ರಾಮನಗರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ರಾಮನಗರ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ನೆಲೆ ಕಲ್ಪಿಸಲು ಕ್ಷೇತ್ರತ್ಯಾಗ ಮಾಡಿದ್ದಾರೆ. “ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾನೆ” ಎಂದು ಘೋಷಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ಅನಿತಾ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.
ರಾಮನಗರದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅನಿತಾ ಕುಮಾರಸ್ವಾಮಿ, “ರಾಮನಗರದಿಂದಲೇ ನಿಖಿಲ್ ಸ್ಪರ್ಧಿಸಲಿದ್ದಾನೆ. ನನ್ನ ಯಜಮಾನ ಹಾಗೂ ಮಾವನವರನ್ನು ಗೆಲ್ಲಿಸಿದ್ದೀರಿ. ಹಾಗೆಯೇ, ನನ್ನ ಪುತ್ರನಿಗೂ ಆಶೀರ್ವಾದ ಮಾಡಿ. ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರು. ಹಾಗಾಗಿ, ನಿಮ್ಮ ಮುಂದೆ ನೇರವಾಗಿ ಹೇಳುತ್ತಿದ್ದೇನೆ. ನಾನು ದೇವರ ಮುಂದೆ ನಿಂತಾಗ ನನ್ನ ಪತಿ ಹಾಗೂ ಮಗನಿಗೆ ಒಳ್ಳೆಯದಾಗಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ” ಎಂದು ಭಾವುಕರಾದರು.
ನನಗೂ ಆಶ್ಚರ್ಯ ಎಂದ ನಿಖಿಲ್
ನನ್ನ ಮಗನೇ ರಾಮನಗರದ ಜೆಡಿಎಸ್ ಅಭ್ಯರ್ಥಿ ಎಂದು ಅನಿತಾ ಕುಮಾರಸ್ವಾಮಿ ಘೋಷಿಸಿರುವುದಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, “ನನ್ನ ತಾಯಿಯ ನಿರ್ಧಾರ ನನಗೂ ಅಚ್ಚರಿ ತಂದಿದೆ. ಕಳೆದ ಎರಡು-ಮೂರು ವರ್ಷದಿಂದ ರಾಮನಗರದಲ್ಲಿ ಓಡಾಡುತ್ತಿದ್ದೇನೆ. ಜನ ನನಗೆ ಹೆಚ್ಚಿನ ಪ್ರೀತಿ, ವಿಶ್ವಾಸ ತೋರುತ್ತಾರೆ. ಇದನ್ನು ಗಮನಿಸಿಯೇ ನನ್ನ ಅಮ್ಮ ಘೋಷಣೆ ಮಾಡಿದ್ದಾರೆ” ಎಂದರು.
ಇದು ಅನಿತಾ ನಿರ್ಧಾರ: ಕುಮಾರಸ್ವಾಮಿ ಸ್ಪಷ್ಟನೆ
ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯ ಘೋಷಣೆಯ ನಿರ್ಧಾರವನ್ನು ಅನಿತಾ ಕುಮಾರಸ್ವಾಮಿ ಅವರೇ ತೆಗೆದುಕೊಂಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. “ರಾಮನಗರ ನಮ್ಮ ಕುಟುಂಬದ ಕಣ್ಣು. ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ನಿಖಿಲ್ ಸ್ಪರ್ಧಿಸಬೇಕು ಎಂದು ಯುವಕರು ಒತ್ತಾಯಿಸುತ್ತಿದ್ದರು. ರಾಮನಗರದ ಜನರೂ ನಿಖಿಲ್‌ಗೆ ಪ್ರೀತಿ ತೋರಿಸುತ್ತಿದ್ದಾರೆ. ಹಾಗಾಗಿ, ನಿಖಿಲ್ ಸ್ಪರ್ಧೆ ಬಗ್ಗೆ ಘೋಷಿಸಿದ್ದಾರೆ” ಎಂದು ತಿಳಿಸಿದರು. ಆದರೆ, ಅನಿತಾ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ | JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ