ಬೆಂಗಳೂರು: ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ ಕುಕ್ಕರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪದಡಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಕಳೆದ ಮಾ.28 ರಂದು ಅನಿಲ್ ಶೆಟ್ಟಿ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮನೆಯ ನೆಲ ಮಹಡಿ ರೂಮ್‌ನಲ್ಲಿ 10 ಹಾಗೂ 494 ಎರಡನೇ ಮಹಡಿಯ ರೂಮ್‌ನಲ್ಲಿ ಒಟ್ಟು 504 ಫ್ರೆಶರ್ ಕುಕ್ಕರ್‌ಗಳು ಪತ್ತೆ ಆಗಿತ್ತು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿ ಹಾಗೂ ಕಂದಾಯ ಅಧಿಕಾರಿ ಆಗಿರುವ ವರಲಕ್ಷಮ್ಮ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕೋರ್ಟ್ ಅನುಮತಿ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸರ್ಚ್ ವಾರಂಟ್‌ಗೆ ಪಟ್ಟು ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು
ಕೋರಮಂಗಲ 4ನೇ ಬ್ಲಾಕ್‌ನಲ್ಲಿರುವ ಅನಿಲ್ ನಿವಾಸ ಹಾಗೂ ಕಚೇರಿ ಮೇಲೆ ಕಳೆದ ಮಾ.28ರ ರಾತ್ರಿಯಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ, ಸರ್ಚ್ ವಾರಂಟ್ ತೋರಿಸದ ಹೊರತು ಅಧಿಕಾರಿಗಳನ್ನು ಒಳಗೆ ಬಿಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ರಾಜಕೀಯ ಷಡ್ಯಂತ್ರದ ಆರೋಪ ಮಾಡಿದ್ದ ಅನಿಲ್
ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಅನಿಲ್ ಶೆಟ್ಟಿ, ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಆಗಿದೆ. ಶಾಸಕ ರಾಮಲಿಂಗಾರೆಡ್ಡಿ ಅವರು ಕ್ಷೇತ್ರದಲ್ಲಿ ಕಳಪೆ ಕುಕ್ಕರ್ ನೀಡಿದ್ದು, ಅವರ ಮನೆ ಮೇಲೆ ದಾಳಿ ಮಾಡದೆ, ನಾನಿಲ್ಲದಿರುವಾಗ ನಮ್ಮ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: Karnataka Election 2023: ಮುಗಿಯದ ಹಾಸನ ಜೆಡಿಎಸ್ ಅಭ್ಯರ್ಥಿ ಗೊಂದಲ; ಹೊಸ ಹೆಸರು ಹರಿಬಿಟ್ಟ ರೇವಣ್ಣ!
ರೆಡ್ಡಿ ಕೊಟ್ಟಿದ್ದನ್ನು ಕಿತ್ಕೊಂಡು ಬ್ರಾಂಡೆಡ್ ಕುಕ್ಕರ್ ಕೊಟ್ಟಿದ್ದ ಶೆಟ್ಟಿ
ಶಾಸಕ ರಾಮಲಿಂಗಾರೆಡ್ಡಿ ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ವಿತರಣೆ ಮಾಡಿದ್ದರು. ಆದರೆ, ಅದು ಕಳಪೆಯಾಗಿದೆ. ಅದನ್ನು ಸ್ಟವ್ ಮೇಲೆ ಇಟ್ಟರೆ ಸಿಡಿದು ಹೋದೀತು ಎಂದು ಹೇಳಿ ಅನಿಲ್ ಶೆಟ್ಟಿ ರಾಮಲಿಂಗಾರೆಡ್ಡಿ ಅವರು ಕೊಟ್ಟ ಕುಕ್ಕರ್ ಎಸೆದು ಹೊಸ ಬ್ರಾಂಡೆಡ್ ಕುಕ್ಕರ್ ವಿತರಣೆ ಮಾಡಿದ ವಿಡಿಯೊ ವೈರಲ್ ಆಗಿತ್ತು.