Site icon Vistara News

Anganwadi Recruitment: ಡಿಸೆಂಬರ್‌ನೊಳಗೆ 13,591 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿಗೆ ಸಿಎಂ ಸೂಚನೆ

Anganwadi Recruitment

ಬೆಂಗಳೂರು: 4180 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 9411 ಸಹಾಯಕಿಯರ ಹುದ್ದೆಗಳು (Anganwadi Recruitment) ಖಾಲಿಯಿದ್ದು, ಡಿಸೆಂಬರ್‌ ಅಂತ್ಯದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಗರ ಪ್ರದೇಶದಲ್ಲಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಬಾಲ ತಾಯಂದಿರ ಪ್ರಕರಣಗಳಲ್ಲಿ ದೂರುಗಳು ಬಂದಾಗ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗರಂ ಆದ ಸಿಎಂ, ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ರಾಜ್ಯದಲ್ಲಿ 2022-23ರ ಅವಧಿಯಲ್ಲಿ 13477 ಬಾಲ ಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿದ್ದು, ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕು.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆ ಮಾಡಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇದನ್ನೂ ಓದಿ | Dengue cases: ಡೆಂಗ್ಯೂ ತಡೆಗೆ ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ

ಸಿಎಸ್‌ಆರ್‌ ನೆರವಿನಲ್ಲಿ 2 ಸಾವಿರ ಶಾಲೆಗಳ ನಿರ್ಮಾಣ

ಬಜೆಟ್‌ನಲ್ಲಿ ಘೋಷಿಸಿರುವಂತೆ 2 ಸಾವಿರ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳನ್ನು ಸಿಎಸ್‌ಆರ್‌ ಅಡಿಯಲ್ಲಿ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ. ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಕಾಯ್ದೆ ಪ್ರಕಾರ ಕಳೆದ ಸಾಲಿನಲ್ಲಿ 8163 ಕೋಟಿ ಕಡ್ಡಾಯವಾಗಿ ಸಿಎಸ್‌ಆರ್‌ ಅಡಿ ವೆಚ್ಚ ಮಾಡಬೇಕಾಗಿತ್ತು. ಖಾಸಗಿ ಕಂಪೆನಿಗಳು ಈ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. 1190 ಕೋಟಿ ಕಳೆದ ವರ್ಷ ಸಿಎಸ್‌ಆರ್‌ ಅಡಿ ವೆಚ್ಚ ಮಾಡಿದ್ದು, ಶೇ.30ರಷ್ಟು ಮಾತ್ರ ಸಿಎಸ್‌ಆರ್‌ ಅಡಿ ಬಳಸುತ್ತಿವೆ ಎಂದು ಸಿಎಂ ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ಪೈಲೆಟ್‌ ಯೋಜನೆಯಾಗಿ ಆರಂಭಿಸಲಾಗಿದ್ದು, ಮೂರು ಪಂಚಾಯಿಯಿಗಳಿಗೆ ಒಂದು ಶಾಲೆಯಂತೆ ಈಗಾಗಲೇ 20 ಶಾಲೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಟೊಯೋಟಾ ಕಂಪನಿ ಒಂದೇ 20 ಕೋಟಿ ಸಿಎಸ್‌ಆರ್‌ ಅಡಿ ಒದಗಿಸಿದ್ದಾರೆ. ನಾವು 3 ಎಕರೆ ಜಮೀನು ಒದಗಿಸಬೇಕು. ಶಾಲೆಯ ಮಾದರಿಯನ್ನು ಮಾತ್ರ ನಾವು ಒದಗಿಸುತ್ತೇವೆ. ನಿರ್ಮಾಣ ಕಾರ್ಯವನ್ನು ಅವರೇ ಮಾಡುತ್ತಾರೆ.

ರಾಜ್ಯದಲ್ಲಿ ಈಗಾಗಲೇ 500 ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 2ಸಾವಿರ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದರು.

ಇದನ್ನೂ ಓದಿ | Road Safety: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಪ್ರಾಣ ಹೋದರೆ ಸಹಿಸಲ್ಲ: ಅಪಘಾತಗಳ ಹೆಚ್ಚಳಕ್ಕೆ ಸಿಎಂ ಗರಂ

ಶಾಲೆಯಿಂದ ಯಾವ ಮಕ್ಕಳೂ ಹೊರಗುಳಿಯಬಾರದು. ಪ್ರತಿ ವರ್ಷ 6ರಿಂದ 16 ವರ್ಷದೊಳಗಿನ ಮಕ್ಕಳ ಸಮೀಕ್ಷೆಯನ್ನು ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

Exit mobile version