿರುವುದಿಲ್ಲ. ಯಾವತ್ತೋ ಒಂದು ದಿನ ಸಾಯಬೇಕು, ಇಂದು ಅಥವಾ ನಾಳೆಯೇ ಸತ್ತರೂ ಏನೂ ಬದಲಾಗದು. ಇಂದು ಸರ್ಕಾರದ ಪ್ರತಿಕ್ರಿಯೆ ಸಿಗಲಿಲ್ಲ ಅಂದರೆ ನಾಳೆ 15ರಿಂದ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಂದ ಸಿಎಂ ಮನೆಗೆ ಮುತ್ತಿಗೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಇಂದೇ ಸಿಎಂ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರೆ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.
ಇದನ್ನೂ ಓದಿ: Anganawadi Workers: ಕೊರೆಯುವ ಚಳಿಯಲ್ಲಿ ಮುಂದುವರಿದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ