ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕುರುಬ ಸಮಾಜದ ಹಿರಿಯ ಮುಖಂಡ, “ಹಿಂದ” ಅಧ್ಯಕ್ಷ ಕೆ. ಮುಕುಡಪ್ಪ ಹಗುರವಾಗಿ ಮಾತನಾಡಿ ಖಾಸಗಿ ಸಂಗತಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ಈಗ ಸಿದ್ದರಾಮಯ್ಯ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಮುಕುಡಪ್ಪ ಮನೆಗೆ ಮಸಿ ಬಳಿದು ಪ್ರತಿಭಟನೆ ನಡೆಸಲಾಗಿದೆ.
ವಿಜನಗರದಲ್ಲಿರುವ ಮುಕುಡಪ್ಪ ಮನೆ ಎದುರು ಜಮಾಯಿಸಿದ ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ಅಲ್ಲದೆ, ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಆಪ್ತ ಶಶಿಕುಮಾರ್ ಮುಕುಡಪ್ಪ ಮನೆ ಬಾಗಿಲಿಗೆ ಮಸಿ ಬಳಿದು ವಿರೋಧ ತೋರಿದರು.
ಮುಕುಡಪ್ಪ ಮನೆ ಮುಂದೆ ಧರಣಿ ಕುಳಿತ ಕಾಂಗ್ರೆಸ್ ಬೆಂಬಲಿಗರು, ತಮಟೆ ಬಾರಿಸಿ ಧಿಕ್ಕಾರ ಕೂಗಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಮುಕುಡಪ್ಪ ಹಾಗೂ ಅವರ ಪಕ್ಕದಲ್ಲಿ ಕುಳಿತಿದ್ದ ಪುಟ್ಟಸ್ವಾಮಿ ಅವರು ಕೂಡಲೇ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮುಕುಡಪ್ಪ ಹೇಳಿದ್ದೇನು?
“ಈ ಟಗರು ಇದೆಯಲ್ಲ ೧೦ ಕುರಿ ಮೇಲೆ ಹೋಗುತ್ತೆ. ಮುರುಘಾಸ್ವಾಮಿ ತರಹ ಇವನೂ ಕಳ್ಳ. ಕೆಲವು ಹೊರಗೆ ಬರುತ್ತದೆ. ಇನ್ನೂ ಕೆಲವು ಹೊರಗೆ ಬರುವುದಿಲ್ಲ. ಅವರು ಸಿದ್ದರಾಮಯ್ಯ… ಹುಷಾರು ಮಗ… ನಾನು ಅಷ್ಟೇ ನೀವೂ ಅಷ್ಟೇ… ಕೆಲವು ಹೊರಗೆ ಬರುತ್ತದೆ ಮತ್ತೆ ಕೆಲವು ಹೊರಗೆ ಬರುವುದಿಲ್ಲ. ಸಿದ್ದರಾಮಯ್ಯ ಹೊರಗೆ ಬರಲ್ಲ, ಮನೆಗೆ ಸೇರಿಕೊಳ್ಳುತ್ತಾನೆ” ಎಂದು ಮುಕುಡಪ್ಪ ಸುದ್ದಿಗೋಷ್ಠಿಗೂ ಮುನ್ನ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಮುಖಂಡ ಪುಟ್ಟಸ್ವಾಮಿ ಬಳಿ ಪಿಸುಮಾತಿನಲ್ಲಿ ಹೇಳಿದ್ದರು. ಇದು ಮಾಧ್ಯಮಗಳ ಮೈಕ್‌ನಲ್ಲಿ ರೆಕಾರ್ಡ್ ಆಗಿದ್ದವು. ಈ ಹೇಳಿಕೆಗೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Siddaramaiah | ಈ ಟಗರು 10 ಕುರಿಗಳ ಹಿಂದೆ ಹೋಗುತ್ತೆ, ಮುರುಘಾಶ್ರೀಯಂತೆ ಇವನೂ ಕಳ್ಳ: ಸಿದ್ದರಾಮಯ್ಯ ಬಗ್ಗೆ ಮುಕುಡಪ್ಪ ಪಿಸುಮಾತು!